
ದೆಹಲಿ ಚಲೋ: ಮೃತ ರೈತರ ಕುಟುಂಬಕ್ಕೆ 1 ಕೋಟಿ ಪರಿಹಾರ, ಸರ್ಕಾರಿ ಉದ್ಯೋಗ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಘೋಷಣೆ | ದೆಹಲಿ ಚಲೋ ಮುಂದಿನ ನಿರ್ಧಾರ ಇಂದು
ದೆಹಲಿ ಚಲೋ ಆಂದೋಲದದ ಭಾಗವಾಗಿ ಖಾನೌರಿ ಗಡಿಯಲ್ಲಿ ಪ್ರತಿಭಟನೆ ಮಾಡುವಾಗ ಮೃತಪಟ್ಟ ಯುವ ರೈತ ಶುಭಕರನ್ ಸಿಂಗ್ ಅವರ ಸಹೋದರಿಗೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿ ಗಡಿಯಲ್ಲಿ ಬುಧವಾರ ನಡೆದ ಘರ್ಷಣೆಯಲ್ಲಿ ಯುವ ರೈತ ಶುಭಕರನ್ ಸಿಂಗ್ (21) ಸಾವನ್ನಪ್ಪಿದ್ದು, 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತ ರೈತರು ಬ್ಯಾರಿಕೇಡ್‌ಗಳತ್ತ ಸಾಗಲು ಯತ್ನಿಸಿದಾಗ ಈ ಅವಘಡ ಸಂಭವಿಸಿತ್ತು.
ಖಾನೌರಿ ಗಡಿಯಲ್ಲಿ ನಡೆದ ರೈತ ಚಳವಳಿಯಲ್ಲಿ ಹುತಾತ್ಮರಾದ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರದಿಂದ 1 ಕೋಟಿ ರೂಪಾಯಿ ಆರ್ಥಿಕ ನೆರವು ಮತ್ತು ಸಹೋದರಿಗೆ ಸರ್ಕಾರಿ ಉದ್ಯೋಗ ನೀಡಲು ನಿರ್ಧರಿಸಲಾಗಿದೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ತಿಳಿಸಿದ್ದಾರೆ.
ಯುವ ರೈತ ಶುಭಕರನ್ ಅವರ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಮೃತರ ಕುಟುಂಬದವರಿಗೆ ಆರ್ಥಿಕ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು.
ಅಲ್ಲದೇ ರೈತ ಹೋರಾಟದಲ್ಲಿ ಮೃತಪಟ್ಟ ಯುವ ರೈತನನ್ನು ಹುತಾತ್ಮ ಎಂದು ಘೋಷಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದರು.
ಯುವ ರೈತನ ಸಾವಿನಿಂದ ನೋವಾಗಿದೆ. ಮರಣೋತ್ತರ ಪರೀಕ್ಷೆಯ ನಂತರ, ಪ್ರಕರಣ ದಾಖಲಿಸಲಾಗುವುದು.
ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭಗವಂತ್ ಸಿಂಗ್ ಮಾನ್ ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ರೈತಪರ ಸಂಘಟನೆಗಳು ಎಂಎಸ್‌ಪಿ ಜಾರಿ ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೆಹಲಿ ಚಲೋ ಆಂದೋಲನ ನಡೆಸುತ್ತಿವೆ.
ಈಚೆಗೆ ಖಾನೌರಿಯಲ್ಲಿ ನಡೆದ ಘರ್ಷಣೆಯಲ್ಲಿ ಯುವ ರೈತ ಮೃತಪಟ್ಟು, 12 ಜನ ಪೊಲೀಸ್ ಸಿಬ್ಬಂದಿ ಗಾಯಗೊಂಡ ನಂತರ ರೈತ ಮುಖಂಡರು ಬುಧವಾರದಿಂದ ಎರಡು ದಿನಗಳ ಕಾಲ 'ದೆಹಲಿ ಚಲೋ' ಮೆರವಣಿಗೆಯನ್ನು ನಿಲ್ಲಿಸಿದ್ದಾರೆ.
ಶುಕ್ರವಾರ ಸಂಜೆ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ರೈತ ಸಂಘಟನೆಗಳು ತಿಳಿಸಿವೆ.