
ಒಡಿಶಾ ಸಾಮೂಹಿಕ ಅತ್ಯಾಚಾರ ಪ್ರಕರಣ: 10 ಜನರ ಬಂಧನ
ಖಾಸಗಿ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ತನ್ನ ಸಹಪಾಠಿ ಜತೆಗೆ ಗೋಪಾಲಪುರ ಬೀಚ್‌ಗೆ ತೆರಳಿದ್ದಳು. ಈ ವೇಳೆ ದುಷ್ಕರ್ಮಿಗಳು ಆಕ್ರಮಿಸಿಕೊಂಡು ಅತ್ಯಾಚಾರ ನಡೆಸಿದ್ದಾರೆ.
ಒಡಿಶಾದ ಪ್ರಸಿದ್ಧ ಗೋಪಾಲಪುರ ಬೀಚ್‌ನಲ್ಲಿ 20 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ 10 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆಘಾತಕಾರಿ ಘಟನೆ ಭಾನುವಾರ ರಾತ್ರಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ತನ್ನ ಸಹಪಾಠಿಯಾದ ಗೆಳೆಯನೊಂದಿಗೆ ಗೋಪಾಲಪುರ ಬೀಚ್‌ಗೆ ತೆರಳಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಗೋಪಾಲಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಯುವತಿ, ತಾನು ಮತ್ತು ತನ್ನ ಗೆಳೆಯ ಬೀಚ್‌ನ ಒಂಟಿಯಾದ ಸ್ಥಳದಲ್ಲಿ ಕುಳಿತಿದ್ದಾಗ, 10 ಜನರ ಗುಂಪು ತಮ್ಮತ್ತ ಬಂದು ತನ್ನ ಗೆಳೆಯನನ್ನು ಸುತ್ತುವರೆದು, ತನ್ನ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.
ಬಂಧನ ಮತ್ತು ತನಿಖೆ
"ಪ್ರಾರಂಭದಲ್ಲಿ ಏಳು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ನಂತರ, ಎಲ್ಲ 10 ಆರೋಪಿಗಳನ್ನೂ ಬಂಧಿಸಲಾಯಿತು," ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಇನ್ನೊಂದು ರಾಜ್ಯಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯುವತಿಯು ಇತರ ಮೂರು ಮಹಿಳೆಯರೊಂದಿಗೆ ಖಾಸಗಿ ಮೆಸ್‌ನಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಗಂಜಾಂ ಜಿಲ್ಲೆಯಲ್ಲಿರುವ ಗೋಪಾಲಪುರ ಬೀಚ್‌ಗೆ ದೂರದ ಸ್ಥಳಗಳಿಂದ ಪ್ರವಾಸಿಗರು ಭೇಟಿ ನೀಡುವ ಕಾರಣ, ಈ ಘಟನೆ ರಾಜ್ಯಾದ್ಯಂತ ಆಘಾತವನ್ನುಂಟು ಮಾಡಿದೆ.