
ಸ್ವಾತಿ ಮಲಿವಾಲ್‌ಗೆ ನಿರ್ಭಯ ತಾಯಿ ಬೆಂಬಲ
ಸ್ವಾತಿ ಮಲಿವಾಲ್‌ಗೆ ನ್ಯಾಯ ದೊರಕಿಸಿಕೊಡುವ ಮೂಲಕ ದೆಹಲಿಯ ‘ಮಗ’ ಮತ್ತು ‘ಸಹೋದರ’ ಎಂಬ ಮಾತನ್ನು ಮುಖ್ಯಮಂತ್ರಿ ನಡೆಸಿಕೊಡಬೇಕು ಎಂದು 2012ರ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾದೇವಿ ಆಗ್ರಹಿಸಿದ್ದಾರೆ.
ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಅವರಿಗೆ 2012 ರ ದೆಹಲಿ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ನಿರ್ಭಯ ಅವರ ತಾಯಿ ಆಶಾ ದೇವಿ ಅವರು ಬೆಂಬಲ ನೀಡಿದ್ದಾರೆ. ಮಲಿವಾಲ್ ಅವರು ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ʻಮುಖ್ಯಮಂತ್ರಿಗಳ ನಿವಾಸದಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼ ಎಂದು ಆಶಾ ದೇವಿ ಹೇಳಿದ್ದಾರೆ.
ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲಿ ಅವರು,ʻಇತರ ಮಹಿಳೆಯರ ಹಕ್ಕುಗಳಿಗೆ ಮಾತನಾಡುವ ಮತ್ತು ನಿರ್ಭಯಗೆ ನ್ಯಾಯ ಕೇಳುವ ಮಹಿಳೆ ಮೇಲೆ ಅಧಿಕಾರದಲ್ಲಿರುವವರು ಹಲ್ಲೆ ನಡೆಸಿರುವುದು ಶೋಚನೀಯ. ರಾಜ್ಯಸಭೆ ಸದಸ್ಯೆಗೆ ರಕ್ಷಣೆ ಇಲ್ಲ ಎಂದಾದರೆ ಸಾಮಾನ್ಯ ಮಹಿಳೆಯರ ಸುರಕ್ಷತೆಯನ್ನು ಹೇಗೆ ನಿರೀಕ್ಷಿಸಬಹುದು. ಮುಖ್ಯಮಂತ್ರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ದೆಹಲಿಯ ಮಗ ಮತ್ತು ಸಹೋದರ ಎಂಬ ಅವರ ಹೇಳಿಕೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ,ʼ ಎಂದು ದೆಹಲಿ ಮುಖ್ಯಮಂತ್ರಿ ವಿರುದ್ಧ ಕಿಡಿ ಕಾರಿದರು.
ʻನಿರ್ಭಯ ಪ್ರಕರಣದಲ್ಲಿ ಜನರ ಕೋಪ ಮತ್ತು ಆಕ್ರೋಶದಿಂದ ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದಿತು. ಅರವಿಂದ್ ಕೇಜ್ರಿವಾಲ್ ಅವರು ಮಾತಿನಂತೆ ನಡೆಯಲು ಮತ್ತು ಅನುಕರಣೀಯ ಕ್ರಮ ತೆಗೆದುಕೊಳ್ಳಲು ಇದು ಸಮಯ,ʼ ಎಂದು ಆಶಾದೇವಿ ಹೇಳಿದರು.
ವಿಚಾರಣೆಗೆ ಮುಖ್ಯಮಂತ್ರಿ ಮನೆಗೆ ಪೊಲೀಸರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಅಸ್ವಸ್ಥ ಪೋಷಕರ ವಿಚಾರಣೆಗೆ ಪೊಲೀಸರು ಬರಲಿದ್ದಾರೆ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ. ಭೇಟಿಗೆ ಕಾರಣ ನೀಡದಿದ್ದರೂ, ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಶಂಕಿಸಲಾಗಿದೆ. ʻತಮ್ಮ ಪೋಷಕರು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ನೀವು ಭಾವಿಸುತ್ತೀರಾ?ʼ ಎಂದು ಪಕ್ಷವನ್ನು ಕೇಳಿದ್ದಾರೆ.
ಕೇಜ್ರಿವಾಲ್ ವಿರುದ್ಧ ಹೊಸ ಪಿತೂರಿ: ಅತಿಶಿ- ಆನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಅತಿಶಿ ಮರ್ಲೆನಾ, ʻಕೇಜ್ರಿವಾಲ್ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಾಗಿ ನಿಂದ, ಅವರ ವಿರುದ್ಧ ಬಿಜೆಪಿಯಿಂದ ಹೊಸ ಪಿತೂರಿಗಳು ನಡೆಯುತ್ತಿವೆ,ʼ ಎಂದು ಹೇಳಿದ್ದಾರೆ.
