
ನಿತೀಶ್ ಕುಮಾರ್ ಅವರು ಮತ್ತೆ ಆಯ್ಕೆಯಾದರೆ, ಡಬಲ್ ಎಂಜಿನ್ ಸರ್ಕಾರವು ತನ್ನ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಮಹಿಳಾ ಕೇಂದ್ರಿತ ಕಾರ್ಯಕ್ರಮಗಳೇ ನಿತೀಶ್ ಕುಮಾರ್ ಗೆಲುವಿಗೆ ಬುನಾದಿ
ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ತೋರಿದ್ದಾರೆ. ಎನ್‌ಡಿಎ ಅದ್ಭುತ ಗೆಲುವಿಗೆ 2005ರಿಂದ ಮಹಿಳಾ ಸಬಲೀಕರಣ ಒತ್ತು ನೀಡಿರುವುದೇ ಕಾರಣವಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ತೋರಿದ್ದಾರೆ. ಚುನಾವಣೆಯಲ್ಲಿ ಎನ್‌ಡಿಎ ಅದ್ಭುತ ಗೆಲುವಿಗೆ ಅವರ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳೇ ಕಾರಣವಾಗಿದೆ. ವಿವಿಧ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ನೆರವಿನಿಂದ ಮಹಿಳಾ ಮತದಾರರ ಮನ ಗೆದ್ದರು. 2005ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮಹಿಳಾ ಸಬಲೀಕರಣದತ್ತ ಗಮನಹರಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ನಿತೀಶ್ ಕುಮಾರ್, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ, ಉದ್ಯೋಗಗಳಲ್ಲಿ ಶೇ.35 ರಷ್ಟು ಮೀಸಲಾತಿ, ಹೆಚ್ಚಿನ ಅಧ್ಯಯನಕ್ಕೆ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಯರಿಗೆ ಶಾಲಾ ಉಡುಪುಗಳು ಮತ್ತು ಬೈಸಿಕಲ್‌ಗಳನ್ನು ವಿತರಿಸಿದರು. ಮಹಿಳೆಯರಿಗಾಗಿ ಗ್ರಾಮೀಣ ಜೀವನೋಪಾಯ ಕಾರ್ಯಕ್ರಮದಡಿಯಲ್ಲಿ ಜೀವಿಕಾ ಸ್ವ-ಸಹಾಯ ಗುಂಪುಗಳನ್ನು ಪ್ರಾರಂಭಿಸಿದರು. ಇಂತಹ ಹಲವು ಕಾರ್ಯಕ್ರಮಗಳು ಎನ್‌ಡಿಎ ಗೆಲುವಿಗೆ ಬುನಾದಿಯಾಗಿವೆ ಎಂಬುದು ರಾಜಕೀಯ ತಜ್ಞರ ಅಭಿಮತವಾಗಿವೆ.
ಮಹಿಳೆಯರಿಗೆ ತಲಾ 10 ಸಾವಿರ ರೂ. :
ನಿತೀಶ್ ಕುಮಾರ್ ಇತ್ತೀಚೆಗಿನ ತಿಂಗಳಲ್ಲಿ ಸುಮಾರು 1.4 ಕೋಟಿ ಮಹಿಳೆಯರಿಗೆ ಉದ್ಯಮವನ್ನು ಪ್ರಾರಂಭಿಸಲು ತಲಾ 10 ಸಾವಿರ ರೂ. ನೀಡಿದರು. ಅಲ್ಲದೇ, ಉತ್ತಮವಾಗಿ ಕೆಲಸ ಮಾಡಿದರೆ 2 ಲಕ್ಷ ರೂ.ವರೆಗೆ ನೀಡುವುದಾಗಿ ಅಶ್ವಾಸನೆ ನೀಡಿದ್ದರು. ಮಧ್ಯಾಹ್ನದ ಬಿಸಿಯೂಟ ಅಡುಗೆ ಮಾಡುವವರಿಗೆ ನೀಡಲಾಗುವ ವೇತನವನ್ನು ಹೆಚ್ಚಳ ಮಾಡಿದ್ದರು. ಆಶಾ ಕಾರ್ಯಕರ್ತರಿಗೆ ಮತ್ತು ಜೀವಿಕಾ ಸ್ವ-ಸಹಾಯ ಗುಂಪುಗಳನ್ನು ನಿರ್ವಹಿಸುವಲ್ಲಿ ತೊಡಗಿರುವವರಿಗೆ ನೀಡುವ ಗೌರವಧನವನ್ನೂ ಹೆಚ್ಚಿಸಿದರು.
