ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ಇಲ್ಲ: ಕೇಂದ್ರ ಸರ್ಕಾರ
x

ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ಇಲ್ಲ: ಕೇಂದ್ರ ಸರ್ಕಾರ

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಗದಿದ್ದಲ್ಲಿ ವಿಶೇಷ ಹಣಕಾಸು ಪ್ಯಾಕೇಜ್‌ ನೀಡಬೇಕು ಎಂದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈಗಾಗಲೇ ಕೇಂದ್ರಕ್ಕೆ ತಿಳಿಸಿದೆ.


ಹೊಸದಿಲ್ಲಿ, ಜು 22: ಅಂತರ್ ಸಚಿವಾಲಯ ಗುಂಪು 2012 ರಲ್ಲಿ ಸಿದ್ಧಪಡಿಸಿದ ವರದಿಯನ್ನು ಉಲ್ಲೇಖಿಸಿರುವ ಕೇಂದ್ರ ಸರ್ಕಾರ, ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಸೋಮವಾರ ಹೇಳಿದೆ. ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿ(ಯು), ರಾಜ್ಯಕ್ಕೆ ಹಿಂದುಳಿದ ಸ್ಥಾನಮಾನಕ್ಕೆ ಒತ್ತಾಯಿಸಿದ ಒಂದು ದಿನದ ನಂತರ ಈ ನಿಲುವು ಪ್ರಕಟವಾಗಿದೆ.

ಮುಂಗಾರು ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ಹಿಂದೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ)ಯು ವಿಶೇಷ ಪರಿಗಣನೆ ಅಗತ್ಯವಿರುವ ಕೆಲವು ರಾಜ್ಯಗಳಿಗೆ ವಿಶೇಷ ವರ್ಗದ ಸ್ಥಾನಮಾನ ನೀಡಿತ್ತು ಎಂದು ಹೇಳಿದರು.

ಗುಡ್ಡಗಾಡು ಮತ್ತು ದುರ್ಗಮ ಭೂಪ್ರದೇಶ, ಕಡಿಮೆ ಜನಸಾಂದ್ರತೆ ಅಥವಾ ಬುಡಕಟ್ಟು ಜನರು ಗಣನೀಯ ಪ್ರಮಾಣದಲ್ಲಿ ಇರುವುದು, ನೆರೆಯ ರಾಷ್ಟ್ರಗಳ ಗಡಿಯ ಆಯಕಟ್ಟಿನ ಪ್ರದೇಶ, ದುರ್ಬಲ ಆರ್ಥಿಕ ಮತ್ತು ಮೂಲಸೌಕರ್ಯ ಹಾಗೂ ರಾಜ್ಯದ ಹಣಕಾಸಿನ ಸ್ವರೂಪ ಕಾರ್ಯಸಾಧ್ಯವಲ್ಲದೆ ಇರುವುದು ಇತ್ಯಾದಿಯನ್ನು ಒಳಗೊಂಡಿದೆ ಎಂದು ಅವರು ಜೆಡಿಯು ಸದಸ್ಯ ರಾಮಪ್ರೀತ್ ಮಂಡಲ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮೇಲಿನ ಎಲ್ಲಾ ಅಂಶಗಳ ಸಮಗ್ರ ಪರಿಗಣನೆ ಮತ್ತು ರಾಜ್ಯದ ಪರಿಸ್ಥಿತಿಯನ್ನು ಆಧರಿಸಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ʻವಿಶೇಷ ವರ್ಗದ ಸ್ಥಾನಮಾನಕ್ಕೆ ಬಿಹಾರದ ವಿನಂತಿಯನ್ನು ಅಂತರ್‌ ಸಚಿವ ಗುಂಪು(ಐಎಂಜಿ) ಪರಿಗಣಿಸಿತ್ತು. ಸಮಿತಿ ತನ್ನ ವರದಿಯನ್ನು ಮಾರ್ಚ್ 30, 2012 ರಂದು ಸಲ್ಲಿಸಿತು. ಐಎಂಜಿ ಅಸ್ತಿತ್ವದಲ್ಲಿರುವ ಎನ್‌ಡಿಸಿ ಮಾನದಂಡಗಳ ಆಧಾರದ ಮೇಲೆ ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲು ಆಗುವುದಿಲ್ಲ ಎಂದಿತು ,ʼ ಎಂದು ಸಚಿವರು ಹೇಳಿದರು. ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿತ್ತು.

ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಜೆಡಿಯು ನಾಯಕ ಸಂಜಯ್ ಕುಮಾರ್ ಝಾ ಅವರು ಪಕ್ಷದ ವಿಶೇಷ ಸ್ಥಾನಮಾನದ ಬೇಡಿಕೆಗೆ ಧ್ವನಿಗೂಡಿಸಿದರು. ಬಿಜೆಪಿ ಮಿತ್ರ ಪಕ್ಷವಾಗಿರುವ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ಪ್ರತಿಪಕ್ಷ ಆರ್‌ಜೆಡಿ ಕೂಡ ಬೇಡಿಕೆಗೆ ಧ್ವನಿಗೂಡಿಸಿದವು.

ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಗದಿದ್ದಲ್ಲಿ, ವಿಶೇಷ ಹಣಕಾಸು ಪ್ಯಾಕೇಜ್‌ ನೀಡಬೇಕು ಎಂದು ಜೆಡಿಯು ಈಗಾಗಲೇ ಕೇಂದ್ರಕ್ಕೆ ತಿಳಿಸಿದೆ. ಬಿಜೆಡಿ ಒಡಿಷಾಕ್ಕೆ ಮತ್ತು ವೈಎಸ್‌ಆರ್ ಕಾಂಗ್ರೆಸ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೆಂಬ ಬೇಡಿಕೆ ಇರಿಸಿದವು.

14 ನೇ ಹಣಕಾಸು ಆಯೋಗದ ವರದಿಯು ಯಾವುದೇ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದೆ ಎಂದು ಸರ್ಕಾರ ವಾದಿಸಿದೆ. ಇದರಲ್ಲಿ ತೆರಿಗೆ ವಿನಾಯಿತಿ ಮತ್ತು ಫಲಾನುಭವಿ ರಾಜ್ಯಗಳಿಗೆ ಹೆಚ್ಚಿನ ಕೇಂದ್ರ ಅನುದಾನ ಸೇರಿದೆ.

Read More
Next Story