
ಇಂದು ಭಾರತ-ಪಾಕ್ ಡಿಜಿಎಂಒ ಸಭೆ ಇಲ್ಲ: ಸೇನೆ ಸ್ಪಷ್ಟನೆ
ಮೇ 12ರಂದು ನಡೆದ ಮೊದಲ ಹಂತದ ಸೇನಾಧಿಕಾರಿಗಳ ಸಭೆಯಲ್ಲಿ, ಎರಡೂ ದೇಶಗಳು ಗಡಿಯಲ್ಲಿ ಗುಂಡು ಹಾರಿಸಬಾರದು ಮತ್ತು ಆಕ್ರಮಣಕಾರಿ ಚಟುವಟಿಕೆಗಳನ್ನು ನಡೆಸಬಾರದು ಎಂದು ನಿರ್ಧರಿಸಲಾಗಿತ್ತು.
ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕರ (ಡಿಜಿಎಂಒ) ಮಟ್ಟದ ಸಭೆ ಇಂದು ನಡೆಯುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಮೇ 12ರಂದು ನಡೆದ ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ಉಭಯ ದೇಶಗಳ ನಡುವೆ ಏರ್ಪಟ್ಟ ಕದನ ವಿರಾಮ ಒಪ್ಪಂದವು ಮುಂದುವರಿಯಲಿದೆ ಎಂದು ಸೇನೆ ತಿಳಿಸಿದೆ.
ಈ ಕುರಿತು ಭಾನುವಾರ ಮಾಹಿತಿ ನೀಡಿದ ಸೇನಾ ಅಧಿಕಾರಿಗಳು, "ಇಂದು ಯಾವುದೇ ಡಿಜಿಎಂಒ ಸಭೆ ನಿಗದಿಯಾಗಿಲ್ಲ. ಮೊದಲ ಹಂತದ ಮಾತುಕತೆಯಲ್ಲಿ ಕೈಗೊಂಡಿರುವ ನಿರ್ಧಾರಕ್ಕೆ ಯಾವುದೇ ಅಂತಿಮ ದಿನಾಂಕವಿಲ್ಲ. ಆದ್ದರಿಂದ ಉಭಯ ದೇಶಗಳ ನಡುವಿನ ಕದನ ವಿರಾಮ ಮುಂದುವರಿಯುತ್ತದೆ" ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ ಬಳಿಕ ಸಂಘರ್ಷ ತೀವ್ರಗೊಂಡಿತ್ತು. ನಂತರ ಎರಡೂ ದೇಶಗಳು ಮಾತುಕತೆ ನಡೆಸಿ ಕದನ ವಿರಾಮಕ್ಕೆ ಸಹಮತ ಸೂಚಿಸಿದ್ದವು.
ಮೇ 12ರಂದು ನಡೆದ ಮೊದಲ ಹಂತದ ಸೇನಾಧಿಕಾರಿಗಳ ಸಭೆಯಲ್ಲಿ, ಎರಡೂ ದೇಶಗಳು ಗಡಿಯಲ್ಲಿ ಗುಂಡು ಹಾರಿಸಬಾರದು ಮತ್ತು ಆಕ್ರಮಣಕಾರಿ ಚಟುವಟಿಕೆಗಳನ್ನು ನಡೆಸಬಾರದು ಎಂದು ನಿರ್ಧರಿಸಲಾಗಿತ್ತು. ಅಲ್ಲದೆ, ಕದನ ವಿರಾಮವನ್ನು ಮುಂದುವರಿಸಲು ಒಪ್ಪಿಕೊಳ್ಳಲಾಗಿತ್ತು.
ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕವೂ ಪಾಕಿಸ್ತಾನದ ಸೇನೆಯು ಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿತ್ತು. ಅಂತರರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿ ಬಳಿ ದಾಳಿಗಳನ್ನು ನಡೆಸಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಇದಕ್ಕೆ ಭಾರತೀಯ ಸೇನೆಯೂ ಸೂಕ್ತ ಪ್ರತ್ಯುತ್ತರ ನೀಡಿತ್ತು.
ಈ ಹಿಂದೆ, ಡಿಜಿಎಂಒಗಳ ಮಟ್ಟದ ಮತ್ತೊಂದು ಸಭೆ ಮೇ 18ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿದ್ದವು. ಆದರೆ, ಭಾರತೀಯ ಸೇನೆಯು ಇದನ್ನು ನಿರಾಕರಿಸಿದ್ದು, ಸದ್ಯಕ್ಕೆ ಯಾವುದೇ ಸಭೆ ಇಲ್ಲ ಮತ್ತು ಕದನ ವಿರಾಮ ಒಪ್ಪಂದವು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.