ಪುರಿಯ ರತ್ನ ಭಂಡಾರ ತೆರೆಯಲು ಕೀಲಿ ವಿಫಲ: ತನಿಖೆಗೆ ಆದೇಶ
x

ಪುರಿಯ ರತ್ನ ಭಂಡಾರ ತೆರೆಯಲು ಕೀಲಿ ವಿಫಲ: ತನಿಖೆಗೆ ಆದೇಶ

ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು46 ವರ್ಷಗಳ ಬಳಿಕ ದಾಸ್ತಾನು ಪರಿಶೀಲನೆ ಮತ್ತು ದುರಸ್ತಿಗೆ ತೆರೆಯಲಾಯಿತು. ಬಾಗಿಲು ತೆರೆಯುವಲ್ಲಿ ಕೀಲಿಗಳು ವಿಫಲವಾದ್ದರಿಂದ, ಬೀಗಗಳನ್ನು ಒಡೆಯಲಾಯಿತು.ಇದು ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.


ಪುರಿಯ ಜಗನ್ನಾಥ ದೇಗುಲದ ಖಜಾನೆ ರತ್ನಭಂಡಾರದ ಒಳಕೋಣೆಯನ್ನುತೆರೆಯುವಲ್ಲಿ ನಕಲು ಕೀಲಿಗಳು ಏಕೆ ವಿಫಲವಾಗಿವೆ ಎಂಬ ಕುರಿತು ಒಡಿಶಾ ಸರ್ಕಾರ ತನಿಖೆ ನಡೆಸಲಿದೆ.

ರತ್ನಭಂಡಾರದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಪಟ್ಟಿ ಮಾಡಲು ಮತ್ತು ದುರಸ್ತಿಗೊಳಿಸಲು 46 ವರ್ಷಗಳ ನಂತರ ಭಾನುವಾರ (ಜುಲೈ 14) ಮತ್ತೆ ತೆರೆಯಲಾಯಿತು.

ವಿಶೇಷ ಸಮಿತಿಯ ಸದಸ್ಯರು ಖಜಾನೆಯ ಒಳಕೋಣೆಯ ಬಾಗಿಲಿಗೆ ಹಾಕಿದ್ದ ಮೂರು ಬೀಗಗಳನ್ನು ತೆರೆಯಲು ಪ್ರಯತ್ನಿಸಿದರು. ಆದರೆ, ಪುರಿ ಜಿಲ್ಲಾಡಳಿತದ ಬಳಿ ಲಭ್ಯವಿದ್ದ ಎರಡು ನಕಲಿ ಕೀಲಿಗಳಿಂದ ಒಂದು ಬೀಗವನ್ನು ತೆರೆಯಲು ಸಾಧ್ಯವಾಗಲಿಲ್ಲ ಎಂದು ಜಗನ್ನಾಥ ದೇವಾಲಯದ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧೀ ಹೇಳಿದ್ದಾರೆ. ಎಂದರು.

ಸುಳ್ಳು ಹರಡಲಾಗಿದೆ: ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಮಾತನಾಡಿ, ʻಹಿಂದಿನ ಬಿಜೆಡಿ ಸರ್ಕಾರದ ಅವಧಿಯಲ್ಲಿ ರತ್ನ ಭಂಡಾರದ ನಕಲಿ ಕೀಲಿಗಳ ಲಭ್ಯತೆ ಬಗ್ಗೆ ಸುಳ್ಳು ಸುದ್ದಿ ಹರಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗುವುದು,ʼ ಎಂದು ಹೇಳಿದರು. ಜಗನ್ನಾಥ ದೇವಾಲಯವು ರಾಜ್ಯ ಸರ್ಕಾರದ ಕಾನೂನು ಇಲಾಖೆಗೆ ಒಳಪಟ್ಟಿದೆ.

ಏಪ್ರಿಲ್ 4, 2018 ರಂದು ರತ್ನ ಭಂಡಾರವನ್ನು ತೆರೆಯಲು ಸರ್ಕಾರ ಪ್ರಯತ್ನಿಸಿತ್ತು. ಆದರೆ, ಕೀಲಿ ಲಭ್ಯವಿರಲಿಲ್ಲ. ಕೆಲವು ದಿನಗಳ ನಂತರ ನಕಲಿ ಕೀಲಿಗಳು ಕಂಡುಬಂದಿವೆ ಎಂದು ಸರ್ಕಾರ ಹೇಳಿತ್ತು.

