ರಾಷ್ಟ್ರೀಯ ಕ್ರಿಕೆಟ್ ತಂಡದ ನೂತನ ಕೋಚ್ ವಿ.ವಿ.ಎಸ್. ಲಕ್ಷ್ಮಣ್?
ದ್ರಾವಿಡ್ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಲಕ್ಷ್ಮಣ್. ಇನ್ನುಳಿದವರು ಗೌತಮ್ ಗಂಭೀರ್, ಜಸ್ಟಿನ್ ಲ್ಯಾಂಗರ್ ಮತ್ತು ಸ್ಟೀಫನ್ ಫ್ಲೆಮಿಂಗ್
ಹೊಸದಿಲ್ಲಿ, ಮೇ 14 - ಒಂದು ವೇಳೆ ರಾಹುಲ್ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಸ್ಥಾನಕ್ಕೆ ಅರ್ಜಿ ಸಲ್ಲಿಸದೆ ಇದ್ದಲ್ಲಿ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಮತ್ತು ಶ್ರೇಷ್ಠ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ಅವರು ಮುಖ್ಯ ಕೋಚ್ ಸ್ಥಾನಕ್ಕೆ ಅತ್ಯಂತ ಸೂಕ್ತ ಆಯ್ಕೆ ಆಗಲಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಕೆಂಪು ಮತ್ತು ಬಿಳಿ ಚೆಂಡು ಆಟಕ್ಕೆ ಪ್ರತ್ಯೇಕ ತರಬೇತುದಾರರನ್ನು ಆಯ್ಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಒಬ್ಬ ಅಭ್ಯರ್ಥಿಯನ್ನು ಹುಡುಕಲಾಗುತ್ತಿದೆ. ಅವರು ಮುಂದಿನ ಮೂರೂವರೆ ವರ್ಷ ಕಾಲ ಪ್ರವಾಸಕ್ಕೆ ಸಿದ್ಧವಾಗಿರಬೇಕಾಗುತ್ತದೆ.
ಟಿ 20 ವಿಶ್ವಕಪ್‌ನ ನಂತರ ದ್ರಾವಿಡ್ ಅವರ ಒಪ್ಪಂದ ಕೊನೆಗೊಳ್ಳಲಿದೆ. ಬಿಸಿಸಿಐ ಮೇ 27 ರೊಳಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಕೆಲವು ಹೆಸರುಗಳೆಂದರೆ.,
ವಿ.ವಿ.ಎಸ್. ಲಕ್ಷ್ಮಣ್: ಈ ಉನ್ನತ ಹುದ್ದೆಗೆ ಅತ್ಯಂತ ಸೂಕ್ತ ವ್ಯಕ್ತಿ. 49 ವರ್ಷ ವಯಸ್ಸಿನ ಅವರು ಕಳೆದ ಮೂರು ವರ್ಷದಿಂದ ಎನ್‌ಸಿಎ ಮುಖ್ಯಸ್ಥರಾಗಿದ್ದಾರೆ. ಭಾರತ ಎ ಮತ್ತು ಭಾರತ 19 ವರ್ಷಕ್ಕಿಂತ ಕೆಳಗಿನ ತಂಡದ ಮೇಲುಸ್ತುವಾರಿ ಮೂಲಕ ಯುವ ಕ್ರಿಕೆಟಿಗರನ್ನು ಬೆಳೆಸುತ್ತಿದ್ದಾರೆ. ಜೊತೆಗೆ, ದ್ರಾವಿಡ್ ರಜೆಯಲ್ಲಿದ್ದಾಗ ಹಿರಿಯರ ತಂಡಕ್ಕೆ ತರಬೇತಿ ನೀಡಿದ ಅನುಭವವೂ ಅವರಿಗಿದೆ. ಅವರ ಮಾರ್ಗದರ್ಶ ನದಲ್ಲಿ ಭಾರತ ತಂಡ ಏಷ್ಯನ್ ಗೇಮ್ಸ್, ಆಸ್ಟ್ರೇಲಿಯಾ ವಿರುದ್ಧ ಟಿ 20, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ನಲ್ಲಿ ಸರಣಿಗಳಲ್ಲಿ ಆಡಿದೆ.
ಲಕ್ಷ್ಮಣ್ ತಮ್ಮ ಕ್ರಿಕೆಟ್ ಚಾಣಾಕ್ಷತೆ ಮತ್ತು ಹೊಂದಿಕೊಳ್ಳುವ ಸ್ವಭಾವದಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತಿತರ ಹಿರಿಯ ಆಟಗಾರರು ಹಾಗೂ ಹೊಸ ಆಟಗಾರರ ನಡುವಿನ ಸೇತುವೆ ಆಗಬಹುದು. ʻಆಟಗಾರರನ್ನು ನಿಭಾಯಿಸಲು ಅಗತ್ಯವಾದ ಕೌಶಲ ಮತ್ತು ಒತ್ತಡಗಳನ್ನು ನಿರ್ವಹಿಸುವ ಸಾಮರ್ಥ್ಯ ಇರಬೇಕು,ʼ ಇದು ಕೆಲಸದ ಅಗತ್ಯಗಳಲ್ಲಿ ಒಂದು. ಇದನ್ನು ಪರಿಗಣಿಸಿದರೆ, ಲಕ್ಷ್ಮಣ್ ಅವರಿಗಿಂತ ಸೂಕ್ತರು ಸಿಗುವುದು ಕಡಿಮೆ.
