ಮೀಸಲು ರದ್ದು ಸಾಧ್ಯವಿಲ್ಲ: ರಾಹುಲ್ ವಿರುದ್ಧ ಶಾ ವಾಗ್ದಾಳಿ
x

ಮೀಸಲು ರದ್ದು ಸಾಧ್ಯವಿಲ್ಲ: ರಾಹುಲ್ ವಿರುದ್ಧ ಶಾ ವಾಗ್ದಾಳಿ

ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಡನೆ ನಡೆಸಿದ ಸಂವಾದದಲ್ಲಿ ರಾಹುಲ್‌ ಗಾಂಧಿ, ಭಾರತವು ನ್ಯಾಯಬದ್ಧ ದೇಶವಾದಾಗ ಮೀಸಲು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತದೆ; ಆದರೆ, ಈಗ ಅಲ್ಲ ಎಂದು ಹೇಳಿದ್ದರು.


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೀಸಲು ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ʻಇದು ಕಾಂಗ್ರೆಸ್‌ ನ ಮೀಸಲು ವಿರೋಧಿ ಮುಖವನ್ನು ಪ್ರತಿಬಿಂಬಿಸುತ್ತದೆʼ ಎಂದು ಬುಧವಾರ ಹೇಳಿದ್ದಾರೆ.

ಬಿಜೆಪಿ ಇರುವವರೆಗೆ ಮೀಸಲು ರದ್ದುಗೊಳಿಸಲು ಯಾರಿಗೂ ಸಾಧ್ಯವಿಲ್ಲ ಅಥವಾ ರಾಷ್ಟ್ರದ ಭದ್ರತೆಯಲ್ಲಿ ಹಸ್ತಕ್ಷೇಪ ನಡೆಸಲು ಆಗುವುದಿಲ್ಲ ಎಂದು ಹೇಳಿದರು.

ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಡನೆ ಸಂವಾದದಲ್ಲಿ ರಾಹುಲ್‌, ಭಾರತವು ನ್ಯಾಯಬದ್ಧ ದೇಶವಾದಾಗ ಮೀಸಲು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತದೆ; ಆದರೆ, ಈಗ ಅಲ್ಲ ಎಂದು ಹೇಳಿದ್ದರು.

ʻದೇಶವನ್ನು ವಿಭಜಿಸಲು ಪಿತೂರಿ ನಡೆಸುವ ಶಕ್ತಿಗಳೊಂದಿಗೆ ನಿಲ್ಲುವುದು ಮತ್ತು ದೇಶ ವಿರೋಧಿ ಹೇಳಿಕೆ ನೀಡುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿದೆ,ʼ ಎಂದು ಷಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿರುಕು ಮೂಡಿಸುವ ಕಾಂಗ್ರೆಸ್ ನೀತಿ: ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ʻರಾಷ್ಟ್ರವಿರೋಧಿ ಮತ್ತು ಮೀಸಲು ವಿರೋಧಿ ಅಜೆಂಡಾʼವನ್ನು ಬೆಂಬಲಿಸುವ ಅಥವಾ ವಿದೇಶಿ ವೇದಿಕೆಗಳಲ್ಲಿ ಭಾರತ ವಿರೋಧಿ ಹೇಳಿಕೆ ನೀಡುವ ರಾಹುಲ್, ದೇಶದ ಭದ್ರತೆಗೆ ಬೆದರಿಕೆ ಹಾಕುತ್ತಿರುತ್ತಾರೆ ಮತ್ತು ಭಾವನೆಗಳನ್ನು ನೋಯಿಸುತ್ತಾರೆ ಎಂದು ಶಾ ಹೇಳಿದರು.

ʻರಾಹುಲ್ ಅವರ ಹೇಳಿಕೆಯು ಪ್ರಾದೇಶಿಕತೆ, ಧರ್ಮ ಮತ್ತು ಭಾಷೆಯ ನೆಲೆಯಲ್ಲಿ ಬಿರುಕುಗಳನ್ನು ಮೂಡಿಸುವ ಕಾಂಗ್ರೆಸ್‌ನ ರಾಜಕೀಯ ವನ್ನು ಬಯಲಿಗೆಳೆಯುತ್ತದೆ. ಮೀಸಲು ರದ್ದು ಬಗ್ಗೆ ಮಾತನಾಡಿ, ಕಾಂಗ್ರೆಸ್‌ನ ಮೀಸಲು ವಿರೋಧಿ ಮುಖವನ್ನು ಮುನ್ನೆಲೆಗೆ ತಂದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕನ ಮನಸ್ಸಿನ ಆಲೋಚನೆಗಳು ಪದಗಳಾಗಿ ಹೊರಬಿದ್ದಿವೆ,ʼ ಎಂದು ಶಾ ಹೇಳಿದರು.

Read More
Next Story