ರಾಜ್ಯದಲ್ಲಿ ಮದ್ಯ ನಿಷೇಧ:
ರಾಜ್ಯದಲ್ಲಿ ಮದ್ಯ ನಿಷೇಧ ಜಾರಿಯಿಂದ ಮಹಿಳೆಯರು ಸಂತಸಗೊಂಡಿದ್ದಾರೆ. ಮದ್ಯ ನಿಷೇಧ ಸಂಪೂರ್ಣವಾಗಿ ಯಶಸ್ವಿಯಾಗದಿದ್ದರೂ ಮಹಿಳಾ ವರ್ಗವು ಹರ್ಷಗೊಂಡಿದೆ. ಸಾರ್ವಜನಿಕ ಕಿರಿಕಿರಿ, ಕೌಟುಂಬಿಕ ಹಿಂಸಾಚಾರವನ್ನು ನಿಯಂತ್ರಿಸಿದೆ. 1990 ರಿಂದ 2005 ರವರೆಗೆ ಆರ್‌ಜೆಡಿ ಆಳ್ವಿಕೆಯಲ್ಲಿ ರಾಜ್ಯವು ಕಂಡಿದ್ದ ಜಂಗಲ್ ರಾಜ್ (ಕಾನೂನುಬಾಹಿರತೆ) ಬಗ್ಗೆ ಜನರಿಗೆ ಇರುವ ಭಯ ಎನ್‌ಡಿಎ ಗೆಲುವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಮಹಿಳೆಯರು ಕಿಂಗ್ ಮೇಕರ್:
ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಗಮನಿಸಿದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಬಿಹಾರ ರಾಜ್ಯದ 38 ಜಿಲ್ಲೆಗಳ ಪೈಕಿ 37 ಜಿಲ್ಲೆಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದ್ದಾರೆ. ಸುಮಾರು 71.8 ಪ್ರತಿಶತ ಮಹಿಳಾ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದ್ದಾರೆ. 62.9 ಪ್ರತಿಶತ ಪುರುಷ ಮತದಾರರು ಮತ ಚಲಾಯಿಸಿದ್ದಾರೆ. ಮಹಿಳಾ ಮತ್ತು ಪುರುಷ ಮತದಾರರ ನಡುವೆ ಶೇ. 8.9 ರಷ್ಟು ಮತದಾನದ ಅಂತರ ಇದೆ. ಇದರಿಂದ ಮಹಿಳೆಯರು ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎಗೆ ಮತ ಹಾಕಿದ್ದಾರೆ ಎನ್ನಲಾಗಿದೆ.
ಟೀಕೆಗಳಿಗೆ ಚುನಾವಣಾ ಫಲಿತಾಂಶ ಪ್ರತ್ಯುತ್ತರ:
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳು ನಿತೀಶ್ ಕುಮಾರ್ ಅವರನ್ನು ತೀವ್ರವಾಗಿ ಟೀಕಿಸಿದ್ದವು. ಆ ಎಲ್ಲಾ ಟೀಕೆಗಳಿಗೂ ಚುನಾವಣಾ ಫಲಿತಾಂಶ ಪ್ರತ್ಯುತ್ತರ ನೀಡಿದೆ. "ಟೈಗರ್ ಅಭಿ ಜಿಂದಾ ಹೈ" (ಹುಲಿ ಇನ್ನೂ ಜೀವಂತವಾಗಿದೆ) ಎಂಬ ಬರಹವಿರುವ ಪೋಸ್ಟರ್ಗಳು ರಾರಾಜಿಸುತ್ತಿವೆ. ಹುಲಿ ಜೀವಂತವಾಗಿರುವುದು ಮಾತ್ರವಲ್ಲದೇ, ಘರ್ಜಿಸುತ್ತಾ ಎದುರಾಳಿಗಳನ್ನು ಬೇಟೆಯಾಡುತ್ತಿದೆ ಎಂಬ ಶ್ಲಾಘನೆ ವ್ಯಕ್ತವಾಗುತ್ತಿವೆ.
ನಿತೀಶ್ ಕುಮಾರ್ 2005 ರಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಇತ್ತೀಚೆಗೆ ಅವರನ್ನು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಅಸಮರ್ಥ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥ ಮತ್ತು ಸ್ವಾರ್ಥ ಹಿತಾಸಕ್ತಿ ಹೊಂದಿರುವ ವ್ಯಕ್ತಿ ಎಂದು ಟೀಕಿಸಲಾಗುತ್ತಿತ್ತು. ಆದರೆ ನಿತೀಶ್ ಕುಮಾರ್ ಚುನಾವಣಾ ಫಲಿತಾಂಶದಲ್ಲಿ ಸುನಾಮಿ ಅಲೆ ಎಬ್ಬಿಸಿದ್ದಾರೆ.

