ಭಯೋತ್ಪಾದನೆ ಮುಂದುವರಿದರೆ ಮಾತುಕತೆ ಅಸಾಧ್ಯ: ಭಾರತದ ಸಂದೇಶವನ್ನು ಜಾಗತಿಕವಾಗಿ ತಲುಪಿಸಿದ ಸರ್ವಪಕ್ಷ ನಿಯೋಗ
x

ಭಯೋತ್ಪಾದನೆ ಮುಂದುವರಿದರೆ ಮಾತುಕತೆ ಅಸಾಧ್ಯ: ಭಾರತದ ಸಂದೇಶವನ್ನು ಜಾಗತಿಕವಾಗಿ ತಲುಪಿಸಿದ ಸರ್ವಪಕ್ಷ ನಿಯೋಗ

ಏಳು ಸರ್ವಪಕ್ಷ ತಂಡಗಳು 33 ದೇಶಗಳ ರಾಜಧಾನಿಗಳಿಗೆ ಭೇಟಿ ನೀಡಿ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಸಂಪರ್ಕ ಸಾಧಿಸುತ್ತಿವೆ.


ಭಾರತದ ಸರ್ವಪಕ್ಷಗಳ ಪ್ರತಿನಿಧಿಗಳ ತಂಡಗಳು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ದೃಢ ನಿಲುವನ್ನು ಜಾಗತಿಕವಾಗಿ ಪ್ರತಿಪಾದಿಸಲು ರಷ್ಯಾ ಮತ್ತು ಜಪಾನ್‌ಗೆ ತಮ್ಮ ಭೇಟಿ ಪೂರ್ಣಗೊಳಿಸಿದ್ದು, 'ರಚನಾತ್ಮಕ ಸಭೆಗಳನ್ನು' ನಡೆಸಿದವು.

ಎರಡು ತಂಡಗಳು ಗಡಿಯಾಚೆಗಿನ ಉಗ್ರವಾದಕ್ಕೆ ಭಾರತದ ಪ್ರತಿಕ್ರಿಯೆ ತಿಳಿಸಲು ಬಹ್ರೇನ್ ಮತ್ತು ಕತಾರ್‌ಗೆ ತಲುಪಿವೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರ ಸಾವಿನ ನಂತರ, ಭಾರತವು ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಜಾಗತಿಕ ಸಹಕಾರ ಹೆಚ್ಚಿಸುವತ್ತ ಗಮನ ಹರಿಸಿದೆ. ಇದಕ್ಕಾಗಿ ಏಳು ಸರ್ವಪಕ್ಷ ತಂಡಗಳು 33 ದೇಶಗಳ ರಾಜಧಾನಿಗಳಿಗೆ ಭೇಟಿ ನೀಡಿ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಸಂಪರ್ಕ ಸಾಧಿಸುತ್ತಿವೆ.

