18ನೇ ಲೋಕಸಭೆಯ ಸ್ಪೀಕರ್  ಆಗಿ  ಓಂ ಬಿರ್ಲಾ ಮರು ಆಯ್ಕೆ
x
ಪ್ರಜಾಪ್ರಭುತ್ವದ ದೇವಾಲಯದಲ್ಲಿ ಪ್ರತಿ ಗಂಭೀರ ವಿಷಯದ ಬಗ್ಗೆ ಚರ್ಚೆ, ಸಂವಾದ ನಡೆಯಬೇಕು. ಆದರೆ, ಕಲಾಪಕ್ಕೆ ಯಾವುದೇ ಅಡ್ಡಿ ಅಥವಾ ಅಡೆತಡೆ ಇರಬಾರದು ಎಂದು ಬಿರ್ಲಾ ಹೇಳಿದರು.

18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಮರು ಆಯ್ಕೆ

ಸ್ಪೀಕರ್‌ ಅವರನ್ನು ಧ್ವನಿ ಮತದ ಮೂಲಕ ಆಯ್ಕೆ ಮಾಡಲಾಯಿತು


ಬಿಜೆಪಿ ಸಂಸದ ಓಂ ಬಿರ್ಲಾ ಅವರು ಬುಧವಾರ (ಜೂನ್ 26) 18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಬಿರ್ಲಾ ಅವರನ್ನು ಧ್ವನಿ ಮತದ ಮೂಲಕ ಸ್ಪೀಕರ್ ಎಂದು ಘೋಷಿಸಿದರು.

ಸ್ಪೀಕರ್‌ ಒಬ್ಬರು ಒಂದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿರುವುದು ಇದು ಐದನೇ ಬಾರಿ. ಮೂರನೇ ಬಾರಿಗೆ ಸಂಸದರಾಗಿರುವ ಬಿರ್ಲಾ ಅವರು ರಾಜಸ್ಥಾನ ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ ಗೊತ್ತುವಳಿಯನ್ನು ಬಹುಮತದಿಂದ ಅಂಗೀಕರಿಸಲಾಯಿತು.ತಾತ್ಕಾಲಿಕ ಸ್ಪೀಕರ್‌ ಭ‌‌ರ್ತೃಹರಿ ಮಹ್ತಾಬ್‌ ಅವರು ಆಯ್ಕೆಯನ್ನು ಘೋಷಿಸಿದರು. ಕಾಂಗ್ರೆಸ್‌ ಸಂಸದ ಕೆ ಸುರೇಶ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದ ವಿರೋಧ ಪಕ್ಷಗಳು, ಮತದಾನ ನಡೆಯಬೇಕೆಂದು ಒತ್ತಾಯಿಸಲಿಲ್ಲ. ಮಹ್ತಾಬ್‌ ʻಓ ಬಿರ್ಲಾ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆʼ ಎಂದು ಘೋಷಿಸಿದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸ್ಪೀಕರ್ ಪೀಠಕ್ಕೆ ಕರೆದೊಯ್ದರು. ಕಾಂಗ್ರೆಸ್‌ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಜತೆಗೂಡಿದರು. ಬಿರ್ಲಾ ಅವರಿಗೆ ಶುಭಾಶಯ ಕೋರಿದ ರಾಹುಲ್‌, ಪ್ರಧಾನಿ ಅವರ ಕೈ ಕುಲುಕಿದರು.

ಆನಂತರ, ಬಿರ್ಲಾ ಅವರನ್ನು ಮೋದಿ, ರಿಜಿಜು ಮತ್ತು ರಾಹುಲ್‌ ಗಾಂಧಿ ಸ್ಪೀಕರ್‌ ಪೀಠಕ್ಕೆ ಕರೆದೊಯ್ದರು. ಅವರನ್ನು ಸ್ವಾಗತಿಸಿದ ಮಹ್ತಾಬ್‌, ಇದು ನಿಮ್ಮ ಪೀಠ. ಕುಳಿತುಕೊಳ್ಳಿ ಎಂದು ಆಹ್ವಾನಿಸಿದರು.

