ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಎನ್‌ಐಎ ಶೋಧ
x

ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಎನ್‌ಐಎ ಶೋಧ


ಹೊಸದಿಲ್ಲಿ: ಪಾಕಿಸ್ತಾನದ ಬೇಹುಗಾರಿಕೆ ಜಾಲದ ಮೂಲಕ ರಕ್ಷಣಾ ಇಲಾಖೆಯ ವರ್ಗೀಕೃತ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಶೋಧ ನಡೆಸಿದೆ ಎಂದು ಗುರುವಾರ ಹೇಳಿಕೆ ತಿಳಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯು ಕರ್ನಾಟಕ, ಗುಜರಾತ್‌, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದ 16 ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿದೆ. ದೇಶದಲ್ಲಿ ಬೇಹುಗಾರಿಕೆ ಚಟುವಟಿಕೆ ಕೈಗೊಳ್ಳಲು ಪಾಕಿಸ್ತಾನದಿಂದ ಹಣ ಪಡೆದ ಶಂಕಿತರೊಂದಿಗೆ ಬುಧವಾರ ಶೋಧಿಸಿದ ಸ್ಥಳಗಳು ಸಂಪರ್ಕ ಹೊಂದಿವೆ ಎಂದು ಹೇಳಿದೆ.

ಎನ್‌ಐಎ ಶೋಧನೆಯಲ್ಲಿ ಇಪ್ಪತ್ತೆರಡು ಮೊಬೈಲ್ ಫೋನ್‌ಗಳು ಮತ್ತು ಹಲವಾರು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದ ಕೌಂಟರ್ ಇಂಟೆಲಿಜೆನ್ಸ್ ಸೆಲ್‌ ಜನವರಿ 2021 ರಲ್ಲಿ ದಾಖಲಿಸಿಕೊಂಡ ಪ್ರಕರಣವನ್ನು ಜುಲೈ 2023ರಲ್ಲಿ ಎನ್‌ಐಎ ಕೈಗೆತ್ತಿಕೊಂಡಿತು.

ಪ್ರಕರಣವು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಸೂಕ್ಷ್ಮ ಪ್ರಮುಖ ಮಾಹಿತಿ ಸೋರಿಕೆಯನ್ನು ಒಳಗೊಂಡಿದೆ. ಎನ್‌ಐಎ ಜುಲೈ 19, 2023 ರಂದು ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪ ಸಲ್ಲಿಸಿತ್ತು; ಇದರಲ್ಲಿ ಪಾಕಿಸ್ತಾನಿ ಪ್ರಜೆ ಮೀರ್ ಬಾಲಾಜ್ ಖಾನ್ ಒಬ್ಬರು.‌ ಇನ್ನೊಬ್ಬ ಆರೋಪಿ ಆಕಾಶ್ ಸೋಲಂಕಿ ಜೊತೆಗೆ ಖಾನ್ ಬೇಹುಗಾರಿಕೆ ದಂಧೆಯಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ತಿಳಿಸಿದೆ.

ಎನ್‌ಐಎ ನವೆಂಬರ್ 6, 2023 ರಂದು ಇತರ ಆರೋಪಿಗಳಾದ ಮನಮೋಹನ್ ಸುರೇಂದ್ರ ಪಾಂಡ ಮತ್ತು ಅಲ್ವೆನ್ ವಿರುದ್ಧ ಪೂರಕ ದೋಷಾರೋಪ ಸಲ್ಲಿಸಿತು. ಪಾಂಡಾನನ್ನು ಬಂಧಿಸಲಾಗಿದ್ದು, ಪಾಕಿಸ್ತಾನಿ ಗುಪ್ತಚರ ಅಧಿಕಾರಿ ಅಲ್ವೆನ್ ಪರಾರಿಯಾಗಿದ್ದಾನೆ. ಮೇ 2024 ರಲ್ಲಿ ಅಮಾನ್ ಸಲೀಂ ಶೇಖ್ ವಿರುದ್ಧ ಎನ್ಐಎ ತನ್ನ ಎರಡನೇ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅದು ಹೇಳಿದೆ.

Read More
Next Story