ಭಾರತದ ನಿಕಟ ಸ್ನೇಹಿತ ರಷ್ಯಾ

ಮಾಸ್ಕೋಗೆ ಭೇಟಿ ನೀಡಿದ ಡಿಎಂಕೆ ಸಂಸದೆ ಕನಿಮೊಳಿ ನೇತೃತ್ವದ ತಂಡವು ರಷ್ಯಾದ ರಾಜಕೀಯ ನಾಯಕರು, ಮಾಧ್ಯಮ, ಹಿರಿಯ ಅಧಿಕಾರಿಗಳು ಮತ್ತು ರಾಜತಾಂತ್ರಿಕರೊಂದಿಗೆ ಸಭೆ ನಡೆಸಿತು. ಪಾಕಿಸ್ತಾನದ ರಾಜ್ಯ-ಪ್ರಾಯೋಜಿತ ಭಯೋತ್ಪಾದನೆ ಮತ್ತು ಭಾರತದ ಪ್ರತಿಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಿದ ತಂಡವು ಆಪರೇಷನ್ ಸಿಂದೂರ್’ ಕುರಿತು ಮಾಹಿತಿ ಹಂಚಿಕೊಂಡಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನಿಮೊಳಿ, "ರಷ್ಯಾ ಭಾರತದ ನಿಕಟ ಮತ್ತು ಪರೀಕ್ಷಿತ ಮಿತ್ರ. ಈ ಕಷ್ಟದ ಸಮಯದಲ್ಲಿ ರಷ್ಯಾದ ಬೆಂಬಲವನ್ನು ನಾವು ಆಶಿಸುತ್ತೇವೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ನಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಜನರಿಗೆ ತಿಳಿಯಬೇಕು" ಎಂದರು. "ಪಾಕಿಸ್ತಾನವು ಭಯೋತ್ಪಾದಕರನ್ನು ರಕ್ಷಿಸುತ್ತದೆ ಮತ್ತು ತಪ್ಪು ಪ್ರಚಾರ ಮಾಡುತ್ತದೆ. ಆದರೆ ಭಾರತವು ಕೇವಲ ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿದೆ. ಪಾಕಿಸ್ತಾನ ದಾಳಿಗಳನ್ನು ಮುಂದುವರಿಸಿದರೆ ಶಾಂತಿ ಮಾತುಕತೆಗೆ ನಿಲ್ಲುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು. ಶುಕ್ರವಾರ, ರಷ್ಯಾದ ಸಂಸದೀಯ ಸಮಿತಿಯ ಮೊದಲ ಉಪಾಧ್ಯಕ್ಷ ಆಂಡ್ರೆ ಡೆನಿಸೊವ್‌ರೊಂದಿಗಿನ ಸಭೆಯ ಫಲಪ್ರದ ಎಂದು ಬಣ್ಣಿಸಿದರು.

ಜಪಾನ್​ನ ಅನೌಪಚಾರಿಕ ಬೆಂಬಲ

ಜಪಾನ್‌ಗೆ ಭೇಟಿ ನೀಡಿದ, ಜೆಡಿ(ಯು) ರಾಜ್ಯಸಭಾ ಸಂಸದ ಸಂಜಯ್ ಕುಮಾರ್ ಝಾ ನೇತೃತ್ವದ ತಂಡವು ಮೂರು ದಿನಗಳ ಭೇಟಿಯಲ್ಲಿ ಜಪಾನ್‌ನ ರಾಜಕೀಯ ನಾಯಕರು, ನೀತಿ ನಿರೂಪಕರು, ಮಾಧ್ಯಮ ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿತು. "ಪ್ರತಿ ವೇದಿಕೆಯಲ್ಲೂ ಭಾರತದ ಶೂನ್ಯ- ಸಹಿಷ್ಣುತೆಯ ಭಯೋತ್ಪಾದನಾ ನೀತಿಯನ್ನು ದೃಢವಾಗಿ ಪುನರುಚ್ಚರಿಸಿದೆವು ಮತ್ತು ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ನಿರಂತರ ಪ್ರಾಯೋಜಕತ್ವವನ್ನು ಬಯಲಿಗೆಳೆದೆವು. ಜಪಾನ್‌ನ ಅನೌಪಚಾರಿಕ ಬೆಂಬಲಕ್ಕೆ ದೊರಕಿದೆ" ಎಂದು ಝಾ ಹೇಳಿದರು.

ತಂಡವು ತಾಮಾ ಸ್ಮಶಾನಕ್ಕೆ ಭೇಟಿ ನೀಡಿ, ಸ್ವಾತಂತ್ರ್ಯ ಹೋರಾಟಗಾರ ರಾಶ್ ಬಿಹಾರಿ ಬೋಸ್‌ರ ಜನ್ಮದಿನದ ಮುನ್ನಾದಿನದಂದು ಗೌರವ ಸಲ್ಲಿಸಿತು. "ಭಾರತವು ಗಾಂಧೀಜಿಯವರ ಶಾಂತಿಯ ಮಾರ್ಗವನ್ನು ಅನುಸರಿಸುತ್ತದೆ, ಆದರೆ ಶಾಂತಿಗೆ ಭಂಗ ಬಂದಾಗ, ರಾಶ್ ಬಿಹಾರಿ ಬೋಸ್‌ರ ಧೀರ ಚೈತನ್ಯವನ್ನೂ ಬಳಸುತ್ತೇವೆ. ಭಯೋತ್ಪಾದನೆ ಶಾಂತಿಗೆ ಸವಾಲು ಹಾಕಿದರೆ, ಭಾರತವು ಒಗ್ಗಟ್ಟಿನಿಂದ ಮತ್ತು ದೃಢತೆಯಿಂದ ಪ್ರತಿಕ್ರಿಯಿಸುತ್ತದೆ" ಎಂದು ಝಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ಬೆಂಬಲ

