ಮೆಸೇಜಿಂಗ್ ಆ್ಯಪ್‌ಗಳಿಗೆ ಹೊಸ ರೂಲ್ಸ್:  ಸಿಮ್ ತೆಗೆದರೆ ವಾಟ್ಸ್‌ಆ್ಯಪ್ ಕೆಲಸ ಮಾಡಲ್ಲ
x

ಮೆಸೇಜಿಂಗ್ ಆ್ಯಪ್‌ಗಳಿಗೆ ಹೊಸ ರೂಲ್ಸ್: ಸಿಮ್ ತೆಗೆದರೆ ವಾಟ್ಸ್‌ಆ್ಯಪ್ ಕೆಲಸ ಮಾಡಲ್ಲ

ಹೊಸ ನಿಯಮದ ಪ್ರಕಾರ, ಆ್ಯಪ್ ಬಳಸುವಾಗಲೆಲ್ಲಾ ಫೋನ್‌ನಲ್ಲಿ ಅದೇ ನಂಬರ್‌ನ ಸಿಮ್ ಕಾರ್ಡ್ ಇರಲೇಬೇಕು. ಸಿಮ್ ತೆಗೆದರೆ ಅಥವಾ ನಿಷ್ಕ್ರಿಯಗೊಂಡರೆ ಆ್ಯಪ್ ತಾನಾಗಿಯೇ ಕೆಲಸ ನಿಲ್ಲಿಸಬೇಕು.


Click the Play button to hear this message in audio format

ಭಾರತದಲ್ಲಿ ವಾಟ್ಸ್‌ಆ್ಯಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್ ಸೇರಿದಂತೆ ಜನಪ್ರಿಯ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. 'ಟೆಲಿಕಮ್ಯುನಿಕೇಷನ್ ಸೈಬರ್ ಸೆಕ್ಯುರಿಟಿ ತಿದ್ದುಪಡಿ ನಿಯಮಗಳು-2025' ಅಡಿಯಲ್ಲಿ, ಈ ಆ್ಯಪ್‌ಗಳು ಕಾರ್ಯನಿರ್ವಹಿಸಲು ಫೋನ್‌ನಲ್ಲಿ ಸಕ್ರಿಯ ಸಿಮ್ ಕಾರ್ಡ್ ಇರುವುದು ಕಡ್ಡಾಯವಾಗಿದೆ.

ಪ್ರಸ್ತುತ, ಒಮ್ಮೆ ಒಟಿಪಿ (OTP) ಮೂಲಕ ಲಾಗಿನ್ ಆದರೆ, ಫೋನ್‌ನಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೂ ಅಥವಾ ಸಿಮ್ ನಿಷ್ಕ್ರಿಯಗೊಂಡಿದ್ದರೂ (Inactive) ವಾಟ್ಸ್‌ಆ್ಯಪ್ ಬಳಸಬಹುದು. ಆದರೆ, ಹೊಸ ನಿಯಮದ ಪ್ರಕಾರ, ಆ್ಯಪ್ ಬಳಸುವಾಗಲೆಲ್ಲಾ ಫೋನ್‌ನಲ್ಲಿ ಅದೇ ನಂಬರ್‌ನ ಸಿಮ್ ಕಾರ್ಡ್ ಇರಲೇಬೇಕು. ಸಿಮ್ ತೆಗೆದರೆ ಅಥವಾ ನಿಷ್ಕ್ರಿಯಗೊಂಡರೆ ಆ್ಯಪ್ ತಾನಾಗಿಯೇ ಕೆಲಸ ನಿಲ್ಲಿಸಬೇಕು. ಇದನ್ನು 'ಸಿಮ್ ಬೈಂಡಿಂಗ್' (SIM Binding) ಎಂದು ಕರೆಯಲಾಗುತ್ತದೆ. ಯುಪಿಐ (UPI) ಪೇಮೆಂಟ್ ಆ್ಯಪ್‌ಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ.

