ಉತ್ತರ ಪ್ರದೇಶದ ಝಾನ್ಸಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 10 ಮಕ್ಕಳು ಸಾವು, 16 ಮಕ್ಕಳ ಸ್ಥಿತಿ ಗಂಭೀರ
x
ಆಸ್ಪತ್ರೆಯ ಹೊರಗೆ ಸೇರಿರುವ ಜನಸಂದಣಿ.

ಉತ್ತರ ಪ್ರದೇಶದ ಝಾನ್ಸಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 10 ಮಕ್ಕಳು ಸಾವು, 16 ಮಕ್ಕಳ ಸ್ಥಿತಿ ಗಂಭೀರ


ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 10 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಶುಕ್ರವಾರ (ನವೆಂಬರ್ 15) ತಡರಾತ್ರಿ 10.45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವಿನಾಶ್ ಕುಮಾರ್ ತಿಳಿಸಿದ್ದಾರೆ.



ಎನ್ಐಸಿಯುನ ಹೊರಭಾಗದಲ್ಲಿದ್ದ ಮಕ್ಕಳನ್ನು ಮತ್ತು ಒಳಭಾಗದಲ್ಲಿದ್ದ ಕೆಲವರನ್ನು ರಕ್ಷಿಸಲಾಗಿದೆ. "ಮೇಲ್ನೋಟಕ್ಕೆ 10 ಮಕ್ಕಳ ಸಾವಿನ ಬಗ್ಗೆ ಮಾಹಿತಿ ಇದೆ" ಎಂದು ಡಿಎಂ ಹೇಳಿದ್ದಾರೆ. ಕೆಡಿಮೆ ಗಂಭೀರ ಸ್ಥಿತಿಯಲ್ಲಿರುವವರನ್ನು ಎನ್ಐಸಿಯುನ ಹೊರಭಾಗದಲ್ಲಿ ದಾಖಲಿಸಲಾಗುತ್ತದೆ ಮತ್ತು ಹೆಚ್ಚು ಗಂಭೀರವಾದ ರೋಗಿಗಳನ್ನು ಒಳಭಾಗದಲ್ಲಿ ಇರಿಸಲಾಗುತ್ತದೆ ಎಂದು ಕುಮಾರ್ ಹೇಳಿದರು.

ಮಧ್ಯರಾತ್ರಿಯ ಸುಮಾರಿಗೆ ಆಸ್ಪತ್ರೆಗೆ ತಲುಪಿದ ವಿಭಾಗೀಯ ಆಯುಕ್ತ ಝಾನ್ಸಿ ಬಿಮಲ್ ಕುಮಾರ್ ದುಬೆ ಸುದ್ದಿಗಾರರೊಂದಿಗೆ ಮಾತನಾಡಿ, ಎನ್ಐಸಿಯುನ ಆಂತರಿಕ ವಿಭಾಗದಲ್ಲಿ ಸುಮಾರು 30 ಮಕ್ಕಳಿದ್ದರು. ಅವರಲ್ಲಿ ಹೆಚ್ಚಿನವರನ್ನು ರಕ್ಷಿಸಲಾಗಿದೆ ಎಂದು ಹೇಳಿದರು.

ಗಾಯಗೊಂಡ ಇತರ 16 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಝಾನ್ಸಿ ಸುಧಾ ಸಿಂಗ್ ತಿಳಿಸಿದ್ದಾರೆ. ಘಟನೆ ನಡೆದಾಗ ಎನ್ಐಸಿಯುನಲ್ಲಿ 50 ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದರು ಎಂದು ಹೇಳಿದ್ದಾರೆ.

ಸಿಎಂ ಆಘಾತ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲು ಜಿಲ್ಲಾಡಳಿತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

"ಝಾನ್ಸಿ ಜಿಲ್ಲೆಯಲ್ಲಿರುವ ವೈದ್ಯಕೀಯ ಕಾಲೇಜಿನ ಎನ್ಐಸಿಯುನಲ್ಲಿ ಸಂಭವಿಸಿದ ಅಪಘಾತದಲ್ಲಿ ಮಕ್ಕಳ ಸಾವು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸಮರೋಪಾದಿಯಲ್ಲಿ ನಡೆಸಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಅವರು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ಗಾಯಗೊಂಡ 16 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಅವರ ಜೀವವನ್ನು ಉಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸುಧಾ ಸಿಂಗ್ ಶನಿವಾರ ಮುಂಜಾನೆ ಸುದ್ದಿಗಾರರಿಗೆ ತಿಳಿಸಿದರು. ಎಲ್ಲಾ ವೈದ್ಯರು ಮತ್ತು ಅವರಿಗೆ ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ಲಭ್ಯವಿವೆ ಎಂದು ಅವರು ಹೇಳಿದರು.

ಶಾರ್ಟ್‌ ಸರ್ಕೀಟ್‌ ಕಾರಣ

ಮೇಲ್ನೋಟಕ್ಕೆ ಘಟನೆಗೆ ಶಾರ್ಟ್ ಸರ್ಕೀಟ್‌ ಕಾರಣ ಎಂದು ತೋರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

"ಆದಾಗ್ಯೂ, ಇದು ಯಾವ ಪರಿಸ್ಥಿತಿಗಳಲ್ಲಿ ಅಥವಾ ಯಾರ ನಿರ್ಲಕ್ಷ್ಯದಿಂದಾಗಿ ಸಂಭವಿಸಿದೆ ಎಂಬುದನ್ನು ಕಂಡುಹಿಡಿಯಲು ವಿವರವಾದ ತನಿಖೆ ಪ್ರಾರಂಭಿಸಲಾಗಿದೆ" ಎಂದು ಸಿಂಗ್ ಹೇಳಿದರು.

ಎನ್ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕೆಲವು ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿಗಳಿವೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಎನ್ಐಸಿಯುನಲ್ಲಿದ್ದ ಮಕ್ಕಳ ಸಂಖ್ಯೆ ಮತ್ತು ಅವರ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು ಪೊಲೀಸರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

Read More
Next Story