
ಡಾನಾ ಚಂಡಮಾರುತ | ಒಡಿಶಾದಲ್ಲಿ ಭಾರೀ ಮಳೆ, ಭೂಕುಸಿತ
ಚಂಡಮಾರುತ 'ಡಾನಾ' ಒಡಿಶಾ ಮತ್ತು ಬಂಗಾಳದಲ್ಲಿ ಭಾರೀ ಮಳೆ-ಗಾಳಿಗೆ ಕಾರಣವಾಗಿದೆ. ಇದರಿಂದಾಗಿ ಹಲವೆಡೆ ಮರಗಳು ಧರೆಗುರುಳಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಬಂಗಾಳಕೊಲ್ಲಿಯಿಂದ ಆರಂಭವಾದ ಚಂಡಮಾರುತ 'ಡಾನಾ' ಗುರುವಾರ ತಡರಾತ್ರಿ ಒಡಿಶಾ ಕರಾವಳಿಗೆ ಅಪ್ಪಳಿಸಿದೆ.
ಚಂಡಮಾರುತ ಅಪ್ಪಳಿಸುವ ವೇಳೆ ಅದರ ವೇಗ ಗಂಟೆಗೆ 120 ಕಿಲೋಮೀಟರ್ ಇತ್ತು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಒಡಿಶಾದಲ್ಲಿ ಅದರ ವೇಗದಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಚಂಡಮಾರುತದ ಪರಿಣಾಮ ಒಡಿಶಾ, ಪಶ್ಚಿಮ ಬಂಗಾಳ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ಕಂಡುಬಂದಿದೆ.
ಡಾನಾ ಚಂಡಮಾರತದಿಂದಾಗಿ ಪಶ್ಚಿಮ ಬಂಗಾಳದ ದಕ್ಷಿಣ ಪ್ರದೇಶದ ಕೆಲವು ಭಾಗಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ಚಂಡಮಾರುತವು ಧಮ್ರಾದಿಂದ ಸುಮಾರು 50 ಕಿಮೀ ವಾಯುವ್ಯ ಮತ್ತು ಭದ್ರಕ್ ಪಟ್ಟಣದ ಈಶಾನ್ಯಕ್ಕೆ 30 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತ.
ಚಂಡಮಾರುತ 'ಡಾನಾ' ಒಡಿಶಾ ಮತ್ತು ಬಂಗಾಳದಲ್ಲಿ ಭಾರೀ ಮಳೆಗೆ ಕಾರಣವಾಗಿದೆ. ಇದರಿಂದಾಗಿ ಹಲವೆಡೆ ಮರಗಳು ಧರೆಗುರುಳಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಒಡಿಶಾದ ಭುವನೇಶ್ವರ್, ಪುರಿ, ಪರದೀಪ್ ಮತ್ತು ಧಮ್ರಾ ಬಂದರು ಪ್ರದೇಶಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಒಡಿಶಾದ ಸುಮಾರು 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಮುಂದುವರಿದಿದೆ. ಮುಂದಿನ ಎರಡು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಒಡಿಶಾ ಸರ್ಕಾರವು ಸುಮಾರು 800 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಭಾರತೀಯ ಕರಾವಳಿ ಕಾವಲು ಪಡೆ, ಎನ್ಡಿಆರ್ಎಫ್ ಮತ್ತು ಒಡಿಆರ್ಎಫ್ ತಂಡಗಳು ರಕ್ಷಣೆ, ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.
ಯಾವುದೇ ಪ್ರಾಣಹಾನಿಯಾಗಿಲ್ಲ - ಸಿಎಂ ಮಾಝಿ
ಈ ನಡುವೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಡಾನಾ ಚಂಡಮಾರುತಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದು, "ಅಕ್ಟೋಬರ್ 24 ಮತ್ತು 25 ರ ರಾತ್ರಿ ಡಾನಾ ಚಂಡಮಾರುತದಿಂದಾಗಿ ಭಿತರ್ಕಾನಿಕಾ ಮತ್ತು ಧಮ್ರಾ ಕರಾವಳಿಯ ನಡುವೆ ಭೂಕುಸಿತ ಸಂಭವಿಸಿದೆ. ಆದರೆ ಇದರಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಸುಮಾರು 6,000 ಗರ್ಭಿಣಿಯರನ್ನು ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ವಿಮಾನ ಸೇವೆಗಳು ಯಥಾಸ್ಥಿತಿಗೆ ಬಂದಿವೆ. ಮಧ್ಯಾಹ್ನ 1 ಗಂಟೆಗೆ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಲಾಗುವುದು ಮತ್ತು ಸಂಜೆ 6 ಗಂಟೆಗೆ ವಿದ್ಯುತ್ ಸರಬರಾಜು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಚಿವರು, ಶಾಸಕರು, ಇತರ ಜನಪ್ರತಿನಿಧಿಗಳು, ಎನ್ಡಿಆರ್ಎಫ್, ಒಡಿಆರ್ಎಫ್, ಅಗ್ನಿಶಾಮಕ ದಳ, ಒಡಿಶಾ ಪೊಲೀಸ್ ರಕ್ಷಣಾ ತಂಡಗಳು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮಗಳು ಮತ್ತು ಇತರರು ಸೇರಿದಂತೆ ಎಲ್ಲ ಪಾಲುದಾರರಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ, “ಭಗವಂತ ಜಗನ್ನಾಥನ ಕೃಪೆ ಮತ್ತು ಎಲ್ಲರ ಸಹಕಾರದಿಂದ ಸರ್ಕಾರವು ಮಾನವ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
5.85 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ
ಚಂಡಮಾರುತದಿಂದ ಉದ್ಭವಿಸುವ ಪರಿಸ್ಥಿತಿಯನ್ನು ನಿಭಾಯಿಸಲು ಒಡಿಶಾ ಸರ್ಕಾರದ ಸನ್ನದ್ಧತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ವಿಚಾರಿಸಿದ್ದಾರೆ ಎಂದು ಮುಖ್ಯಮಂತ್ರಿ ಮಾಝಿ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿರುವ ಹೈ ರಿಸ್ಕ್ ಝೋನ್ಗಳಿಂದ ರಾಜ್ಯವು ಈಗಾಗಲೇ ಸುಮಾರು 5.84 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.