ಗೌರವದ ವಿಷಯ-ಮೋದಿ: ನೀವು ಸ್ಪೀಕರ್‌ ಸ್ಥಾನಕ್ಕೆ ಎರಡನೇ ಬಾರಿ ಆಯ್ಕೆಯಾಗಿರುವುದು ಗೌರವದ ವಿಷಯ,ʼ ಎಂದು ಪ್ರಧಾನಿ ಹೇಳಿದರು. ʻನಾನು ಇಡೀ ಸದನದ ಪರವಾಗಿ ನಿಮಗೆ ಶುಭಾಶಯ ಕೋರುತ್ತೇನೆ ಮತ್ತು ಮುಂದಿನ 5 ವರ್ಷ ನಿಮ್ಮ ಮಾರ್ಗದರ್ಶನವನ್ನು ಎದುರು ನೋಡುತ್ತೇವೆʼ ಎಂದರು.

ʻಸಂಸದರಾಗಿ ಬಿರ್ಲಾ ಅವರ ಕೆಲಸಗಳು ನೂತನ ಸಂಸದರಿಗೆ ಸ್ಪೂರ್ತಿದಾಯಕʼ ಎಂದು ಪ್ರಧಾನಿ ಹೇಳಿದರು. ʻನಿಮ್ಮ ನಸುನಗೆ ಇಡೀ ಸದನವನ್ನು ಸಂತಸದಲ್ಲಿ ಇಡುತ್ತದೆ,ʼ ಎಂದು ಹೇಳಿದರು. ಬಿರ್ಲಾ ಅವರ ಹಿಂದಿನ ಅವಧಿಯನ್ನು ಸಂಸದೀಯ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಕರೆದ ಅವರು, ಕಳೆದ 70 ವರ್ಷಗಳಲ್ಲಿ ಅಂಗೀಕಾರವಾಗದ ಕಾನೂನುಗಳು ಅವರ ಎಚ್ಚರಿಕೆಯ ಕಣ್ಣೋಟದಡಿ ಅಂಗೀಕಾರಗೊಂಡವು ಎಂದು ಹೇಳಿದರು.

ಸ್ಪೀಕರ್‌ ಜನರ ಧ್ವನಿಯ ರಕ್ಷಕ: ರಾಹುಲ್‌ ಗಾಂಧಿ- ಇಂಡಿಯ ಒಕ್ಕೂಟದ ಪರವಾಗಿ ಶುಭಾಶಯ ಕೋರಿದ ರಾಹುಲ್‌ ಗಾಂಧಿ, ಈ ಸದನ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ ಮತ್ತು ಸ್ಪೀಕರ್‌ ಆ ಧ್ವನಿಯ ರಕ್ಷಕ ಎಂದು ಹೇಳಿದರು. ಸದನವನ್ನು ಎಷ್ಟು ಕ್ಷಮತೆಯಿಂದ ನಡೆಸಲಾಗುತ್ತದೆ ಎಂಬುದು ಮುಖ್ಯವಲ್ಲ; ಬದಲಾಗಿ, ಸದನದಲ್ಲಿ ಜನರ ಧ್ವನಿ ಎಷ್ಟು ಕೇಳಲ್ಪಡುತ್ತದೆ ಮತ್ತು ಪ್ರತಿನಿಧಿಸಲ್ಪಡುತ್ತದೆ ಎಂಬುದು ಮುಖ್ಯ ಎಂದು ಹೇಳಿದರು.

ʼಒಂದು ವೇಳೆ ಪ್ರತಿಪಕ್ಷಗಳಿಗೆ ಮಾತನ್ನಾಡಲು ಅವಕಾಶ ನೀಡದಿದ್ದರೆ, ಅದು ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಆಗಲಿದೆʼ ಎಂದ ಅವರು, ಸ್ಪೀಕರ್‌ ಪ್ರತಿಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

Read More
Next Story