
ತಲೆಮಾರುಗಳನ್ನು ಬೆಸೆದ ತಂತ್ರಜ್ಞಾನ: ಕೇರಳವೀಗ ಶೇ.100 ಡಿಜಿಟಲ್ ಸಾಕ್ಷರ ರಾಜ್ಯ
ಪುಲ್ಲಂಪಾರ ಎಂಬ ಪುಟ್ಟ ಪಂಚಾಯ್ತಿಯಲ್ಲಿ ಚಿಗುರೊಡೆದ ‘ಡಿಜಿ ಕೇರಳಂ’ ಯೋಜನೆ ಈಗ ರಾಜ್ಯದಾದ್ಯಂತ ವಿಸ್ತರಿಸಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು 21 ಲಕ್ಷಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿದ್ದಾರೆಂದರೆ ತಮಾಷೆಯ ಮಾತಲ್ಲ.
ಕೇರಳದ ಎರ್ನಾಕುಲಂ ಜಿಲ್ಲೆಯ ಅಶಮನ್ನೂರಿನ 105 ವರ್ಷದ ಅಬ್ದುಲ್ಲಾ ಮೌಲವಿ ಬಾಫಕಿ ಅವರು ತಮ್ಮ ವೃದ್ಧಾಪ್ಯದಲ್ಲಿ ಯೂಟ್ಯೂಬ್ ವೀಡಿಯೊ ನೋಡುವುದನ್ನು ಹೊಸ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಹಿಂದೊಮ್ಮೆ ಡಿಜಿಟಲ್ ಜಗತ್ತಿನ ಬಗ್ಗೆ ಪರಿಚಯವೇ ಇಲ್ಲದ ಇವರು, ಇದೀಗ ರಾಜ್ಯ ಸರ್ಕಾರದ ಡಿಜಿ ಕೇರಳ ಅಭಿಯಾನದ ಮೂಲಕ ಡಿಜಿಟಲ್ ಸಾಕ್ಷರರಾದ 91 ರಿಂದ 105 ವರ್ಷ ವಯಸ್ಸಿನ 15,221 ಮಂದಿ ಹಿರಿಯ ನಾಗರಿಕರಲ್ಲಿ ಒಬ್ಬರಾಗಿದ್ದಾರೆ.
ಅವರು ಈ ವರೆಗಿನ ತಮ್ಮ ಬಹುಪಾಲು ಜೀವನವನ್ನು ತಂತ್ರಜ್ಞಾನರಹಿತವಾಗಿಯೇ ಕಳೆದವರು. ಈಗ ಅವರಿಗೆ, ಆನ್ಲೈನ್ ಮೂಲಕ ಸಂಪರ್ಕಿಸುವ, ಕಲಿಯುವ ಮತ್ತು ಸಂವಹನ ಮಾಡುವ ಸಾಮರ್ಥ್ಯ ದಕ್ಕಿದೆ. ಅದು ಅವರಲ್ಲಿ ಹೊಸತನ ಮತ್ತು ಹುಮ್ಮಸ್ಸಿಗೆ ಕಾರಣವಾಗಿದೆ.
"ಅವರು 35 ವರ್ಷಗಳ ಕಾಲ ಧಾರ್ಮಿಕ ಶಿಕ್ಷಕರಾಗಿ ಕೆಲಸ ಮಾಡಿದವರು ಮತ್ತು ಇಮಾಮ್ ಆಗಿಯೂ ಸೇವೆ ಸಲ್ಲಿಸಿದ್ದರು. ಈಗ, ಯೂಟ್ಯೂಬ್ನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗುತ್ತಿರುವುದು ಇನ್ನಿಲ್ಲದ ಸಂತೋಷ ತಂದಿದೆ. ಅವರೀಗ ಯೂಟ್ಯೂಬ್ನಲ್ಲಿ ಬ್ರೌಸ್ ಮಾಡುವುದರಲ್ಲಿ ನುರಿತರಾಗಿದ್ದಾರೆ, ಕೆಲವೊಮ್ಮೆ ಫೇಸ್ಬುಕ್ಗೆ ಲಾಗ್ ಇನ್ ಆಗುತ್ತಾರೆ ಮತ್ತು ಅವರ ಮರಿಮಗಳಿಂದ ಬರುವ ವಾಟ್ಸಾಪ್ ವೀಡಿಯೊ ಕರೆಗಳನ್ನು ಸಹ ನಿರ್ವಹಿಸಬಲ್ಲರು" ಎಂದು ಅವರ ಮಗ ಫೈಜಲ್ ಹೇಳುತ್ತಾರೆ.
