ಮೋದಿ ಸರ್ಕಾರ ಅಲ್ಲ, ಭಾರತ ಸರ್ಕಾರ:  ಶರದ್ ಪವಾರ್
x

'ಮೋದಿ ಸರ್ಕಾರ ಅಲ್ಲ, ಭಾರತ ಸರ್ಕಾರ': ಶರದ್ ಪವಾರ್


ʻಮೋದಿ ಅವರು ದೇಶವನ್ನು ಮುನ್ನಡೆಸುವ ಜನಾದೇಶವನ್ನು ಹೊಂದಿದ್ದಾರೆಯೇ?ʼ ಎಂದು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರು ಪ್ರಶ್ನಿಸಿದ್ದಾರೆ.

ಪುಣೆಯಿಂದ 125 ಕಿಮೀ ದೂರದಲ್ಲಿರುವ ಅಹ್ಮದ್‌ನಗರದಲ್ಲಿ ಎನ್‌ಸಿಪಿಯ 25 ನೇ ಸಂಸ್ಥಾಪನಾ ದಿನಾಚರಣೆ ವೇಳೆ ಪಕ್ಷದ ನೂತನ ಸಂಸದರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಜೂನ್‌ 9ರಂದು ಪ್ರಮಾಣವಚನ ಸ್ವೀಕರಿಸಿದರು.ಆದರೆ, ಅವರಿಗೆ ಜನಾದೇಶ ಇತ್ತೇ? ಬಿಜೆಪಿಗೆ ಬಹುಮತ ಇರಲಿಲ್ಲ.ಅವರು ತೆಲುಗು ದೇಶಂ ಪಕ್ಷ ಮತ್ತು ಜೆಡಿಯು ಸಹಾಯ ತೆಗೆದುಕೊಂಡರು,ʼ ಎಂದು ಅವರು ಹೇಳಿದರು.

ಮೋದಿ ಗ್ಯಾರಂಟಿ ಇನ್ನು ಇಲ್ಲ: ʻಚುನಾವಣೆ ಪ್ರಚಾರದ ವೇಳೆ ಮೋದಿಯವರು ‘ಭಾರತ ಸರ್ಕಾರ’ ಎಂದು ಕರೆಯುತ್ತಿ ರಲಿಲ್ಲ. ಬದಲಾಗಿ, ಮೋದಿ ಸರ್ಕಾರ, ಮೋದಿ ಗ್ಯಾರಂಟಿ ಎಂದು ಕರೆಯುತ್ತಿದ್ದರು. ಇಂದು ಆ ಮೋದಿ ಗ್ಯಾರಂಟಿ ಇಲ್ಲ. ಇದು ಮೋದಿ ಸರ್ಕಾರವಲ್ಲ. ಬದಲಾಗಿ, ಭಾರತ ಸರ್ಕಾರ ಎಂದು ಹೇಳಬೇಕಿದೆ. ನಿಮ್ಮಿಂದಾಗಿ ಅವರು ವಿಭಿನ್ನ ಮಾರ್ಗ ತೆಗೆದುಕೊಳ್ಳಬೇಕಿದೆ,ʼ ಎಂದು ಹೇಳಿದರು.

'ಪ್ರಧಾನಿ ಹುದ್ದೆ ನಿರ್ದಿಷ್ಟ ಪಕ್ಷಕ್ಕೆ ಸೇರಿದ್ದಲ್ಲ: ʻಪ್ರಧಾನಿ ಹುದ್ದೆ ದೇಶದ್ದು ಮತ್ತು ನಿರ್ದಿಷ್ಟ ಪಕ್ಷದ್ದಲ್ಲ. ಅಧಿಕಾರದಲ್ಲಿರುವವರು ಸಮಾಜ ದ ಎಲ್ಲಾ ವಿಭಾಗಗಳು, ಜಾತಿಗಳು ಮತ್ತು ಪಂಥಗಳ ಬಗ್ಗೆ ಯೋಚಿಸಬೇಕು. ಆದರೆ, ಮೋದಿ ಇದನ್ನು ಮಾಡಲು ಮರೆತಿದ್ದಾರೆ. ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಪಾರ್ಸಿಗಳಂತಹ ಅಲ್ಪಸಂಖ್ಯಾತರು ದೇಶದ ಪ್ರಮುಖ ಭಾಗವಾಗಿದ್ದಾರೆ. ಅವರಿಗೆ ಸರ್ಕಾರದ ಮೇಲೆ ನಂಬಿಕೆ ಇರಬೇಕು. ಭಾಷಣದಲ್ಲಿ ಅವರು ಹೆಚ್ಚು ಮಕ್ಕಳನ್ನು ಹೊಂದಿರುವ ಜನರ ಬಗ್ಗೆ ಮಾತನಾಡಿದರು; ಅವರು ಮುಸ್ಲಿಮರನ್ನು ಉದ್ದೇಶಿಸಿದ್ದರು ಎಂಬುದು ಸ್ಪಷ್ಟವಾಗಿದೆ, ʼಎಂದು ಪವಾರ್ ಹೇಳಿದರು.

