ರೈತ ಹೋರಾಟ | ನಾವು ಅನ್ನ ಕೊಡ್ತೀವಿ, ನಮ್ಮ ದಾರಿಗೆ ಮೊಳೆ ಬಿತ್ತುತ್ತಿದೆ ಸರ್ಕಾರ: ರೈತ ನಾಯಕ ಪಂಧೇರ್
x

ರೈತ ಹೋರಾಟ | ನಾವು ಅನ್ನ ಕೊಡ್ತೀವಿ, ನಮ್ಮ ದಾರಿಗೆ ಮೊಳೆ ಬಿತ್ತುತ್ತಿದೆ ಸರ್ಕಾರ: ರೈತ ನಾಯಕ ಪಂಧೇರ್


ಚಂಡೀಗಢ, ಫೆ 13: ಪಂಜಾಬ್ ಮತ್ತು ಹರಿಯಾಣದ ಗಡಿಗಳಲ್ಲಿ ಭಾರಿ ಬ್ಯಾರಿಕೇಡ್‌, ಕಾಂಕ್ರೀಟ್‌ ತಡೆಗೋಡೆ, ಮೊಳೆಗಳನ್ನು ನೆಟ್ಟು ಸರ್ಕಾರ ರೈತರ ‘ದೆಹಲಿ ಚಲೋ’ ತಡೆಯುವ ಯತ್ನ ನಡೆಸಿದೆ ಎಂದು ಹೇಳಿರುವ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ರಾಜ್ಯದ ಗಡಿಗಳನ್ನು ʼಅಂತರರಾಷ್ಟ್ರೀಯ ಗಡಿʼ ಗಳಾಗಿ ಪರಿವರ್ತಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೋಹರ್ ಲಾಲ್ ಖಟ್ಟರ್ ಸರ್ಕಾರವು ಹರಿಯಾಣದಲ್ಲಿ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

"ಈಗ ಪಂಜಾಬ್ ಮತ್ತು ಹರಿಯಾಣ ಎರಡು ರಾಜ್ಯಗಳು ಎಂದು ತೋರುತ್ತಿಲ್ಲ. ಅವು ಅಂತರರಾಷ್ಟ್ರೀಯ ಗಡಿಯಾಗಿ ಮಾರ್ಪಟ್ಟಿವೆ ಎನಿಸುತ್ತದೆ" ಎಂದು ಪಂಧೇರ್ ಅಭಿಪ್ರಾಯಪಟ್ಟಿದ್ದಾರೆ.

ಎಂಎಸ್‌ ಪಿ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ “ನ್ಯಾಯ”, ಭೂಸ್ವಾಧೀನ ಕಾಯಿದೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ದೆಹಲಿ ಚಲೋ ನಡೆಸುತ್ತಿದ್ದಾರೆ.

"ಇಂದಿಗೂ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಕಳೆದ ಎರಡು-ಮೂರು ದಿನಗಳಿಂದ ಸರ್ಕಾರವೇ ರಸ್ತೆಗಳಲ್ಲಿ ತಡೆಯೊಡ್ಡಿದೆ" ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಂಧೇರ್ ಹೇಳಿದರು.

ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸಲಾಗಿದೆ ಎಂದೂ ಅವರು ಹೇಳಿದರು.

"ನಾವು ಆಹಾರ ಬೆಳೆಯುತ್ತೇವೆ ಮತ್ತು ನಾವು ದೇಶವನ್ನು ಪೋಷಿಸುತ್ತೇವೆ ಮತ್ತು ಅವರು ನಮಗಾಗಿ ಮೊಳೆಗಳ ಬೆಳೆಯನ್ನು ಬೆಳೆಸಿದ್ದಾರೆ" ಎಂದು ಪಂಧೇರ್ ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ಸರ್ಕಾರ ನಡೆಸಿರುವ ರಸ್ತೆಯಲ್ಲಿ ಮೊಳೆ ಜೋಡಿಸಿರುವುದನ್ನು ಟೀಕಿಸಿದರು.

ಹರಿಯಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಂಧೇರ್, ಹರಿಯಾಣವನ್ನು ಕಾಶ್ಮೀರ ಕಣಿವೆಯಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು. ರೈತರಿಗೆ ಕಿರುಕುಳ ನೀಡಲು ರಾಜ್ಯ ಸರ್ಕಾರ ಪ್ರತಿ ಗ್ರಾಮಕ್ಕೂ ಪೊಲೀಸರನ್ನು ಕಳುಹಿಸಿ ಜಲಫಿರಂಗಿಗಳನ್ನು ನಿಯೋಜಿಸಿದೆ ಎಂದು ಆರೋಪಿಸಿದರು.

ಕೇಂದ್ರ ಸಚಿವರೊಂದಿಗಿನ ಸಭೆಯನ್ನು ಉಲ್ಲೇಖಿಸಿದ ಪಂಧೇರ್, ಸಭೆಯು ಯಾವುದೇ ಒಮ್ಮತಕ್ಕೆ ಬರದೇ ಉಳಿದಿದ್ದರಿಂದ ಅವರು ದೆಹಲಿಯತ್ತ ತೆರಳಲು ನಿರ್ಧರಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ರೈತರು ಅಂಬಾಲಾ-ಶಂಭು, ಖಾನೌರಿ-ಜಿಂದ್ ಮತ್ತು ದಬ್ವಾಲಿ ಗಡಿಗಳಿಂದ ದೆಹಲಿಗೆ ತೆರಳಲು ಯೋಜಿಸಿದ್ದಾರೆ.

Read More
Next Story