ಎಲ್ಎಸ್ಜಿಡಿ ಸಚಿವರಾದ ಎಂ.ಬಿ. ರಾಜೇಶ್ ಅವರು ಮೌಲವಿಯವರ ಡಿಜಿಟಲ್ ಪಯಣಕ್ಕೆ ಅಚ್ಚರಿಯ ಭೇಟಿ ನೀಡಿದಾಗ ವಿಶೇಷ ಗೌರವ ಸಿಕ್ಕಿತು. ಸಚಿವರು ಅವರಿಗೆ ವೈಯಕ್ತಿಕವಾಗಿ ಸ್ಮಾರ್ಟ್ಫೋನ್ ಹಸ್ತಾಂತರಿಸಿದರು, ಇದು ಕೇವಲ ಉಡುಗೊರೆಯಲ್ಲ, ಬದಲಾಗಿ ತಂತ್ರಜ್ಞಾನದ ಮೂಲಕ ತಲೆಮಾರುಗಳ ನಡುವೆ ಬೆಸೆಯುವ ಸೇತುವೆ. ಇಂದು, ಮೌಲವಿ ಅವರು “ತಮ್ಮ ಸೈಬರ್ ಸಂಗಾತಿಗಳೊಂದಿಗೆ” ಸಮಯ ಕಳೆಯಲು ಸಂತೋಷವಾಗುತ್ತಿದೆ ಎಂದು ಹೇಳುತ್ತಾರೆ, ಇದು ಅವರಿಗೆ ಎಂದೂ ಕೂಡ ಊಹಿಸಲಾಗದ ಜಗತ್ತು.
ಸ್ಮಾರ್ಟ್ಫೋನ್ ತಂದ ಬದಲಾವಣೆ
ತಿರುವನಂತಪುರಂನ ಪುಲ್ಲಂಪಾರದಲ್ಲಿರುವ 79 ವರ್ಷದ ಸರಸು ತಮ್ಮ ಮಗನ ಆತ್ಮಹತ್ಯೆಯ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದರು. ಜಾನಪದ ಗಾಯಕಿ ಮತ್ತು ಎಂನರೇಗಾ ಕಾರ್ಯಕರ್ತೆಯೂ ಆಗಿರುವ ಅವರು ಆ ಬಳಿಕದ ತಮ್ಮ ದಿನಗಳನ್ನು ಒಬ್ಬಂಟಿಯಾಗಿ ಕಳೆಯುತ್ತಿದ್ದರು. ಒಂದೆಡೆ ಭಾವನಾತ್ಮಕ ಆಘಾತ ಮತ್ತು ಇನ್ನೊಂದು ಕಡೆ ಆರ್ಥಿಕ ಸಂಕಷ್ಟ ಎರಡನ್ನೂ ನಿಭಾಯಿಸಲು ಅವರು ಹೋರಾಟ ನಡೆಸಿದ್ದರು. ಅತಿಯಾದ ಬಡತನ ನಿರ್ಮೂಲನೆಗೆಂದು ಗುರುತಿಸಲಾದ ಕುಟುಂಬಗಳ ಸರ್ಕಾರದ ಪಟ್ಟಿಯಲ್ಲಿ ಅವರ ಹೆಸರು ಕೂಡ ಸೇರಿತ್ತು.
ಈ ನಡುವೆ ಅವರು ಸ್ಮಾರ್ಟ್ಫೋನ್ ಬಳಸಲು ಕಲಿತರು. ಆ ಬಳಿಕ ಸರಸು ಅವರ ಜೀವನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತು. ಡಿಜಿಟಲ್ ಜಗತ್ತಿನಲ್ಲಿ ಒಂದು ಚಿಕ್ಕ ಹೆಜ್ಜೆಯಾಗಿ ಆರಂಭವಾದ ಇದು, ಅವರಿಗೆ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯಿತು. ಇಂದು, ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ, ಅಲ್ಲಿ ತಮ್ಮ ಹಾಡುಗಳನ್ನು ಹಂಚಿಕೊಳ್ಳುತ್ತಾರೆ. ಕಷ್ಟದ ಜೀವನದ ಪರಿಣಾಮವಾಗಿ ತೆರೆಮರೆಗೆ ಸರಿದಿದ್ದ ಜಾನಪದ ಸಂಗೀತದ ಮೇಲಿನ ಅವರ ಪ್ರೀತಿಯು ಮತ್ತೆ ಚಿಗುರೊಡೆದಿದೆ. ಇದರ ಜೊತೆಗೆ, ಈ ಸಾಧನವು ಅವರ ಕುಟುಂಬಕ್ಕೆ ಸೇತುವೆಯಾಗಿದೆ; ಈಗ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಮಾತನಾಡುತ್ತಾರೆ, ಮೊಮ್ಮಕ್ಕಳೊಂದಿಗೆ ಚಾಟ್ ಮಾಡುತ್ತಾರೆ ಮತ್ತು ನಿಯಮಿತ ವೀಡಿಯೊ ಕರೆಗಳ ಮೂಲಕ ಸಂಬಂಧಿಕರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಅವರಿಗೆ ಸಾಧ್ಯವಾಗಿದೆ.

105 ವರ್ಷ ವಯಸ್ಸಿನ ಅಬ್ದುಲ್ಲಾ ಮೌಲವಿ ಬಾಫಕಿ ಅವರ ಮನೆಗೆ ಅಚ್ಚರಿಯ ಭೇಟಿ ನೀಡಿದ ಕೇರಳದ ಸಚಿವ ಎಂ.ಬಿ.ರಾಜೇಶ್.
“ಸ್ವಯಂಸೇವಕರು ನಮಗೆ ಫೋನ್ನಲ್ಲಿ ಫೋಟೋ ತೆಗೆಯುವುದು ಮತ್ತು ವೀಡಿಯೊ ನೋಡುವುದು ಹೇಗೆ ಎಂದು ತೋರಿಸಿದಾಗ ಆಶ್ಚರ್ಯವಾಯಿತು. ನಾವು ಕಲಿಯಲು ಶುರುಮಾಡಿದ್ದು ಹಾಗೆ. ಆಗ ನನ್ನಲ್ಲಿ ಸ್ಮಾರ್ಟ್ಫೋನ್ ಇರಲಿಲ್ಲ, ಹಾಗಾಗಿ ನಾನು ಎಂನರೇಗಾದಿಂದ ಗಳಿಸಿದ ಹಣದಲ್ಲಿ 5,000 ರೂಪಾಯಿಗೆ ಒಂದು ಫೋನ್ ಖರೀದಿಸಿದೆ. ನನ್ನ ಬಳಿ ಟಿವಿ ಕೂಡ ಇಲ್ಲ, ಹಾಗಾಗಿ ಇದು ಈಗ ನನ್ನ ಸಂಗಾತಿ. ಈ ಫೋನ್ ಸ್ವೈಪ್ ಮಾಡಿ ಎಲ್ಲವನ್ನೂ ನೋಡುತ್ತೇನೆ. ನಂತರ, ಯೂಟ್ಯೂಬ್ನಲ್ಲಿ ಹಾಡಲೂ ಶುರುಮಾಡಿದೆ” ಎಂದು ಸರಸು ಹೆಮ್ಮೆಯಿಂದ ಹೇಳುತ್ತಾರೆ.
ಹಾಗಿದ್ದೂ ಅವರು ರಾಜ್ಯದ ತೀವ್ರ ಬಡತನ ನಿರ್ಮೂಲನಾ ಕಾರ್ಯಕ್ರಮದ ಭಾಗವೂ ಆಗಿದ್ದಾರೆ. ಆ ಭಾಗವಾಗಿ ‘ಲೈಫ್ ಮಿಷನ್’ ಅಡಿಯಲ್ಲಿ ಅವರಿಗೆ ಹಂಚಿಕೆ ಮಾಡಲಾದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ಹೀಗಾಗಿ, ಹಲವು ಸರ್ಕಾರಿ ಯೋಜನೆಗಳು ಒಂದೇ ವ್ಯಕ್ತಿಯ ಜೀವನದಲ್ಲಿ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಅವರು ಜೀವಂತ ಸಾಕ್ಷಿ.