ʻಭಗವಾನ್ ಜಗನ್ನಾಥನ ಆಭರಣಗಳನ್ನು ಮುಟ್ಟಿದವರು ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇಂತಹ ಘಟನೆ ನಡೆಯದಿರಬಹುದು ಎಂಬ ಶಂಕೆಯಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ,ʼ ಎಂದು ಹರಿಚಂದನ್ ಹೇಳಿದರು.

ರಾಜಕೀಯ ಬಿರುಗಾಳಿ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರತ್ನ ಭಂಡಾರವನ್ನು ತೆರೆಯುವುದು ಪ್ರಮುಖ ರಾಜಕೀಯ ವಿಷಯವಾಗಿತ್ತು. 2000ರಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಡಿಯನ್ನು ಮಣಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತು.

12ನೇ ಶತಮಾನದ ದೇಗುಲದ ಖಜಾನೆ ನಾಪತ್ತೆಯಾಗಿರುವ ಕೀಲಿಗಳ ಕುರಿತು ತನಿಖೆಗೆ ರಚಿಸಿದ ನ್ಯಾ.ರಘುಬೀರ್ ದಾಸ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಬಿಜೆಡಿ ಹಿರಿಯ ನಾಯಕ ಅಮರ್ ಪ್ರಸಾದ್ ಸತ್ಪತಿ ಆಗ್ರಹಿಸಿದ್ದಾರೆ. ಸರ್ಕಾರವು ಆಯೋಗದ ವರದಿಯೊಂದಿಗೆ, ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಸತ್ಪತಿ ಹೇಳಿದರು.

ರತ್ನ ಭಂಡಾರದ ಕೀಲಿಗಳ ನಾಪತ್ತೆ ಕುರಿತು ತನಿಖೆ ನಡೆಸಲು ಜೂನ್ 2018 ರಲ್ಲಿ ಆಯೋಗವನ್ನು ರಚಿಸಲಾಗಿತ್ತು. ಸಮಿತಿ ಅದೇ ವರ್ಷದ ನವೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತು. ಆದರೆ, ಸರ್ಕಾರ ವರದಿಯನ್ನು ಸಾರ್ವಜನಿಕಗೊಳಿಸಲಿಲ್ಲ.

ಸ್ಪಷ್ಟ ಚಿತ್ರಣ ಬೇಕು: ರತ್ನ ಭಂಡಾರದ ಕೀಲಿಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಚಿತ್ರಣ ನೀಡಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಡಿ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿವೆ.

ʻಬೀಗಗಳನ್ನು ಏಕೆ ಒಡೆಯಲಾಯಿತು? ರತ್ನ ಭಂಡಾರದ ಮೂಲ ಕೀಲಿಗಳು ಎಲ್ಲಿವೆ? ಈ ಬಗ್ಗೆ ತಿಳಿದುಕೊಳ್ಳಲು ಜನ ಕಾತುರರಾಗಿದ್ದಾರೆ. ಆದ್ದರಿಂದ, ಸರ್ಕಾರ ಸಾರ್ವಜನಿಕರಿಗೆ ಸ್ಪಷ್ಟ ಚಿತ್ರಣ ನೀಡಬೇಕು,ʼ ಎಂದು ಒಡಿಶಾ ಕಾಂಗ್ರೆಸ್ ವಕ್ತಾರ ಬಿಸ್ವರಂಜನ್ ಮೊಹಂತಿ ಹೇಳಿದ್ದಾರೆ.

ಭಾನುವಾರ ನಕಲು ಕೀಲಿ ಬಳಸಿ, ಬೀಗಗಳನ್ನು ತೆರೆಯಲು ಸಾಧ್ಯವಾಗದ ಕಾರಣ ವಿಶೇಷ ಸಮಿತಿ ಸದಸ್ಯರು ಬೀಗಗಳನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಒಡೆದು, ಒಳಗಿನ ಕೋಣೆಗೆ ಪ್ರವೇಶಿಸಿದರು ಎಂದು ಪಾಧೀ ಹೇಳಿದರು.

ದೇವಾಲಯದ ನೆಲಮಾಳಿಗೆಯಲ್ಲಿರುವ ರತ್ನ ಭಂಡಾರ ಎರಡು ಭಾಗಗಳನ್ನು ಹೊಂದಿದೆ. ಹೊರಕೋಣೆಯಲ್ಲಿ ದಿನನಿತ್ಯ ಬಳಕೆಯ ಆಭರಣಗಳನ್ನು ಮತ್ತು ಒಳ ಕೋಣೆಯಲ್ಲಿ ಹಲವು ಆಭರಣಗಳನ್ನು ಇರಿಸಲಾಗಿದೆ.

Read More
Next Story