ಪುರಿ ಜಗನ್ನಾಥ ದೇವಾಲಯ| ರತ್ನ ಭಂಡಾರದಲ್ಲಿ ಹಾವುಗಳೂ ಇಲ್ಲ! ಸುರಂಗಗಳೂ ಇಲ್ಲ!!
x

ಪುರಿ ಜಗನ್ನಾಥ ದೇವಾಲಯ| ರತ್ನ ಭಂಡಾರದಲ್ಲಿ ಹಾವುಗಳೂ ಇಲ್ಲ! ಸುರಂಗಗಳೂ ಇಲ್ಲ!!

ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದಲ್ಲಿ ಅನೇಕ ಸುರಂಗಗಳಿವೆ ಮತ್ತು ಹಾವುಗಳು ಬೆಲೆಬಾಳುವ ವಸ್ತುಗಳನ್ನು ಕಾವಲು ಕಾಯುತ್ತಿವೆ ಎಂಬ ವದಂತಿಗಳು ಇದ್ದವು. ಆದರೆ, ರತ್ನ ಭಂಡಾರದಲ್ಲಿ ಅಂಥದ್ದೇನೂ ಕಂಡುಬಂದಿಲ್ಲ ಎಂದು ತಂಡ ಹೇಳಿದೆ.


ಪುರಿಯ ಜಗನ್ನಾಥ ದೇವಾಲಯದ 'ರತ್ನ ಭಂಡಾರ'ದ ಒಳಗಿನ ಕೋಣೆಯನ್ನು 46 ವರ್ಷಗಳ ನಂತರ ತೆರೆಯಲಾಗಿದೆ. ಖಜಾನೆಗೆ ಸಂಬಂಧಿಸಿದಂತೆ ಹಲವು ದಶಕಗಳಿಂದ ಹರಡಿದ್ದ ವದಂತಿಗಳು ಸುಳ್ಳಾಗಿವೆ.

ರತ್ನ ಭಂಡಾರದೊಳಗಿನ 'ನಿಧಿ'ಯನ್ನು ಸರ್ಪಗಳು ಕಾವಲು ಕಾಯುತ್ತಿವೆ. ಭಂಡಾರವು ಅನೇಕ ಗುಪ್ತ ಸುರಂಗಗಳನ್ನು ಹೊಂದಿದೆ ಎಂಬ ಒಡಿಷಾದಲ್ಲಿ ಹರಡಿರುವ ದಂತಕತೆಗಳಲ್ಲಿ ಸತ್ಯವಿಲ್ಲ ಎಂದು ಖಜಾನೆಯ ಮೇಲ್ವಿಚಾರಣೆಗೆ ನೇಮಕಗೊಂಡ 11 ಸದಸ್ಯರ ಸಮಿತಿಯು ಏಳು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಹೇಳಿದೆ.

ತಪ್ಪು ಮಾಹಿತಿ ಹರಡುವಿಕೆ ನಿಲ್ಲಿಸಿ: ನ್ಯಾ. ಬಿಸ್ವನಾಥ್ ರಥ್‌


ʻನಮ್ಮ ತಪಾಸಣೆಯ ಆಧಾರದ ಮೇಲೆ, ಸುರಂಗದ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ,ʼ ಎಂದು ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷ ಮತ್ತು ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿಸ್ವನಾಥ್ ರಥ್‌ ಹೇಳಿದ್ದಾರೆ.

ʻಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಈ ವಿಷಯದ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಯಬೇಕುʼ ಎಂದು ಅವರು ಹೇಳಿದರು.

ʻದೇವಾಲಯದ ಖಜಾನೆಯಲ್ಲಿ ನಾವು ಯಾವುದೇ ರಹಸ್ಯ ಕೋಣೆ ಅಥವಾ ಸುರಂಗಗಳನ್ನು ನೋಡಲಿಲ್ಲ. ರತ್ನ ಭಂಡಾರ ಸುಮಾರು 20 ಅಡಿ ಎತ್ತರ ಮತ್ತು 14 ಅಡಿ ಉದ್ದವಿದೆ, ʼಎಂದು ಸಮಿತಿಯ ಇನ್ನೊಬ್ಬ ಸದಸ್ಯ ದುರ್ಗಾ ದಾಸ್‌ ಮಹಾಪಾತ್ರ ಹೇಳಿದರು.

ಅವರು ತಪಾಸಣೆ ವೇಳೆ ಕೆಲವು ಸಣ್ಣ ಸಮಸ್ಯೆಗಳನ್ನು ಗಮನಿಸಿದ್ದಾರೆ. ʻಚಾವಣಿಯಿಂದ ಹಲವು ಸಣ್ಣ ಕಲ್ಲುಗಳು ಬಿದ್ದವು. ರತ್ನ ಭಂಡಾರದ ಗೋಡೆಯಲ್ಲಿ ಬಿರುಕು ಕಂಡುಬಂದಿದೆ. ಅದೃಷ್ಟವಶಾತ್, ನೆಲ ಭಯಪಡುವಷ್ಟು ತೇವಗೊಂಡಿರಲಿಲ್ಲ,ʼ ಎಂದು ಹೇಳಿದರು.