ಮುನ್ನುಡಿ ಬರೆದ ಪುಲ್ಲಂಪಾರ ಗ್ರಾಮ
ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ತಿರುವನಂತಪುರಂ ಜಿಲ್ಲೆಯ ಪುಲ್ಲಂಪಾರ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದ ಕಥೆ ಆರಂಭವಾಯಿತು. ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು ತಮ್ಮ ಕೂಲಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಎಂದು ತಿಳಿದುಕೊಳ್ಳಲು ಯಾವುದೇ ಮಾರ್ಗವಿಲ್ಲದೆ ಚಿಂತಿತರಾಗಿದ್ದರು. ಆ ಪ್ರದೇಶದಲ್ಲಿ ಇದ್ದುದು ಒಂದೇ ಒಂದು ರಾಷ್ಟ್ರೀಕೃತ ಬ್ಯಾಂಕ್. ಲಾಕ್ಡೌನ್ ಸಮಯದಲ್ಲಿ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಹೆಚ್ಚಿನವರಿಗೆ ಇ-ಬ್ಯಾಂಕಿಂಗ್ ಪರಿಚಯವೂ ಇರಲಿಲ್ಲ ಮತ್ತು ಅಗತ್ಯ ತಂತ್ರಜ್ಞಾನವೂ ಇರಲಿಲ್ಲ. ಆಗ ಪಂಚಾಯತ್ ಯೋಚಿಸಿದ್ದೇನೆಂದರೆ: ಹೇಗಾದರೂ ಮಾಡಿ ಅವರನ್ನು ಡಿಜಿಟಲ್ ಜ್ಞಾನಿಗಳನ್ನಾಗಿ ಮಾಡಲು ಸಾಧ್ಯವೇ?
“ನಾವು ಎದುರಿಸಿದ ಬಹುದೊಡ್ಡ ಅಡಚಣೆ ಎಂದರೆ ಸ್ಥಳೀಯರಲ್ಲಿ ಸ್ಮಾರ್ಟ್ಫೋನ್ಗಳ ಕೊರತೆ ಮತ್ತು ಅನೇಕ ಪ್ರದೇಶಗಳಲ್ಲಿ ಕಳಪೆ ನೆಟ್ವರ್ಕ್ ಸಂಪರ್ಕ. ಆದರೂ, ಪಂಚಾಯತ್ ಪಟ್ಟು ಬಿಡಲಿಲ್ಲ. ಎಂಪಿ ಜಾನ್ ಬ್ರಿಟ್ಟಾಸ್ ಅವರ ಪ್ರಯತ್ನಗಳ ಮೂಲಕ ಆ ಪ್ರದೇಶಗಳಿಗೆ ಮೊಬೈಲ್ ಸಂಪರ್ಕ ವಿಸ್ತರಿಸಲಾಯಿತು" ಎಂದು ಪುಲ್ಲಂಪಾರ ಪಂಚಾಯತ್ ಅಧ್ಯಕ್ಷ ರಾಜೇಶ್ ಪಿ.ವಿ. ಹೇಳುತ್ತಾರೆ.
ಡಿಜಿ ಪುಲ್ಲಂಪಾರ ಉಪಕ್ರಮವನ್ನು ಸ್ಥಳೀಯವಾಗಿ ರೂಪಿಸಿ ಸಮುದಾಯದ ಪ್ರಯತ್ನವಾಗಿ ಜಾರಿಗೆ ತರಲಾಯಿತು. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸ್ವಯಂಸೇವಕರು ಸಂಪೂರ್ಣವಾಗಿ ತೊಡಗಿಸಿಕೊಂಡರು, ಇದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಮೂಲಭೂತ ಡಿಜಿಟಲ್ ಅಪ್ಲಿಕೇಶನ್ಗಳನ್ನು ಬಳಸಬಹುದೆಂದು ಖಚಿತಪಡಿಸಿಕೊಂಡರು.
