ಮಹಾರಾಷ್ಟ್ರ ನಾಯಕತ್ವದಲ್ಲಿ ಬದಲಾವಣೆ ಇಲ್ಲ; ಬಿಜೆಪಿ
ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಟ್ಟಿಗೆ ಮಹಾರಾಷ್ಟ್ರದ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ ಬಿಜೆಪಿ, ಮಹಾರಾಷ್ಟ್ರ ನಾಯಕತ್ವದಲ್ಲಿ ಯಾವುದೇ ಬದಲಾವಣೆಯನ್ನು ತಳ್ಳಿ ಹಾಕಿದೆ. ವರ್ಷಾಂತ್ಯ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ-ಎನ್‌ಸಿಪಿ ಮೈತ್ರಿಕೂಟ ವಿಜಯಶಾಲಿಯಾಗಲು ನೀಲನಕ್ಷೆಯನ್ನು ಸಿದ್ಧಗೊಳಿಸುತ್ತಿದೆ ಎಂದು ಹೇಳಿದೆ.
ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಹಾರಾಷ್ಟ್ರ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮತದಾನ ತಂತ್ರ: ಮಹಾರಾಷ್ಟ್ರದಲ್ಲಿ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ʻಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಮರುಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರದ ಬಗ್ಗೆ ನಾಯಕರು ಚರ್ಚಿಸಿದರು,ʼ ಎಂದು ಗೋಯಲ್ ಹೇಳಿದರು.
ಸಭೆಯಲ್ಲಿ ಯಾರಿದ್ದರು?: ಹಿರಿಯ ಮುಖಂಡರಾದ ಬಿ.ಎಲ್.ಸಂತೋಷ್, ಭೂಪೇಂದರ್ ಯಾದವ್, ಅಶ್ವಿನಿ ವೈಷ್ಣವ್, ರಾಜ್ಯ ಬಿಜೆಪಿ ಮುಖಂಡ ಚಂದ್ರಶೇಖರ ಬಾವಂಕುಲೆ, ಸುಧೀರ್ ಮುಂಗಂಟಿವಾರ್, ಚಂದ್ರಕಾಂತ ಪಾಟೀಲ್, ಪಂಕಜಾ ಮುಂಡೆ, ರಾವ್ ಸಾಹೇಬ್ ದಾನ್ವೆ, ವಿನೋದ್ ತಾವಡೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಒಂಬತ್ತು ಸ್ಥಾನ ಗೆದ್ದುಕೊಂಡಿದೆ. 2019 ರಲ್ಲಿ ಪಕ್ಷ 23 ಸ್ಥಾನ ಗೆದ್ದಿತ್ತು.
ಊಹಾಪೋಹಗಳಿಗೆ ತೆರೆ: ʻಮಹಾಯುತಿ ಮೈತ್ರಿಕೂಟದ ಪಾಲುದಾರರೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು ಎಂಬ ಬಗ್ಗೆ ನೀಲನಕ್ಷೆಯೊಂದನ್ನು ಸಿದ್ಧಪಡಿಸಿದ್ದೇವೆ, ʼ ಎಂದು ಸಭೆ ನಂತರ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.
ಸೆಪ್ಟೆಂಬರ್-ಅಕ್ಟೋಬರ್ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು, ಸಂಘಟನೆಯತ್ತ ಗಮನ ಹರಿಸಲು ಮಹಾಯುತಿ ಸರ್ಕಾರಕ್ಕೆ ರಾಜೀನಾಮೆ ನೀಡಲು ಫಡ್ನವೀಸ್ ಮುಂದಾಗಿದ್ದರು.
ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಮೈತ್ರಿಕೂಟದಲ್ಲಿ ಮುಂದುವರಿಕೆ ಬಗ್ಗೆ ರಾಜ್ಯದಲ್ಲಿ ಊಹಾಪೋಹ ಹಬ್ಬಿದೆ. ಕಾರ್ಯಕ್ಷಮತೆ ಬಗ್ಗೆ ಚರ್ಚೆ: ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಬಗ್ಗೆಯೂ ಚರ್ಚೆ ನಡೆದಿದೆ.
ಮಹಾಯುತಿ ಮತ್ತು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವಿನ ಮತಗಳ ನಡುವಿನ ವ್ಯತ್ಯಾಸ ಕೇವಲ ಶೇ.0.3 ಇದೆ ಎಂದು ಫಡ್ನವೀಸ್ ಹೇಳಿದರು. ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಲೋಪ ಮತ್ತು ಬಲಾಬಲಗಳ ಬಗ್ಗೆ ನಾಯಕರು ವಿವರವಾಗಿ ಚರ್ಚಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾರ್ಯತಂತ್ರದ ಬಗ್ಗೆ ಬಿಜೆಪಿ ನಾಯಕರು, ಶಿವಸೇನೆ ಮತ್ತು ಎನ್‌ಸಿಪಿ ಜೊತೆ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.
2019ರಲ್ಲಿ ಮಹಾರಾಷ್ಟ್ರದ 48 ಲೋಕಸಭೆ ಸ್ಥಾನಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 41 ಸ್ಥಾನ ಗೆದ್ದಿತ್ತು. 2024ರಲ್ಲಿ ಎನ್‌ಡಿಎ ಸ್ಥಾನ ಗಳಿಕೆ 17(ಬಿಜೆಪಿ ಒಂಬತ್ತು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 7 ಮತ್ತು ಎನ್‌ಸಿಪಿ ಒಂದು)ಕ್ಕೆ ಇಳಿದಿದೆ.