ತಂತ್ರಜ್ಞಾನ ಬಳಸಬಹುದು

ಸಮಿತಿಯ ಭಾಗವಾಗಿರುವ ಪುರಿಯ ರಾಜವಂಶದ ಗಜಪತಿ ಮಹಾರಾಜ ದಿವ್ಯ ಸಿಂಹ ದೇಬ್, ʻಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ (ಎಎಸ್‌ಐ) ಸುರಂಗಗಳ ಉಪಸ್ಥಿತಿ ಬಗ್ಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತನಿಖೆ ನಡೆಸಬಹುದು,ʼ ಎಂದು ಹೇಳಿದರು. ʻಎಎಸ್‌ಐ ಲೇಸರ್ ಸ್ಕ್ಯಾನಿಂಗ್‌ನಂತಹ ಸಾಧನ ಬಳಸಿಕೊಂಡು, ಸುರಂಗದ ಅಸ್ತಿತ್ವದ ಬಗ್ಗೆ ಪರಿಶೀಲಿಸಬಹುದು,ʼ ಎಂದು ದೇಬ್ ಹೇಳಿದರು.

ಗುರುವಾರ ಸಮಿತಿಯ 11 ಮಂದಿ ಸದಸ್ಯರು ರತ್ನ ಭಂಡಾರದ ಬೀಗ ಮುರಿದು ಒಳ ಪ್ರವೇಶಿಸಿದ್ದರು. ಸಮಿತಿ ಏಳು ಗಂಟೆ ಕಾಲ ಕಾಲ ಕಳೆ ದಿದ್ದು, ಎಲ್ಲ ಚಿನ್ನಾಭರಣಗಳನ್ನು ದೇವಸ್ಥಾನದ ಒಳಗೆ ನಿರ್ಮಿಸಿದ ತಾತ್ಕಾಲಿಕ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಿತು. ಆದರೆ, ಆಭರಣಗಳ ವಿವರ ಬಹಿರಂಗಪಡಿಸಲು ರಥ್ ನಿರಾಕರಿಸಿದ್ದಾರೆ. ಎಎಸ್‌ಐ ಆಭರಣಗಳ ಪಟ್ಟಿ ಸಿದ್ಧಗೊಳಿಸಬೇಕಿದೆ.

'ಸರ್ಪಗಳ' ಕಾವಲು ಇಲ್ಲ


ಸಮಿತಿಯ ಸದಸ್ಯರು ಹಾವು ಹಿಡಿಯುವವರು ಮತ್ತು ಒಡಿಶಾ ವಿಪತ್ತು ಕಾರ್ಯಾಚರಣೆ ಪಡೆ (ಒಡಿಆರ್‌ಎ ಎಫ್) ತಂಡದೊಂದಿಗೆ ಭಾನುವಾರ (ಜುಲೈ 14) ರತ್ನ ಭಂಡಾರವನ್ನು ಪ್ರವೇಶಿಸಿದಾಗ, ಹಾವುಗಳು ಅಥವಾ ಸರೀಸೃಪಗಳು ಕಂಡುಬಂದಿಲ್ಲ.ಸರ್ಕಾರವು 11 ಸದಸ್ಯರ ಸ್ನೇಕ್ ಹೆಲ್ಪ್‌ಲೈನ್ ತಂಡವನ್ನು ನಿಯೋಜಿಸಿತ್ತು. ಅವರು ರತ್ನ ಭಂಡಾರದ ಹೊರಗೆ ಸನ್ನದ್ಧರಾಗಿ ಕಾಯುತ್ತಿದ್ದರು. ಪುರಿಯಲ್ಲಿರುವ ಪ್ರಧಾನ ಕಚೇರಿ ಆಸ್ಪತ್ರೆಯಲ್ಲಿ ಹಾವಿನ ಕಡಿತಕ್ಕೆ ಔಷಧ ಸಿದ್ಧವಾಗಿಡಲು ಸೂಚಿಸಲಾಗಿತ್ತು.

ಪುರಿಯ ರಾಜ ನಿರ್ವಹಿಸುತ್ತಿದ್ದ ರತ್ನ ಭಂಡಾರವನ್ನು 1905 ರಲ್ಲಿ ಬ್ರಿಟಿಷರು ಮೊದಲು ತೆರೆದರು.1926 ರಲ್ಲಿ ಬ್ರಿಟಿಷ್ ಆಡಳಿತವು ಆಭರಣಗಳ ಪಟ್ಟಿಯನ್ನು ಸಿದ್ಧಗೊಳಿಸಿತು.ಆನಂತರ, 1976ರಲ್ಲಿ ಒಡಿಶಾ ಗವರ್ನರ್ ಭಗಬತ್ ದಯಾಳ್ ಶರ್ಮಾ ನೇತೃತ್ವದ ಸಮಿತಿಯ ಮೇಲ್ವಿಚಾರಣೆಯಲ್ಲಿ ಆಭರಣಗಳ ಪಟ್ಟಿ ಮಾಡಲಾಗಿತ್ತು.

Read More
Next Story