ಕೈಜೋಡಿಸಿದ ಸಮುದಾಯ
ಆರಂಭದಲ್ಲಿ ಸಂಸ್ಥೆಯು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್, 15 ವಾರ್ಡ್‌ಗಳಲ್ಲಿ ಮನೆ-ಮನೆ ಸಮೀಕ್ಷೆ ನಡೆಸಲು ನೆರವಾಯಿತು. 4,386 ಕುಟುಂಬಗಳ 22,173 ಜನರನ್ನು ಸಮೀಕ್ಷೆ ಮಾಡಿ, ಮೂಲಭೂತ ಡಿಜಿಟಲ್ ಕೌಶಲ್ಯಗಳ ಕೊರತೆಯಿರುವ 3,917 ಜನರನ್ನು ಗುರುತಿಸಲಾಯಿತು. ಇವರಲ್ಲಿ, ಹಾಸಿಗೆ ಹಿಡಿದ 617 ಜನ ಅಥವಾ ಬೇರೆ ಕಾರಣಗಳಿಂದ ತರಬೇತಿಗೆ ಅರ್ಹರಲ್ಲದವರಿದ್ದರು. ಉಳಿದ 3,300 ಜನರಿಗೆ ತರಬೇತಿ ನೀಡಲು ಸಾಧ್ಯವಾಯಿತು. “ನೀವು ತರಬೇತುದಾರರಾಗಬಹುದು” ಎಂಬ ವಾಟ್ಸಾಪ್ ಸಂದೇಶದ ಮೂಲಕ ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಯಿತು. ಕ್ಷೇತ್ರಕ್ಕೆ ಇಳಿಯುವ ಮೊದಲು ಅವರಿಗೆ ನಾಯಕತ್ವ, ಸಮೀಕ್ಷಾ ವಿಧಾನಗಳು ಮತ್ತು ಅಪ್ಲಿಕೇಶನ್ ಬಳಕೆಯ ಬಗ್ಗೆ ತರಬೇತಿ ನೀಡಲಾಯಿತು.
'ಇ-ವಿದ್ಯಾರಂಭಂ' ಎಂದು ಹೆಸರಿಸಲಾದ ಈ ತರಬೇತಿಯು ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದಿಂದ ಅನುಮೋದಿತವಾದ ಪಠ್ಯಕ್ರಮವನ್ನು ಅನುಸರಿಸಿತು. ಇದು ಮೂರು ಪ್ರಮುಖ ವಿಷಯಗಳ ಮೇಲೆ ಕೇಂದ್ರಿತವಾಗಿತ್ತು: ಸ್ಮಾರ್ಟ್ಫೋನ್ ನಿರ್ವಹಣೆ, ಹೊಸ ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳುವುದು, ಮತ್ತು ಆನ್ಲೈನ್ ಬ್ಯಾಂಕಿಂಗ್ ಹಾಗೂ ಸರ್ಕಾರಿ ಸೇವೆಗಳನ್ನು ಬಳಸುವುದು. ಕೋವಿಡ್-19 ನಿಯಮಗಳನ್ನು ಅನುಸರಿಸಿ, ಎನ್ಎಸ್ಎಸ್ ಘಟಕಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ನೆರೆಹೊರೆಯ ಸ್ವಯಂಸೇವಕರು ಮನೆಗಳಲ್ಲಿ, ಎಂನರೇಗಾ ಕಾರ್ಯಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೋಧನೆಗಳನ್ನು ಕೈಗೊಂಡರು. ಈ ತರಬೇತಿಯು ಸ್ಥಳೀಯ ಹಾಗೂ ಸುಲಭವಾಗಿ ತಲುಪುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು.

ಕೇರಳ ರಾಜ್ಯಾದ್ಯಂತ ಮನೆ-ಮನೆಗಳಿಗೆ, ಎಂನರೇಗಾ ಕಾರ್ಯಕ್ಷೇತ್ರ, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ ಎನ್ಎಸ್ಎಸ್ ಕಾರ್ಯಕರ್ತರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ತರಬೇತಿ ನೀಡುವ ಕೆಲಸದಲ್ಲಿ ನಿರತರಾದರು.