ʻಈಗ ಅವರು ಅಗ್ಗದ ತಂತ್ರ ಬಳಸಿದ್ದಾರೆ. ಪ್ರಧಾನಿ ದೆಹಲಿಯ ಪೊಲೀಸರಿಗೆ ಕೇಜ್ರಿವಾಲ್ ಅವರ ವಯಸ್ಕ, ಅಸ್ವಸ್ಥ ಪೋಷಕರನ್ನು ಪ್ರಶ್ನಿಸುವಂತೆ ಕೇಳಿದ್ದಾರೆ. ದೆಹಲಿಯ ಜನರು ಮತಗಳಿಂದ ಇದಕ್ಕೆ ಪ್ರತಿಕ್ರಿಯಿಸುತ್ತಾರೆ,ʼ ಎಂದು ಹೇಳಿದರು.
ʻನಾನು ಪ್ರಧಾನಿ ಮತ್ತು ಬಿಜೆಪಿಯನ್ನು ಕೇಳಲು ಬಯಸುತ್ತೇನೆ; ಅವರ ತಂದೆ ತಾಯಿ ವಯಸ್ಸು ಸುಮಾರು 80-85. ತಂದೆಗೆ ಬೆಂಬಲವಿಲ್ಲದೆ ನಡೆಯಲು ಸಾಧ್ಯವಿಲ್ಲ. ತಾಯಿ ಆಸ್ಪತ್ರೆಯಲ್ಲಿ ದೀರ್ಘಕಾಲ ಕಳೆದು, ಇತ್ತೀಚೆಗೆ ಮನೆಗೆ ಬಂದಿದ್ದಾರೆ. ಅವರು ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆಯೇ? ವಿಡಿಯೋದಲ್ಲಿ ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿರುವ ಮಲಿವಾಲ್ ಮೇಲೆ ವೃದ್ಧರು ಹಲ್ಲೆ ನಡೆಸಿದ್ದಾರೆಯೇ?ʼ ಎಂದು ಪ್ರಶ್ನಿಸಿದರು.
ʻಮುಖ್ಯಮಂತ್ರಿಯ ಹೆತ್ತವರು ಇಂತಹ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ವಯಸ್ಕರು ತಮ್ಮ ಮತದಿಂದ ಸ್ಪಂದಿಸಬೇಕು ಎಂದು ಮನವಿ ಮಾಡುತ್ತೇನೆ. ದೆಹಲಿಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲುವುದಿಲ್ಲ ಮತ್ತು ದೆಹಲಿಯ ಜನರು ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲುತ್ತಾರೆ,ʼ ಎಂದು ಅತಿಶಿ ಹೇಳಿದರು.
ಎಎಪಿ ನಾಯಕರಿಂದ ಕೊಳಕು ಮಾತು: ಮಲಿವಾಲ್ ʻತನ್ನ ವಿರುದ್ಧ ಕೊಳಕು ವಿಷಯ ಮಾತನಾಡಲು ಮತ್ತು ವೈಯಕ್ತಿಕ ಫೋಟೋಗಳನ್ನು ಸೋರಿಕೆ ಮಾಡಲು ಹಲವಾರು ಎಎಪಿ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ,ʼ ಎಂದು ಮಲಿವಾಲ್ ದೂರಿದ್ದಾರೆ.
'ಬೆಂಬಲಿಸಿದವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಬೆದರಿಸಲಾಗುತ್ತಿದೆ. ಆರೋಪಿ(ಬಿಭವ್ ಕುಮಾರ್)ಗೆ ಹತ್ತಿರವಿರುವ ವರದಿಗಾರರಿಗೆ ನಕಲಿ ಕುಟುಕು ಕಾರ್ಯಾಚರಣೆಯನ್ನು ಸಿದ್ಧಪಡಿಸುವ ಕೆಲಸ ನೀಡಲಾಗಿದೆ,ʼ ಎಂದು ಮಲಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಿರೀಕ್ಷಿಸುತ್ತೇನೆ ಎಂಬ ಕೇಜ್ರಿವಾಲ್ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ʻಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ನನ್ನ ಮೇಲೆ ಬಿಟ್ಟು, ಬಿಜೆಪಿ ಏಜೆಂಟ್ ಎಂದು ಕರೆದು, ನನ್ನ ಚಾರಿತ್ರ್ಯದ ಹಲ್ಲೆ ಮಾಡಿ, ಎಡಿಟ್ ಮಾಡಿದ ವಿಡಿಯೋ ಸೋರಿಕೆ ಮಾಡಿ, ಆರೋಪಿಗೆ ಅಪರಾಧದ ಸ್ಥಳಕ್ಕೆ ಪ್ರವೇಶ ನೀಡಿ ಸಾಕ್ಷ್ಯವನ್ನು ಹಾಳುಮಾಡಲು ಅವಕಾಶ ಮಾಡಿಕೊಟ್ಟ ಬಳಿಕ ಮುಖ್ಯಮಂತ್ರಿ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಯುತ ತನಿಖೆ ನಿರೀಕ್ಷಿಸುವುದಾಗಿ ಹೇಳಿದ್ದಾರೆ. ನಾನು ಇದನ್ನು ನಂಬುವುದಿಲ್ಲ,ʼ ಎಂದು ಮಲಿವಾಲ್ ಹೇಳಿದರು.