ಬದರಿನಾಥ-ಕೇದಾರನಾಥದಲ್ಲಿ ಅನ್ಯಧರ್ಮೀಯರಿಗೆ ಪ್ರವೇಶ ನಿಷೇಧ
x
ಕೇದಾರನಾಥ ದೇವಾಲಯ(ಸಂಗ್ರಹ ಚಿತ್ರ)

ಬದರಿನಾಥ-ಕೇದಾರನಾಥದಲ್ಲಿ ಅನ್ಯಧರ್ಮೀಯರಿಗೆ ಪ್ರವೇಶ ನಿಷೇಧ

ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶವನ್ನು ನಿಷೇಧಿಸಲು ದೇವಾಲಯ ಸಮಿತಿ (BKTC) ನಿರ್ಧರಿಸಿದೆ.


ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳಗಳಾದ ಬದರಿನಾಥ ಮತ್ತು ಕೇದಾರನಾಥ ಸೇರಿದಂತೆ ಒಟ್ಟು 45 ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶವನ್ನು ನಿಷೇಧಿಸಲು ಶ್ರೀ ಬದರಿನಾಥ ಕೇದಾರನಾಥ ದೇವಾಲಯ ಸಮಿತಿ (BKTC) ನಿರ್ಧರಿಸಿದೆ. ಈ ಕುರಿತಾದ ನಿರ್ಣಯವನ್ನು ಶೀಘ್ರದಲ್ಲೇ ಅಂಗೀಕರಿಸಲಾಗುವುದು ಎಂದು ಸಮಿತಿ ಭಾನುವಾರ (ಜ. 25) ತಿಳಿಸಿದೆ.

ಧಾರ್ಮಿಕ ಪಾವಿತ್ರ್ಯತೆ ರಕ್ಷಣೆಗೆ ಕ್ರಮ

ಬಿಜೆಪಿ ಹಿರಿಯ ನಾಯಕ ಹಾಗೂ BKTC ಅಧ್ಯಕ್ಷ ಹೇಮಂತ್ ದ್ವಿವೇದಿ ಈ ಬಗ್ಗೆ ಮಾತನಾಡಿ, "ದೇವಭೂಮಿ ಉತ್ತರಾಖಂಡದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದು ನಮಗೆ ಅತ್ಯಂತ ಮುಖ್ಯವಾಗಿದೆ. ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಲ್ಲಿ ಅನ್ಯಧರ್ಮೀಯರಿಗೆ ಪ್ರವೇಶ ನೀಡದಿರುವುದು ಪುರಾತನ ಸಂಪ್ರದಾಯವಾಗಿತ್ತು. ಆದರೆ ಈ ಹಿಂದಿನ ಬಿಜೆಪಿಯೇತರ ಸರ್ಕಾರಗಳು ಈ ಸಂಪ್ರದಾಯವನ್ನು ಗಾಳಿಗೆ ತೂರಿದ್ದವು. ಈಗ ಆ ಪುರಾತನ ಸಂಪ್ರದಾಯ ಮತ್ತು ಪಾವಿತ್ರ್ಯತೆಯನ್ನು ಕಾಪಾಡಲು ಸಮಿತಿಯು ಕಾಂಕ್ರೀಟ್ ಕ್ರಮ ಕೈಗೊಳ್ಳುತ್ತಿದೆ," ಎಂದಿದ್ದಾರೆ.

ವಿರೋಧ ಪಕ್ಷಗಳ ಟೀಕೆ

ದೇವಾಲಯ ಸಮಿತಿಯ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಾನ ಪ್ರತಿಕ್ರಿಯಿಸಿ, "ಸಾಮಾನ್ಯವಾಗಿ ಅನ್ಯಧರ್ಮೀಯರು ಈ ದೇವಾಲಯಗಳಿಗೆ ಪ್ರವೇಶಿಸುವುದಿಲ್ಲ. ಹೀಗಿರುವಾಗ ಪ್ರತ್ಯೇಕ ನಿಷೇಧದ ಅಗತ್ಯವಿಲ್ಲ. ರಾಜ್ಯದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಇಂತಹ ತಂತ್ರಗಳನ್ನು ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

ಶಾಸಕರ ಆಗ್ರಹ

ಕಳೆದ ವರ್ಷ ಕೇದಾರನಾಥ ಕ್ಷೇತ್ರದ ಬಿಜೆಪಿ ಶಾಸಕಿ ಆಶಾ ನೌಟಿಯಾಲ್ ಅವರು ಈ ನಿಷೇಧಕ್ಕೆ ಆಗ್ರಹಿಸಿದ್ದರು. ಕೇದಾರನಾಥ ಧಾಮದ ಹೆಸರಿಗೆ ಮಸಿ ಬಳಿಯುವ ಕೆಲವು ಚಟುವಟಿಕೆಗಳಲ್ಲಿ ಅನ್ಯಧರ್ಮೀಯರು ಭಾಗಿಯಾಗುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದರು. ಬದರಿನಾಥ ದೇವಾಲಯವು ಚಳಿಗಾಲದ ಆರು ತಿಂಗಳ ಬಿಡುವು ಮುಗಿಸಿ ಏಪ್ರಿಲ್ 23 ರಂದು ಪುನಃ ತೆರೆಯಲಿದ್ದು, ಅಷ್ಟರೊಳಗೆ ಈ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

Read More
Next Story