ವೆಬ್ ಬಳಕೆದಾರರಿಗೆ '6 ಗಂಟೆ' ರೂಲ್ಸ್

ವಾಟ್ಸ್‌ಆ್ಯಪ್ ವೆಬ್ ಬಳಸುವವರಿಗೂ ಹೊಸ ನಿಯಮ ಅನ್ವಯವಾಗಲಿದೆ. ಸುರಕ್ಷತೆಯ ದೃಷ್ಟಿಯಿಂದ, ವೆಬ್ ಬ್ರೌಸರ್‌ನಲ್ಲಿ ಲಾಗಿನ್ ಆದ ನಂತರ ಪ್ರತಿ 6 ಗಂಟೆಗಳಿಗೊಮ್ಮೆ ಬಳಕೆದಾರರು ತಾನಾಗಿಯೇ ಲಾಗೌಟ್ (Auto-logout) ಆಗುತ್ತಾರೆ. ಮತ್ತೆ ಲಾಗಿನ್ ಆಗಲು ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಬೇಕಾಗುತ್ತದೆ. ಇದರಿಂದ ಬೇರೆಯವರು ನಿಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪುತ್ತದೆ.

90 ದಿನಗಳ ಗಡುವು

ದೂರಸಂಪರ್ಕ ಇಲಾಖೆಯು ಈ ಹೊಸ ನಿಯಮಗಳನ್ನು ಜಾರಿಗೊಳಿಸಲು ಮೆಸೇಜಿಂಗ್ ಆ್ಯಪ್ ಕಂಪನಿಗಳಿಗೆ 90 ದಿನಗಳ ಕಾಲಾವಕಾಶ ನೀಡಿದೆ. ಅಲ್ಲದೆ, 120 ದಿನಗಳ ಒಳಗೆ ನಿಯಮ ಪಾಲನೆಯ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ 'ಟೆಲಿಕಮ್ಯುನಿಕೇಷನ್ ಆಕ್ಟ್ 2023' ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಏಕೆ ಈ ಕ್ರಮ?

ಸೈಬರ್ ವಂಚಕರು ನಕಲಿ ಅಥವಾ ಕದ್ದ ಸಿಮ್‌ಗಳನ್ನು ಬಳಸಿ ವಾಟ್ಸ್‌ಆ್ಯಪ್ ಖಾತೆ ತೆರೆಯುತ್ತಾರೆ. ನಂತರ ಸಿಮ್ ಎಸೆದರೂ ಆ್ಯಪ್ ಬಳಸುತ್ತಲೇ ವಂಚನೆ ಎಸಗುತ್ತಾರೆ. ಇದನ್ನು ತಡೆಯಲು ಮತ್ತು ಬಳಕೆದಾರರ ಚಟುವಟಿಕೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಆನ್‌ಲೈನ್ ವಂಚನೆ, ಸ್ಪ್ಯಾಮ್ ಮತ್ತು ಸುಳ್ಳು ಸುದ್ದಿ ಹರಡುವುದಕ್ಕೆ ಕಡಿವಾಣ ಬೀಳಲಿದೆ ಎಂದು ಸರ್ಕಾರ ಹೇಳಿದೆ.

ತಜ್ಞರ ಅಭಿಪ್ರಾಯವೇನು?

ಕೆಲವು ಸೈಬರ್ ತಜ್ಞರು ಈ ಕ್ರಮವನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ವಂಚಕರು ಹೊಸ ಸಿಮ್‌ಗಳನ್ನು ಬಳಸಿ ಈ ನಿಯಮವನ್ನು ಮೀರುವ ಸಾಧ್ಯತೆಯಿದೆ. ಅಲ್ಲದೆ, ಪದೇ ಪದೇ ಲಾಗಿನ್ ಆಗಬೇಕಿರುವುದರಿಂದ ಸಾಮಾನ್ಯ ಬಳಕೆದಾರರಿಗೆ ಕಿರಿಕಿರಿಯಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Read More
Next Story