ʻಈ ಜನರ ಕೈಗೆ ಅಧಿಕಾರ ಹೋದರೆ, ಅವರು ಮಹಿಳೆಯರ ಮಂಗಳಸೂತ್ರಗಳನ್ನು ಕಸಿದುಕೊಳ್ಳುತ್ತಾರೆ ಎಂದೆಲ್ಲ ಹೇಳಿದರು. ದೇಶದಲ್ಲಿ ಇಂತಹ ಘಟನೆಗಳು ನಡೆದಿವೆಯೇ? ನಿಮ್ಮ ಬಳಿ ಎರಡು ಎಮ್ಮೆಯಿದ್ದರೆ, ಪ್ರತಿಪಕ್ಷಗಳು ಒಂದು ಎಮ್ಮೆಯನ್ನು ಕಿತ್ತುಕೊಳ್ಳುತ್ತವೆ ಎಂದು ಹೇಳಿದರು. ಪ್ರಧಾನಿಯೊಬ್ಬರು ಈ ರೀತಿ ಮಾತನಾಡಬಹುದೇ? ಇತರರನ್ನು ಟೀಕಿಸುವಾಗ ಅವರು ಸಂಯಮ ತೋರಲಿಲ್ಲ,ʼ ಎಂದು ಹೇಳಿದರು.

ಈ ಆತ್ಮ ನಿಮ್ಮನ್ನು ಬಿಡುವುದಿಲ್ಲ: ಮೋದಿ ತಮ್ಮನ್ನು ʻಅಲೆದಾಡುವ ಚಂಚಲ ಆತ್ಮʼ ಎಂದು ಕರೆದ ಬಗ್ಗೆ ಪ್ರತಿಕ್ರಿಯಿಸಿ, ʻಈ ಆತ್ಮ ನಿಮ್ಮನ್ನು ಬಿಡುವುದಿಲ್ಲ,ʼ ಎಂದು ಹೇಳಿದರು.

ʻಅವರು ಶಿವಸೇನೆ (ಯುಬಿಟಿ)ಯನ್ನು ನಕಲಿ ಎಂದು ಕರೆದರು. ಪ್ರಧಾನಿಯೊಬ್ಬರು ಯಾರನ್ನಾದರೂ ಅಥವಾ ಯಾವುದೇ ಗುಂಪನ್ನು ನಕಲಿ ಎಂದು ಕರೆಯಬಹುದೇ? ಅಧಿಕಾರವನ್ನು ಮರಳಿ ಪಡೆಯುವ ಸಾಧ್ಯತೆ ಕಡಿಮೆಯಿದೆ ಎನ್ನಿಸಿದಾಗ, ಮನುಷ್ಯರು ಚಿತ್ತ ಶಾಂತಿ ಕಳೆದುಕೊಳ್ಳುತ್ತಾರೆ ಎಂಬುದಕ್ಕೆ ಇದು ಉದಾಹರಣೆ,ʼ ಎಂದು ಹೇಳಿದರು.

ʻಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿರುವ ಹರಿಯಾಣ ಮತ್ತು ಜಾರ್ಖಂಡ್‌ನಲ್ಲೂ ನಾವು ಕೆಲಸ ಮಾಡಿ, ಸರ್ಕಾರ ರಚಿಸಬೇಕಿದೆ. ರಾಮಮಂದಿರ ನಿರ್ಮಾಣದಿಂದ ರಾಜಕೀಯ ಲಾಭ ಆಗುತ್ತದೆ ಎಂದುಕೊಂಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಯನ್ನು ಅಯೋಧ್ಯೆಯಲ್ಲೇ ಸೋಲಿಸಲಾಯಿತು. ನಾಳೆ ನಾನು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದರೆ, ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ,ʼ ಎಂದರು.

ಬಿಜೆಪಿಯ ಸಂಸದ ಸುಜಯ್ ವಿಖೆ ಪಾಟೀಲ್ ಅವರನ್ನು ಸೋಲಿಸಿದ ಅಹ್ಮದ್‌ನಗರದ ನಿಲೇಶ್ ಲಂಕೆ ಅವರನ್ನು ಶ್ಲಾಘಿಸಿದರು. ಎನ್‌ಸಿಪಿಯ ಎಂಟು ಸಂಸದರು ಸಂಸತ್ತಿನಲ್ಲಿ ʻಅಷ್ಟಪ್ರಧಾನ ಮಂಡಲʼ(ಎಂಟು ಸಚಿವರ ಮಂಡಳಿ) ಆಗಿರುತ್ತಾರೆ ಎಂದು ಭರವಸೆ ನೀಡಿದರು. ಛತ್ರಪತಿ ಶಿವಾಜಿ ಮಹಾರಾಜರು ಅಷ್ಟಪ್ರಧಾನ ಮಂಡಲವನ್ನು ಹೊಂದಿದ್ದರು.

Read More
Next Story