“ಪ್ರತಿ ಮನೆಯಲ್ಲೂ ಮೊದಲ ಬೋಧಕರಾಗಿ ಬಂದವರು ಮೊಮ್ಮಕ್ಕಳು. ಆನಂತರ, ಇಂಜಿನಿಯರಿಂಗ್ ಕಾಲೇಜುಗಳ ಎನ್ಎಸ್ಎಸ್ ಘಟಕಗಳ ಸ್ವಯಂಸೇವಕರು ಕೈಜೋಡಿಸಿದರು. ಎಲ್ಲೆಡೆ ಉತ್ಸಾಹ ತುಂಬಿತ್ತು. ಇದು 80ರ ದಶಕದ ಉತ್ತರಾರ್ಧ ಮತ್ತು 90ರ ದಶಕದ ಆರಂಭದಲ್ಲಿ ನಡೆದ ಸಂಪೂರ್ಣ ಸಾಕ್ಷರತಾ ಅಭಿಯಾನವನ್ನು ನೆನಪಿಸುವಂತಿದೆ" ಎಂದು ರಾಜೇಶ್ ಹೇಳುತ್ತಾರೆ.
ಆರಂಭದಲ್ಲಿ ಬಂಡವಾಳದ ಕೊರತೆಯಿತ್ತು, ಹಾಗಾಗಿ ಲಘು ಉಪಹಾರ ಮತ್ತು ಸಾರಿಗೆ ವೆಚ್ಚಗಳನ್ನು ಸಣ್ಣ ದೇಣಿಗೆಗಳ ಮೂಲಕ ಭರಿಸಲಾಯಿತು. ವಯಸ್ಸಾದವರಲ್ಲಿ ಕಲಿಕೆಯ ಬಗ್ಗೆ ಇರುವ ಹಿಂಜರಿಕೆಯನ್ನು ಹೋಗಲಾಡಿಸಲು ತರಬೇತುದಾರರು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆದರು. ಅಂತಿಮವಾಗಿ, ತರಬೇತಿ ಮತ್ತು ಮೌಲ್ಯಮಾಪನಕ್ಕೆ ಒಳಗಾದ 3,300 ಜನರಲ್ಲಿ, 3,174 ಜನರು ಉತ್ತೀರ್ಣರಾದರು. ಅಂದರೆ ಶೇ. 96.18 ರಷ್ಟು ಒಟ್ಟು ಉತ್ತೀರ್ಣ ದರ. 2022ರ ಸೆಪ್ಟೆಂಬರ್ 21ರಂದು ಪುಲ್ಲಂಪಾರವನ್ನು ಕೇರಳದ ಮೊದಲ ಸಂಪೂರ್ಣ ಡಿಜಿಟಲ್ ಸಾಕ್ಷರ ಗ್ರಾಮ ಪಂಚಾಯತ್ ಎಂದು ಅಧಿಕೃತವಾಗಿ ಘೋಷಿಸಲಾಯಿತು.
‘ಡಿಜಿ ಕೇರಳಂ’ಗೆ ಚಾಲನೆ
ಹೀಗೆ ಪುಲ್ಲಂಪಾರದಲ್ಲಿ ಯಶಸ್ವಿಯಾದ ಮಾದರಿಯು ಇಡೀ ರಾಜ್ಯಕ್ಕೆ ಒಂದು ನೀಲನಕ್ಷೆ ಒದಗಿಸಿತು. ಆ ಯಶಸ್ಸು ಸರ್ಕಾರವನ್ನು ‘ಡಿಜಿ ಕೇರಳಂ’ ಎಂಬ ರಾಜ್ಯಾದ್ಯಂತದ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಅಭಿಯಾನವನ್ನು ಸ್ಥಳೀಯ ಸ್ವ-ಸರ್ಕಾರ ಇಲಾಖೆಯ ಅಡಿಯಲ್ಲಿ ಪ್ರಾರಂಭಿಸಲು ಪ್ರೇರೇಪಿಸಿತು. 14ರಿಂದ 65 ವರ್ಷ ವಯಸ್ಸಿನ ಪ್ರತಿ ನಾಗರಿಕರಿಗೆ ಮೂಲಭೂತ ಡಿಜಿಟಲ್ ಸಾಕ್ಷರತೆಯನ್ನು ವಿಸ್ತರಿಸುವುದು ಇದರ ಉದ್ದೇಶವಾಗಿತ್ತು. ಇದಕ್ಕಾಗಿ ಅದೇ ಮೂರು ಭಾಗಗಳ ವಿಧಾನವನ್ನು ಬಳಸಲಾಯಿತು: ತರಬೇತಿಯ ಅಗತ್ಯವಿರುವವರನ್ನು ಗುರುತಿಸಲು ಸಮೀಕ್ಷೆ, ಸಾಮಾನ್ಯ ಪಠ್ಯಕ್ರಮ ಬಳಸಿ ರಚನಾತ್ಮಕ ಬೋಧನೆ ಮತ್ತು ಕಠಿಣ, ಹಂತ-ಹಂತದ ಮೌಲ್ಯಮಾಪನ. ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸದ ಹರಿವನ್ನು ಏಕರೂಪಗೊಳಿಸಲು ಒಂದು ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಪೋರ್ಟಲ್ ಅಳವಡಿಸಿಕೊಳ್ಳಲಾಯಿತು.
