CUET-UG ಮರುಪರೀಕ್ಷೆ ಜುಲೈ 19 ರಂದು
x

CUET-UG ಮರುಪರೀಕ್ಷೆ ಜುಲೈ 19 ರಂದು

ಈ ವರ್ಷ CUET-UG ಗೆ 14 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 41ರಷ್ಟು ಹೆಚ್ಚಳ.


ನವದೆಹಲಿ- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜುಲೈ 19 ರಂದು 1000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸಿಯುಇಟಿ-ಯುಜಿ ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜುಲೈ 7 ರಂದು ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ- UG 2024 ರ ತಾತ್ಕಾಲಿಕ ಉತ್ತರದ ಕೀ ಬಿಡು ಗಡೆಗೊಳಿಸಿ, ಜುಲೈ 15 ಮತ್ತು 19 ರ ನಡುವೆ ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು.

ಏಜೆನ್ಸಿ ಭಾನುವಾರ ಮರುಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದರೂ, ಅಂತಿಮ ಉತ್ತರದ ಕೀ ಪ್ರಕಟಿಸಿಲ್ಲ ಮತ್ತು ಎರಡು ವಾರಕ್ಕೂ ಹೆಚ್ಚು ವಿಳಂಬವಾಗಿರುವ ಫಲಿತಾಂಶದ ಘೋಷಣೆ ಬಗ್ಗೆ ಮೌನ ತಳೆದಿದೆ. ನೀಟ್‌, ನೆಟ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳ ಹಿನ್ನೆಲೆಯಲ್ಲಿ ಸಿಯುಇಟಿ-ಯುಜಿ ಫಲಿತಾಂಶ ವಿಳಂಬವಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೂಲಗಳ ಪ್ರಕಾರ, ಅಭ್ಯರ್ಥಿಗಳು ಆಯ್ಕೆ ಮಾಡದ ಭಾಷೆಯ ಪ್ರಶ್ನೆಪತ್ರಿಕೆಗಳನ್ನು ವಿತರಿಸಿರುವುದು ಮರು ಪರೀಕ್ಷೆಗೆ ಒಂದು ಕಾರಣ. 1000ಕ್ಕೂ ಅಧಿಕ ಅಭ್ಯರ್ಥಿಗಳು ಆರು ರಾಜ್ಯಗಳಲ್ಲಿ ಹರಡಿದ್ದಾರೆ. ಇವರಲ್ಲಿ 250 ಅಭ್ಯರ್ಥಿಗಳು ಹಜಾರಿ ಬಾಗ್‌ನ ಓಯಸಿಸ್ ಪಬ್ಲಿಕ್ ಸ್ಕೂಲ್‌ನಿಂದ ಬಂದವರು. ಈ ಶಾಲೆ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ‌ ಎದುರಿಸುತ್ತಿದೆ.

ಭಾನುವಾರ ಹೊರಡಿಸಿದ ಅಧಿಕೃತ ಅಧಿಸೂಚನೆ ಪ್ರಕಾರ, ಸಿಯುಇಟಿ-ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಜೂನ್ 30, 2024 ರವರೆಗೆ ಸ್ವೀಕರಿಸಿದ ಕುಂದುಕೊರತೆಗಳು ಮತ್ತು ಜುಲೈ 7-9 ರ ನಡುವೆ savetug@nta.ac.in ಗೆ ಕಳುಹಿಸಿದ ದೂರುಗಳನ್ನು ಪರಿಶೀಲಿಸಲಾಗಿದೆ. ʻಈ ಕುಂದುಕೊರತೆಗಳ ಆಧಾರದಲ್ಲಿ ಜುಲೈ 19, 2024 ರಂದು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯಲ್ಲಿ ಮರು ಪರೀಕ್ಷೆ ನಡೆಸಲಾಗುವುದು,ʼ ಎಂದು ಅಧಿಸೂಚನೆ ಹೇಳಿದೆ.

ಹೈಬ್ರಿಡ್‌ ಮಾದರಿ ಪರೀಕ್ಷೆ: ಸಿಯುಇಟಿ-ಯುಜಿ ಪರೀಕ್ಷೆಯನ್ನು ಪರೀಕ್ಷೆ ದಿನದ ಹಿಂದಿನ ರಾತ್ರಿ ರದ್ದುಗೊಳಿಸಲಾಗಿತ್ತು.ಆನಂತರ ದಿಲ್ಲಿಯಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. 15 ವಿಷಯಗಳಿಗೆ ಲೇಖನಿ-ಕಾಗದ ವಿಧಾನದಲ್ಲಿ ಮತ್ತು ಇತರ 48 ವಿಷಯಗಳಿಗೆ ಕಂಪ್ಯೂಟರ್ ಆಧರಿತ ವಿಧಾನ(ಸಿಬಿಟಿ)ದಲ್ಲಿ ನಡೆಯಿತು.

ಈ ವರ್ಷ 261 ಕೇಂದ್ರ, ರಾಜ್ಯ, ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶಕ್ಕೆ 13.4 ಲಕ್ಷ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

Read More
Next Story