ಬಿಜೆಪಿ ಹಿರಿಯ ನಾಯಕ ಬೈಜಯಂತ್ ಜಯ್ ಪಾಂಡಾ ನೇತೃತ್ವದ ತಂಡವು ಬಹ್ರೇನ್‌ಗೆ ತಲುಪಿದೆ. ಭಾರತದ ರಾಯಭಾರ ಕಚೇರಿಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಭಾರತದ ದೃಢ ನಿಲುವನ್ನು ಎಲ್ಲ ಸಭೆಗಳಲ್ಲಿ ಪ್ರಸ್ತುತಪಡಿಸಲಾಗುವುದು" ಎಂದು ತಿಳಿಸಿದೆ. ದುಬೈನಲ್ಲಿ, ಯುಎಇಗೆ ಭಾರತದ ರಾಯಭಾರಿ ಸಂಜಯ್ ಸುಧೀರ್, ಶ್ರೀಕಾಂತ್ ಶಿಂದೆ ನೇತೃತ್ವದ ತಂಡದ ಭೇಟಿಯನ್ನು ಶ್ಲಾಘಿಸಿದರು. "ನಮ್ಮ ದೃಷ್ಟಿಕೋನ, ಚಿಂತನೆಗಳು ಉತ್ತಮವಾಗಿ ಸ್ವೀಕೃತವಾದವು. ಪಹಲ್ಗಾಮ್ ದಾಳಿಯ ನಂತರ ಗಲ್ಫ್ ಸಹಕಾರ ಕೌನ್ಸಿಲ್ (ಜಿಎಸ್‌ಸಿ)ರಾಷ್ಟ್ರಗಳಾದ ಬಹ್ರೇನ್, ಕುವೈತ್, ಒಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಯಿಂದ ಪೂರಕ ಪ್ರತಿಕ್ರಿಯೆ ಕಂಡುಬಂದಿದೆ.

ಎನ್‌ಸಿಪಿ-ಎಸ್‌ಪಿ ನಾಯಕಿ ಸುಪ್ರಿಯಾ ಸುಳೆ ನೇತೃತ್ವದ ನಾಲ್ಕನೇ ಸರ್ವಪಕ್ಷದ ತಂಡವು ಶನಿವಾರ ರಾತ್ರಿ ಕತಾರ್‌ಗೆ ತಲುಪಿತು. ಈ ತಂಡವು ನಂತರ ದಕ್ಷಿಣ ಆಫ್ರಿಕಾ, ಇಥಿಯೋಪಿಯಾ ಮತ್ತು ಈಜಿಪ್ಟ್‌ಗೆ ಭೇಟಿ ನೀಡಲಿದೆ. ತಂಡದಲ್ಲಿ ಸುಪ್ರಿಯಾ ಜೊತೆಗೆ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ, ಅನುರಾಗ್ ಠಾಕೂರ್, ವಿ. ಮುರಳೀಧರನ್, ಕಾಂಗ್ರೆಸ್‌ನ ಮನೀಶ್ ತಿವಾರಿ, ಆನಂದ್ ಶರ್ಮಾ, ಟಿಡಿಪಿಯ ಲಾವು ಶ್ರೀ ಕೃಷ್ಣ ದೇವರಾಯಲು, ಎಎಪಿಯ ವಿಕ್ರಮ್‌ಜೀತ್ ಸಿಂಗ್ ಸಾಹ್ನಿ ಮತ್ತು ಮಾಜಿ ರಾಜತಾಂತ್ರಿಕ ಸೈಯದ್ ಅಕ್ಬರುದ್ದೀನ್ ಸೇರಿದ್ದಾರೆ.

Read More
Next Story