
ಸೀತಾರಾಮನ್ ಏಳನೇ ಬಜೆಟ್: ಕೊಡುಗೆಗಾಗಿ ಕಾಯುತ್ತಿದೆ ಕರ್ನಾಟಕ
ಲೋಕಸಭಾ ಚುನಾವಣೆ ಬಳಿಕ ಮತ್ತೆ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಆ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ಏಳನೆ ಬಜೆಟ್ ಮಂಡಿಸಲಿದ್ದಾರೆ.
ಮೋದಿ ಸರ್ಕಾರದ 2047ರ ವೇಳೆಗೆ ‘ವಿಕಸಿತ ಭಾರತ’ ಕನಸು ನನಸಾಗಿಸುವ ಉದ್ದೇಶವನ್ನು ಈ ಬಜೆಟ್ ಹೊಂದಿದೆ ಎನ್ನಲಾಗಿದೆ. ಫೆಬ್ರವರಿ 1 ರಂದು ಮಂಡಿಸಲಾದ ಮಧ್ಯಂತರ ಬಜೆಟ್, ಲೋಕಸಭೆ ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಅವಧಿಯ ಆರ್ಥಿಕ ಅಗತ್ಯಗಳನ್ನು ಪೂರೈಸಿದ್ದು, ಸರ್ಕಾರ ರಚನೆ ಬಳಿಕ ಈಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದೆ.
ಮಧ್ಯಮ ವರ್ಗದತ್ತ ಕೇಂದ್ರೀಕರಿಸಲಾಗಿರುವ ಬಜೆಟ್ ತೆರಿಗೆ ಕಡಿತ, ನಿರುದ್ಯೋಗ ಸಮಸ್ಯೆ ನಿವಾರಣೆ, ಆರ್ಥಿಕ ಪ್ರಗತಿ, ಕೃಷಿ, ಆರೋಗ್ಯ ಮಾತ್ರವಲ್ಲದೆ ಮಹಿಳೆ ಮತ್ತು ಯುವಕರ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ಪ್ರಕಟಿಸಲಿದೆ ಎನ್ನಲಾಗಿದೆ.
ಬಜೆಟ್ ವಿತ್ತೀಯ ಕೊರತೆಯು ಶೇ.4.5 ರಷ್ಟಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಶೇ.5.8 ರಷ್ಟಿತ್ತು. ಈ ಬಾರಿಯ ಬಜೆಟ್ ಅವುಗಳನ್ನು ಮೀರಿ ವಿತ್ತೀಯ ಕೊರತೆ ನಿವಾರಣೆಗೆ ಪ್ರಯತ್ನಿಸಲಿದೆ ಎನ್ನಲಾಗಿದೆ.
ಈ ನಡುವೆ ಬಿಜೆಪಿಯೇತರ ಅಧಿಕಾರ ಹೊಂದಿರುವ ದಕ್ಷಿಣ ರಾಜ್ಯಗಳು, ಅದರಲ್ಲೂ ಪ್ರಮುಖವಾಗಿ ಕರ್ನಾಟಕಕ್ಕೆ ಬಜೆಟ್ ಯಾವ ಕೊಡುಗೆ ನೀಡಲಿದೆ ಎನ್ನುವುದನ್ನು ನೋಡಬೇಕಿದೆ. ತೆರಿಗೆ ಆದಾಯದ ಸಮಾನ ಹಂಚಿಕೆ, ಬರ ಮತ್ತು ಪ್ರವಾಹ ಪರಿಹಾರ ಮತ್ತಿತರ ವಿಷಯಗಳಿಗೆ ಸಂಬಂದಿಸಿದಂತೆ ನಿರ್ಮಲಾ ಸೀತಾರಾಮನ್ ಅವರು ಯಾವ ಹೆಜ್ಜೆ ಇರಿಸಲಿದ್ದಾರೆ ಎಂಬ ಬಗ್ಗೆಕರ್ನಾಟಕ ಆಸಕ್ತಿ ಹೊಂದಿದೆ.
ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ತಮ್ಮ ಬಜೆಟ್‌ನಲ್ಲಿ ಏನು ಕೊಡುಗೆ ನೀಡಲಿದ್ದಾರೆ ಹಾಗೂ ರೈಲ್ವೇ, ಮೂಲಸೌಕರ್ಯ ಮತ್ತಿತರ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಯಾವ ರೀತಿಯಲ್ಲಿ ಬಜೆಟ್ ಪಾಲು ನೀಡಲಿದ್ದಾರೆ ಎನ್ನವುದು ಕುತೂಹಲಕರ ಅಂಶವಾಗಿದೆ.