
ಸಾಕಷ್ಟು ಪೆಟ್ರೋಲ್ ದಾಸ್ತಾನು ಇದೆ, ಆತಂಕದಲ್ಲಿ ಖರೀದಿಸುವ ಅಗತ್ಯವಿಲ್ಲ; ಜನರಿಗೆ ಐಒಸಿ ಭರವಸೆ
ಪೆಟ್ರೋಲ್ ಪಂಪ್‌ಗಳಲ್ಲಿ ಜನರು ಇಂಧನ ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನಲೆ ಸಾಕಷ್ಟು ಇಂಧನ ದಾಸ್ತಾನು ಇದೆ ಭಯಪಡಬೇಡಿ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ದೇಶದಲ್ಲಿ ಸಾಕಷ್ಟು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ, ಎಲ್‌ಪಿಜಿ ದಾಸ್ತಾನು ಲಭ್ಯವಿದೆ ಮತ್ತು ಇಂಧನ ಖಾಲಿಯಾಗಿದೆ ಎಂದು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ದೇಶದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಶುಕ್ರವಾರ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದಂತೆ ಪೆಟ್ರೋಲ್ ಪಂಪ್‌ಗಳಲ್ಲಿ ಜನರು ಇಂಧನ ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿರುವ ಪೋಸ್ಟ್‌ಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಹಿನ್ನೆಲೆ ಐಒಸಿ ತನ್ನ ಎಕ್ಸ್ ಖಾತೆಯಲ್ಲಿ, "ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ ಮತ್ತು ನಮ್ಮ ಎಲ್ಲಾ ಪೂರೈಕೆ ಮಾರ್ಗಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ. ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ. ನಮ್ಮ ಎಲ್ಲಾ ಮಳಿಗೆಗಳಲ್ಲಿ ಇಂಧನ ಮತ್ತು ಎಲ್‌ಪಿಜಿ ಲಭ್ಯವಿದೆ ಎಂದು ತಿಳಿಸಿದೆ.
"ತನ್ನ ರಾಷ್ಟ್ರವ್ಯಾಪಿ ಜಾಲದಾದ್ಯಂತದ ಎಲ್ಲಾ ಬಿಪಿಸಿಎಲ್ ಇಂಧನ ಕೇಂದ್ರಗಳು ಮತ್ತು ಎಲ್‌ಪಿಜಿ ವಿತರಕರು ಸರಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಗ್ರಾಹಕರ ಇಂಧನ ಅಗತ್ಯಗಳನ್ನು ಪೂರೈಸಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಆತಂಕದಲ್ಲಿ ಖರೀದಿಸುವ ಅಗತ್ಯವಿಲ್ಲ. ನಮ್ಮ ಪೂರೈಕೆ ಸರಪಳಿ ಪರಿಣಾಮಕಾರಿಯಾಗಿ ಉಳಿದಿವೆ. ಜನರು ಶಾಂತವಾಗಿ ಹಾಗೂ ಅನಗತ್ಯ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ನಿಮಗೆ ಉತ್ತಮ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದೆ.
ಮೇ 8-9ರ ಮಧ್ಯರಾತ್ರಿ ಪಾಕಿಸ್ತಾನದ ಸಶಸ್ತ್ರ ಪಡೆಗಳು, ಡ್ರೋನ್‌ಗಳು ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ಬಳಸಿ ಇಡೀ ಪಶ್ಚಿಮ ಗಡಿಯಲ್ಲಿ ಅನೇಕ ದಾಳಿಗಳನ್ನು ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನ ಹಲವಾರು ಪಟ್ಟಣಗಳು ವಿದ್ಯುತ್ ಕಡಿತಗೊಳಿಸಿದವು. ಪಾಕ್ನ ದಾಳಿಯನ್ನು ಭಾರತೀಯ ಸೇನೆ ತಟಸ್ಥಗೊಳಿಸಿತ್ತು. ಈ ಉದ್ವಿಗ್ನತೆಯ ಬಳಿಕ ವಿಶೇಷವಾಗಿ ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯಗಳಲ್ಲಿ ಜನರು ಭಯಪಟ್ಟು ಇಂಧನ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು.