
ರಾವಣ ಕೂಡ ನಮ್ಮನ್ನು ಬೇರ್ಪಡಿಸಲಾರ: ಸಿಸೋಡಿಯಾ
ನವದೆಹಲಿ: ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ತಮ್ಮ ಸಂಬಂಧ ರಾಮ ಮತ್ತು ಲಕ್ಷ್ಮಣರ ಸಂಬಂಧವಿದ್ದಂತೆ .ರಾವಣ ಕೂಡ ತಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಎಎಪಿ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು, ʻಸಿಸೋಡಿಯಾ ನಾಟಕದ ರಾಜ. ಮುಂದಿನ ತಿಂಗಳು ರಾಮಲೀಲಾಗೆ ಮುನ್ನ ತಮ್ಮನ್ನು ಲಕ್ಷ್ಮಣ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ,ʼ ಎಂದು ಟೀಕಿಸಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜಂತರ್ ಮಂತರ್‌ನಲ್ಲಿ ಕೇಜ್ರಿವಾಲ್ ನಡೆಸಿದ ಜನತಾ ಕಿ ಅದಾಲತ್ ನಲ್ಲಿ ಮಾತನಾಡಿದ ಸಿಸೋಡಿಯಾ,ʼತಮ್ಮನ್ನು ಅರವಿಂದ್ ಕೇಜ್ರಿವಾಲ್ ಅವರಿಂದ ಪ್ರತ್ಯೇಕಿಸಲು ಬಿಜೆಪಿ ಬಯಸಿದೆ. ಆದರೆ, ರಾಮನಿಂದ ಲಕ್ಷ್ಮಣನನ್ನು ಬೇರ್ಪಡಿಸುವ ಶಕ್ತಿ ರಾವಣನಿಗೆ ಇಲ್ಲ,ʼ ಎಂದು ಹೇಳಿದರು.
ʻಕೇಜ್ರಿವಾಲ್ ಎಲ್ಲಿಯವರೆಗೆ ರಾಮನಾಗಿ ಸರ್ವಾಧಿಕಾರಿ ರಾವಣನ ವಿರುದ್ಧ ಹೋರಾಡುತ್ತಾರೋ, ಅಲ್ಲಿಯವರೆಗೆ ನಾನು ಲಕ್ಷ್ಮಣನಾಗಿ ಅವರ ಪರವಾಗಿ ನಿಲ್ಲುತ್ತೇನೆ. ತಾವು ಪ್ರಮಾಣಿಕರು ಎಂದು ಜನರು ಪ್ರಮಾಣೀಕರಿಸದ ಹೊರತು ದೆಹಲಿ ಸರ್ಕಾರದಲ್ಲಿ ಸಚಿವ ಹುದ್ದೆಯನ್ನು ವಹಿಸಿಕೊಳ್ಳುವುದಿಲ್ಲ,ʼ ಎಂದು ಸಿಸೋಡಿಯಾ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ʻನಾನು ಪತ್ರಕರ್ತನಾಗಿದ್ದಾಗ 2002ರಲ್ಲಿ 5 ಲಕ್ಷ ರೂ.ಗೆ ಸಣ್ಣ ಮನೆ ಖರೀದಿಸಿದ್ದೆ. ನನ್ನ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ರೂ. ಇದ್ದಿತ್ತು. ಅದನ್ನು ಅವರು ವಶಪಡಿಸಿಕೊಂಡರು. ಇಡಿ ನನ್ನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದರಿಂದ, ಕಾಲೇಜಿನಲ್ಲಿ ಓದುತ್ತಿರುವ ಮಗನ ಶುಲ್ಕವನ್ನು ಪಾವತಿಸಲು ಜನರ ಬಳಿ ಬೇಡಬೇಕಾಯಿತು. ತಾವು ಸೆರೆಮನೆಗೆ ಹೋದ ನಂತರ ಬಿಜೆಪಿಗೆ ಸೇರಬೇಕೆಂದು ಪುಸಲಾಯಿಸಲಾಯಿತು,ʼ ಎಂದು ಹೇಳಿದರು.
ಆದರೆ, ದೆಹಲಿ ಬಿಜೆಪಿ ಮುಖ್ಯಸ್ಥರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ʻಜೈಲಿನಿಂದ ಬಿಡುಗಡೆಯಾದ ಒಂದೂವರೆ ತಿಂಗಳ ನಂತರ ಅವರು ಇದನ್ನು ನೆನಪಿಸಿಕೊಂಡಿರುವುದು ಆಶ್ಚರ್ಯಕರ,ʼ ಎಂದು ಸಚ್‌ದೇವ ಹೇಳಿದ್ದಾರೆ.