ಆ ಮೂಲಕ ಜೊತೆಯಾಗಿದ್ದು 2,57,048 ಸ್ವಯಂಸೇವಕರು. ಅವರು 83,45,879 ಮನೆಗಳಿಗೆ ಭೇಟಿ ನೀಡಿ 1,50,82,536 ಜನರ ಸಮೀಕ್ಷೆ ನಡೆಸಿದರು. ಇದರಲ್ಲಿ ತರಬೇತಿ ಪಡೆಯುವ 21,88,398 ಜನರನ್ನು ಗುರುತಿಸಲಾಯಿತು. ಇವರಲ್ಲಿ 21,87,966 ಜನರು ತರಬೇತಿ ಪೂರ್ಣಗೊಳಿಸಿದರು ಮತ್ತು 21,87,667 ಜನರು ಮೌಲ್ಯಮಾಪನದಲ್ಲಿ ಉತ್ತೀರ್ಣರಾದರು. ಗುಣಮಟ್ಟ ನಿಯಂತ್ರಣವನ್ನು ಸೂಕ್ತವಾಗಿ ಸೇರಿಸಲಾಗಿತ್ತು: ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸೂಪರ್-ಚೆಕ್ಗಳು, ವಿಫಲರಾಗುವ ದರ ಶೇ. 10ಕ್ಕಿಂತ ಹೆಚ್ಚಿದ್ದರೆ ಅಲ್ಲಿ ಪುನಃ ತರಬೇತಿ ಮತ್ತು ಯಾವುದೇ ಅಂತಿಮ ಘೋಷಣೆಯ ಮೊದಲು ಅರ್ಥಶಾಸ್ತ್ರ ಮತ್ತು ಅಂಕಿಅಂಶಗಳ ಇಲಾಖೆಯಿಂದ ತೃತೀಯ-ಪಕ್ಷದ ಮೌಲ್ಯಮಾಪನ ಮಾಡಲಾಯಿತು.
ಜಿಲ್ಲೆಗಳ ಶತಕ ಸಾಧನೆ
ಜಿಲ್ಲಾವಾರು ಚಿತ್ರಣವು ಕವರೇಜ್ ಎಷ್ಟು ಸಂಪೂರ್ಣವಾಗಿತ್ತು ಎಂಬುದನ್ನು ತೋರಿಸುತ್ತದೆ. ಆಲಪ್ಪುಳ, ಎರ್ನಾಕುಳಂ, ಕಣ್ಣೂರು, ಕಾಸರಗೋಡು, ಕೊಲ್ಲಂ, ಕೊಟ್ಟಾಯಂ, ಕೋಳಿಕ್ಕೋಡ್, ಪಾಲಕ್ಕಾಡ್, ಪಟ್ಟನಂತಿಟ್ಟ, ತಿರುವನಂತಪುರಂ, ತ್ರಿಶೂರ್ ಮತ್ತು ವಯನಾಡು ಎಲ್ಲವೂ ತರಬೇತಿ ಪಡೆದ ಮತ್ತು ಮೌಲ್ಯಮಾಪನಗೊಂಡವರಲ್ಲಿ ಸಂಪೂರ್ಣ ಶೇ. 100ರಷ್ಟು ಸಾಧನೆ ಮಾಡಿದವು. ಇಡುಕ್ಕಿ ಶೇ. 99.98ರಷ್ಟು ಮತ್ತು ಮಲಪ್ಪುರಂ ಶೇ. 99.89ರ ದರ ತಲುಪಿದವು- ಈ ಅಂಕಿಅಂಶಗಳು ಗುಡ್ಡಗಾಡು ಮತ್ತು ಹೆಚ್ಚಿನ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿಯೂ ಈ ಅಭಿಯಾನ ವ್ಯಾಪ್ತಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇವೆಲ್ಲ ಸಂಪೂರ್ಣವಾಗಿ ಸ್ವಯಂಸೇವಕರ ಶ್ರಮದ ಫಲ. ಎನ್ಎಸ್ಎಸ್ ಘಟಕಗಳು, ಕುಟುಂಬಶ್ರೀ ಸದಸ್ಯರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ನೆರೆಹೊರೆಯ ಗುಂಪುಗಳು ಸಮೀಕ್ಷೆ ಮತ್ತು ತರಬೇತಿ ಕಾರ್ಯಾಚರಣೆಗಳಿಗೆ ಬೆನ್ನೆಲುಬಾಗಿ ನಿಂತವು. ಇದು ಕೇವಲ ಸರ್ಕಾರದ ಮೇಲಿನಿಂದ ಹೇರಲ್ಪಟ್ಟ ಯೋಜನೆಯಾಗದೆ, ಸ್ಥಳೀಯರ ಮಾಲಿಕತ್ವದ ಅಭಿಯಾನವಾಯಿತು. ಸ್ಪಷ್ಟವಾಗಿ ಹೇಳುವುದಾದರೆ, 25 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸಮಯ ನೀಡಿ ಮನೆಗಳಿಗೆ ಭೇಟಿ ನೀಡಿದರು, ತರಬೇತಿ ಪಡೆಯುವವರನ್ನು ನೋಂದಾಯಿಸಿಕೊಂಡರು ಮತ್ತು ಬೋಧನೆ ಹಾಗೂ ಪರೀಕ್ಷೆಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡಿದರು.
ಗುರುವಾರ ಅಧಿಕೃತ ಘೋಷಣೆ
ಕೇರಳ ಈಗ 2025ರ ಆಗಸ್ಟ್ 21ರಂದು ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ಅಧಿಕೃತ ಘೋಷಣೆ ಮಾಡಲಿದೆ: ರಾಜ್ಯವು ಸಂಪೂರ್ಣ ಡಿಜಿಟಲ್ ಸಾಕ್ಷರತೆಯನ್ನು ಸಾಧಿಸಿದೆ ಎಂದು. ಈ ಘೋಷಣೆಯು ಒಂದು ಬಿಕ್ಕಟ್ಟಿನ ಸಮಯದಲ್ಲಿ ಕೇವಲ ಒಂದು ಪಂಚಾಯತ್ನಲ್ಲಿ ಪ್ರಾರಂಭವಾದ ಕಾರ್ಯಕ್ರಮವು, ವ್ಯವಸ್ಥಿತ ಯೋಜನೆ ಮತ್ತು ಪರಿಶೀಲನೆಯ ಮೂಲಕ ಇಡೀ ರಾಜ್ಯಕ್ಕೆ ವಿಸ್ತರಿಸಲ್ಪಟ್ಟ ಸಾಧನೆಗೆ ಕಿರೀಟ ತೊಡಿಸಲಿದೆ.
ಅಭಿಯಾನವು ತನ್ನ ಅಧಿಕೃತ ಘೋಷಣೆಯ ಹತ್ತಿರದಲ್ಲಿದ್ದರೂ, ಕಾರ್ಯಕ್ರಮದ ದಾಖಲೆಗಳು ಮುಂದಿನ ಹೆಜ್ಜೆಗಳನ್ನು ಸೂಚಿಸುತ್ತಿವೆ. ಅಭಿಯಾನದ ಮುಂದಿನ ಹಂತವನ್ನು 'ಡಿಜಿ ಕೇರಳಂ 2.0' ಎಂದು ಕರೆಯಲಾಗಿದ್ದು, ಇದು ಈಗಾಗಲೇ ಇರುವ ಮೂಲಸೌಕರ್ಯ ಮತ್ತು ಆಡಳಿತ ವ್ಯವಸ್ಥೆಗಳ ಮೇಲೆ AI ಸಾಕ್ಷರತೆ, ಸೈಬರ್ ಸುರಕ್ಷತೆ, ಸುರಕ್ಷಿತ ತಂತ್ರಜ್ಞಾನ ಮತ್ತು ಫಿನ್ಟೆಕ್ಟ್‌ನಂತಹ ಗಹನ ಕೌಶಲ್ಯಗಳತ್ತ ಗಮನ ಹರಿಸುತ್ತದೆ.