ಸಂಸದರು, ಶಾಸಕರ 24X7 ಡಿಜಿಟಲ್ ಮೇಲ್ವಿಚಾರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌
x
ಸುಪ್ರೀಂ ಕೋರ್ಟ್‌

ಸಂಸದರು, ಶಾಸಕರ 24X7 ಡಿಜಿಟಲ್ ಮೇಲ್ವಿಚಾರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

ಶಾಸಕರು, ಸಂಸದರ ಮೇಲ್ವಿಚಾರಣೆಗೆ ಅವರ ದೇಹದಲ್ಲಿ ಚಿಪ್‌ ಅಳವಡಿಸಬೇಕೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌


ದೇಶದಲ್ಲಿ ಉತ್ತಮ ಆಡಳಿತಕ್ಕಾಗಿ ಸಂಸದರು ಹಾಗೂ ಶಾಸಕರನ್ನು ದಿನದ 24 ಗಂಟೆಯೂ ಡಿಜಿಟಲ್‌ ಮಾನಿಟರಿಂಗ್‌ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದ್ದು, ಇದರಲ್ಲಿ ಗೌಪ್ಯತೆಯ ಹಕ್ಕು ಸಹ ಇದೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು 24 ಗಂಟೆಗಳ ಕಾಲ ಶಾಸಕರು ಹಾಗೂ ಸಂಸದರ ಚಲನವಲಗಳನ್ನು ಪತ್ತೆ ಮಾಡುವುದಕ್ಕೆ ದೇಹದಲ್ಲಿ ಚಿಪ್‌ ಅಳವಡಿಸಬಹುದೇ ಎಂದು ಪ್ರಶ್ನೆ ಮಾಡಿದೆ.

ದೆಹಲಿ ನಿವಾಸಿ ಸುರೀಂದರ್ ನಾಥ್ ಕುಂದ್ರಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ಇಂತಹ ವಿಚಾರದಲ್ಲಿ ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ 5 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಸಿಜೆಐ ಎಚ್ಚರಿಸಿದ್ದಾರೆ.

ನಿಮ್ಮ ವಾದ ಏನೆಂದು ನಿಮಗೆ ಅರ್ಥವಾಗಿದೆಯೇ ? ನಿಮ್ಮ ಪ್ರಕಾರ, ಸಂಸದರು ಮತ್ತು ಶಾಸಕರು 24/7 ಮೇಲ್ವಿಚಾರಣೆಯಲ್ಲಿರಬೇಕು. ಆದರೆ, ಅಪರಾಧಿಗಳಿಗೆ ಮಾತ್ರ ಈ ರೀತಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಖಾಸಗಿತನದ ಹಕ್ಕು ಎನ್ನುವುದು ಸಹ ಇದೆ. ಹೀಗಾಗಿ, ನಾವು ಎಲ್ಲಾ ಚುನಾಯಿತ ಸದಸ್ಯರನ್ನು ಡಿಜಿಟಲ್ ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಶಾಸಕರು ಹಾಗೂ ಸಂಸದರು ನಾಗರಿಕರಿಂದ ಸಂಬಳ ಪಡೆಯುವ ಸೇವಕರು. ಈ ರೀತಿ ಮಾಡುವುದರಿಂದ ಅವರು ಆಡಳಿತಗಾರರಂತೆ ವರ್ತಿಸಲು ಪ್ರಾರಂಭಿಸು ತ್ತಾರೆ ಎಂದು ಕುಂದ್ರಾ ವಾದಿಸಿದರು.

ʻನೀವು ಎಲ್ಲ ಸಂಸದರ ವಿರುದ್ಧ ಈ ರೀತಿ ಆರೋಪ ಮಾಡುವಂತಿಲ್ಲ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಳು ಚುನಾಯಿತ ಜನಪ್ರತಿನಿಧಿಗಳ ಶಾಸಕರ ಮೇಲೆ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ. ಆಗ ಜನರು ಸಹ ʻಸರಿ, ನಮಗೆ ನ್ಯಾಯಾಧೀಶರು ಅಗತ್ಯವಿಲ್ಲ. ನಾವು ಬೀದಿಗಳಲ್ಲೇ ನ್ಯಾಯ ನಿರ್ಧರಿಸುತ್ತೇವೆ. ಕಳ್ಳತನಕ್ಕಾಗಿ ಅಪರಾಧಿಯನ್ನು ಕೊಲ್ಲುತ್ತೇವೆʼ ಎಂದು ಹೇಳಬಹುದು. ಈ ರೀತಿ ಆಗಬೇಕು ಎಂದು ಬಯಸುವಿರೇ?ʼ ಎಂದು ಪೀಠ ಪ್ರಶ್ನೆ ಮಾಡಿದೆ.

ʻಸಂಸದರು ಮತ್ತು ಶಾಸಕರ ಡಿಜಿಟಲ್‌ ನಿಯಂತ್ರಣ ಪರಿಕಲ್ಪನೆಯನ್ನು ಒಪ್ಪಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಇಂಥ ಮನವಿ ಸಲ್ಲಿಸಬಾರದು. ಸಲ್ಲಿಸಿದರೆ ದಂಡ ಪಾವತಿಸಬೇಕಾಗುತ್ತದೆʼ ಎಂದು ಸಿಜೆಐ ಎಚ್ಚರಿಸಿದರು.


Read More
Next Story