
ಹೆತ್ತವರ ಶವ ಕಾಯುತ್ತಾ ದಟ್ಟ ಅರಣ್ಯದಲ್ಲಿ ರಾತ್ರಿ ಕಳೆದ 5 ವರ್ಷದ ಕಂದಮ್ಮ!
ಒಡಿಶಾದ ದಿಯೋಗಢ್‌ನಲ್ಲಿ ದಂಪತಿಗಳು ಮಗನಿಗೂ ವಿಷ ನೀಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಬಾಲಕ ಬದುಕುಳಿದು, ಇಡೀ ರಾತ್ರಿ ಕಾಡಿನಲ್ಲಿ ಹೆತ್ತವರನ್ನು ಕಾಯುತ್ತಾ ಕುಳಿತಿದ್ದ ಘಟನೆ ಇಡೀ ಮನಕಲುಕುವಂತೆ ಮಾಡಿದೆ.
ಮೈ ಹೆಪ್ಪುಗಟ್ಟಿಸುವ ಚಳಿಯಲ್ಲಿ, ಪ್ರಾಣ ಕಳೆದುಕೊಂಡ ತಂದೆ ಮತ್ತು ಪ್ರಜ್ಞೆ ತಪ್ಪಿದ ತಾಯಿಯನ್ನು ರಕ್ಷಿಸಲು 5 ವರ್ಷದ ಪುಟ್ಟ ಬಾಲಕನೊಬ್ಬ ಇಡೀ ರಾತ್ರಿ ಏಕಾಂಗಿಯಾಗಿ ದಟ್ಟ ಅರಣ್ಯದ ನಡುವೆ ಕಳೆದಿರುವಂತಹ ಘಟನೆ ವರದಿಯಾಗಿದೆ. ಒಡಿಶಾದ ದಿಯೋಗಢ್ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ (ಡಿಸೆಂಬರ್ 29) ಮುಂಜಾನೆ ರಸ್ತೆಯಲ್ಲಿ ಹೋಗುತ್ತಿದ್ದವರ ಬಳಿ ಬಾಲಕ ಸಹಾಯ ಕೇಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ
ಕುಂದ್ಹೈಗೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಜಿಯಾನಂತಪಾಲಿ ಗ್ರಾಮದ ನಿವಾಸಿಗಳಾದ ದುಷ್ಮಂತ್ ಮಾಝಿ ಮತ್ತು ರಿಂಕಿ ಮಾಝಿ ದಂಪತಿಗಳು ಮೋಟಾರ್ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ದಂಪತಿಗಳು ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿ, ಅರಣ್ಯದೊಳಗೆ ಸುಮಾರು ಒಂದು ಕಿಲೋಮೀಟರ್ ನಡೆದು ಹೋಗಿ ವಿಷ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ.
ಬಾಲಕನ ಅದೃಷ್ಟದ ಬದುಕು
ದಂಪತಿಗಳು ತಮ್ಮ 5 ವರ್ಷದ ಮಗನಿಗೂ ವಿಷ ಕುಡಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಆಶ್ಚರ್ಯಕರ ಎಂಬಂತೆ ವಿಷದ ಅಂಶ ಆ ಬಾಲಕನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ವಿಷ ಸೇವಿಸಿದ ಒಂದು ಗಂಟೆಯಲ್ಲೇ ತಂದೆ ದುಷ್ಮಂತ್ ಸಾವನ್ನಪ್ಪಿದರೆ, ತಾಯಿ ರಿಂಕಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಭಯಾನಕ ಕಾಡಿನಲ್ಲಿ, ಕೊರೆಯುವ ಚಳಿಯಿದ್ದರೂ ಆ ಪುಟ್ಟ ಬಾಲಕ ಹೆದರದೆ ಇಡೀ ರಾತ್ರಿ ತನ್ನ ಹೆತ್ತವರ ಪಕ್ಕದಲ್ಲೇ ಕಾವಲು ಕುಳಿತಿದ್ದ.
ಸಹಾಯಕ್ಕಾಗಿ ಅಂಗಲಾಚಿದ ಬಾಲಕ
ಸೂರ್ಯೋದಯದ ನಂತರ ಅರಣ್ಯದಿಂದ ಹೊರಬಂದ ಬಾಲಕ, ಮುಖ್ಯ ರಸ್ತೆಗೆ ಬಂದು ದಾರಿಹೋಕರ ಬಳಿ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ವಿಷಯ ತಿಳಿದ ತಕ್ಷಣ ದಿಯೋಗಢ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಧೀರಜ್ ಚೋಪ್ದರ್ ಸ್ಥಳಕ್ಕೆ ಧಾವಿಸಿದರು. "ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆತನ ಆರೋಗ್ಯ ಸ್ಥಿರವಾಗಿದ್ದು, ಅಜ್ಜ-ಅಜ್ಜಿಯ ವಶಕ್ಕೆ ಒಪ್ಪಿಸಲಾಗಿದೆ," ಎಂದು ಎಎಸ್‌ಪಿ ತಿಳಿಸಿದ್ದಾರೆ. ದುರದೃಷ್ಟವಶಾತ್, ತಾಯಿ ರಿಂಕಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

