ಒಡಿಶಾ: ರಾಜ್ಯಪಾಲರ ಪುತ್ರನ ಬಂಧನಕ್ಕೆ ಆಗ್ರಹ, ವಿಧಾನಸಭೆಯಲ್ಲಿ ಕೋಲಾಹಲ
x

ಒಡಿಶಾ: ರಾಜ್ಯಪಾಲರ ಪುತ್ರನ ಬಂಧನಕ್ಕೆ ಆಗ್ರಹ, ವಿಧಾನಸಭೆಯಲ್ಲಿ ಕೋಲಾಹಲ

ರಾಜ್ಯಪಾಲ ರಘುಬರ್ ದಾಸ್ ಅವರ ಪುತ್ರ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರ ನಿಷ್ಕ್ರಿಯತೆಯನ್ನು ಆರೋಪಿಸಿ, ಬಿಜೆಡಿ ನಾಯಕರು ಸಭಾತ್ಯಗ ಮಾಡಿದರು.


ಭುವನೇಶ್ವರ, ಜು.24 : ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ರಾಜ್ಯಪಾಲ ರಘುಬರ್ ದಾಸ್ ಅವರ ಪುತ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ವಿರೋಧ ಪಕ್ಷದ ಸದಸ್ಯರು ಗದ್ದಲ ಮುಂದುವರಿಸಿದ್ದರಿಂದ, ಒಡಿಶಾ ವಿಧಾನಸಭೆಯ ಕಲಾಪವು ಮೂರನೇ ದಿನವೂ ಅಸ್ತವ್ಯಸ್ತಗೊಂಡಿತು.

ಸದನ ಪ್ರಶ್ನೋತ್ತರ ಅವಧಿಗೆ ಸಭೆ ಸೇರಿದ ತಕ್ಷಣ, ಬಿಜೆಡಿ ನಾಯಕರು ಪೊಲೀಸರ ನಿಷ್ಕ್ರಿಯತೆಯನ್ನು ಆರೋಪಿಸಿ ಹೊರನಡೆದರು. ಆದರೆ, ಕಾಂಗ್ರೆಸ್ ಶಾಸಕರು ಸದನದ ಮುಂಭಾಗಕ್ಕೆ ನುಗ್ಗಿ, ಕೇಂದ್ರ ಬಜೆಟ್‌ನಲ್ಲಿ ಒಡಿಶಾದ ʻನಿರ್ಲಕ್ಷ್ಯʼದ ವಿರುದ್ಧ ಪ್ರತಿಭಟಿಸಿದರು.

ಜುಲೈ 7 ರಂದು ಪುರಿ ರಾಜಭವನದಲ್ಲಿ ಸಹಾಯಕ ಸೆಕ್ಷನ್ ಆಫೀಸರ್ (ಎಎಸ್ಒ) ಬೈಕುಂಠ ಪ್ರಧಾನ್ ಅವರ ಮೇಲೆ ರಾಜ್ಯಪಾಲರ ಪುತ್ರ ಲಲಿತ್ ಕುಮಾರ್ ಹಲ್ಲೆ ನಡೆಸಿದ್ದರು.

ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಸುರಮಾ ಪಧಿ ಅವರು ಸದನವನ್ನು ಮೊದಲು 11.30ಕ್ಕೆ, ಆನಂತರ ಮಧ್ಯಾಹ್ನ 12ಕ್ಕೆ ಮತ್ತು ನಂತರ ಸಂಜೆ 4ಕ್ಕೆ ಮುಂದೂಡಿದರು.

ವಿಧಾನಸಭೆಯಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಪಧಿ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರವು ʼರಾಜ್ಯಪಾಲರ ಮಗನನ್ನು ರಕ್ಷಿಸುತ್ತಿದೆʼ ಎಂದು ಆರೋಪಿಸಿರುವ ವಿರೋಧ ಪಕ್ಷ ಬಿಜೆಡಿ, ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಿದೆ. ಈ ಸಂಬಂಧ ಗೃಹ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಹೇಳಿಕೆ ನೀಡುವಂತೆ ಆಗ್ರಹಿಸಿದೆ.

ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಸೋಮವಾರ, ರಾಜ್ಯಪಾಲರ ಭಾಷಣವನ್ನು ಬಿಜೆಡಿ ಮತ್ತು ಕಾಂಗ್ರೆಸ್ ಬಹಿಷ್ಕರಿಸಿದ್ದವು.

Read More
Next Story