ಗೌತಮ್ ಗಂಭೀರ್: ಕಳೆದ 10 ವರ್ಷಗಳಲ್ಲಿ ಮೇಲಿನ ಹಂತದಲ್ಲಿ ಕ್ರಿಕೆಟ್ ಆಡಿದ ಮತ್ತು ಆಟದ ವಿಧಾನಗಳು ವಿಕಸನಗೊಳ್ಳುವುದನ್ನು ಕಂಡವರಲ್ಲಿ ಗಂಭೀರ್ ಪ್ರಮುಖರು. ಕೆಕೆಆರ್‌ನೊಂದಿಗೆ ನಾಯಕನಾಗಿ ಎರಡು ಐಪಿಎಲ್ ಪ್ರಶಸ್ತಿ, ಮೊದಲ ಎರಡು ವರ್ಷದಲ್ಲಿ ಲಖ್ನೋ ತಂಡ ಎರಡು ಬಾರಿ ಪ್ಲೇ ಆಫ್(ನಿರ್ಣಾಯಕ ಆಟ) ಹಂತ ತಲುಪುವಲ್ಲಿ ಗಂಭೀರ್ ಪಾತ್ರ ಪ್ರಶಂಸನೀಯ.
ಅವರ ನೇತೃತ್ವದಲ್ಲಿ ಪುನಶ್ಚೇತನಗೊಂಡ ಕೆಕೆಆರ್ ನಿರ್ಣಾಯಕ ಹಂತ ತಲುಪಿದೆ. ಕೆಕೆಆರ್ ಜೊತೆಗೆ ಭಾವನಾತ್ಮಕ ಬಾಂಧವ್ಯ ಮತ್ತು ತಂಡದ ಮಾಲೀಕ ಶಾರುಖ್ ಖಾನ್ ಅವರೊಂದಿಗಿನ ವೈಯಕ್ತಿಕ ಬಾಂಧವ್ಯದಿಂದ ಅವರು ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸದೆ ಇರುವ ಸಾಧ್ಯತೆ ಇದೆ. ಮುಂದಿನ ಮೂರು ವರ್ಷ ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಇರುತ್ತಾರೆ ಮತ್ತು ಅವರಿಬ್ಬರ ನಡುವಿನ ಸಂಬಂಧ ಹೇಳಿಕೊಳ್ಳುವಂತಿಲ್ಲ. ಆದರೆ, ಹಾಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಗಂಭೀರ್ ಉತ್ತಮ ಸಂಬಂಧ ಹೊಂದಿದ್ದಾರೆ.
ಗಂಭೀರ್ ಹಾಗೂ ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರು ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ತರಬೇತಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಆದರೆ, ಆಟದ ದೀರ್ಘ ಸ್ವರೂಪದಲ್ಲಿ ಅಲ್ಲ.
ಜಸ್ಟಿನ್ ಲ್ಯಾಂಗರ್: ಆಶಸ್ ಮತ್ತು ಟಿ 20 ವಿಶ್ವಕಪ್ ವಿಜೇತ ತಂಡದ ಆಸ್ಟ್ರೇಲಿಯನ್ ಕೋಚ್, ಉತ್ತಮ ತಂತ್ರಗಾರ. ಆದರೆ, ಕಠಿಣ ಶಿಸ್ತು ಅಪೇಕ್ಷಿಸುತ್ತಾರೆ. ಲ್ಯಾಂಗರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತೀಯ ತಂಡದ ಕೋಚ್ ಸ್ಥಾನಕ್ಕೆ ಸಂಬಂಧಿಸಿದಂತೆ ,ʻಈ ಬಗ್ಗೆ ಆಯೋಚಿಸಬಹುದು. ಆದರೆ, ಭಾರತದ ಕೋಚ್ ಆಗಿರುವುದು ಮಾನಸಿಕ ಮತ್ತು ದೈಹಿಕವಾಗಿ ಹೆಚ್ಚು ಶ್ರಮ ಕೇಳುತ್ತದೆ,ʼ ಎಂದು ಪ್ರತಿಕ್ರಿಯಿಸಿದ್ದರು. ಐಪಿಎಲ್ ನಲ್ಲಿ ವರ್ಷದಲ್ಲಿ ಎರಡು ತಿಂಗಳು ಕೆಲಸ ಮಾಡಬೇಕಾಗುತ್ತದೆ.
ಸ್ಟೀಫನ್ ಫ್ಲೆಮಿಂಗ್: ಚೆನ್ನೈ ಸೂಪರ್ ಕಿಂಗ್ಸ್ ನಂಥ ಅತ್ಯಂತ ಯಶಸ್ವಿ ಫ್ರಾಂಚೈಸಿಯೊಂದಿಗೆ ಒಂದೂವರೆ ದಶಕಗಳಿಂದ ಕೆಲಸ ಮಾಡಿರುವ ಅವರ ಹೆಸರು ಪ್ರತಿ ಬಾರಿ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗಲೂ ಮುನ್ನೆಲೆಗೆ ಬರುತ್ತದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್‌ಗೆ ತರಬೇತಿ ನೀಡುತ್ತಿರುವ ಅವರು, ಈ ಹಿಂದೆ ಬಿಸಿಸಿಐ ಕರೆಯನ್ನು ನಿರಾಕರಿಸಿದ್ದಾರೆ. ಒಂದು ವೇಳೆ ಬಿಸಿಸಿಐ ಮತ್ತೊಮ್ಮೆ ಆಹ್ವಾನ ನೀಡಿದರೂ, ವರ್ಷದಲ್ಲಿ 7 ರಿಂದ 8 ತಿಂಗಳು ಇಂಡಿಯದಲ್ಲಿ ಉಳಿದುಕೊಂಡು, ಕ್ರೈಸ್ಟ್‌ಚರ್ಚ್‌ನಲ್ಲಿರುವ ಕುಟುಂಬದಿಂದ ದೂರ ಉಳಿಯುವ ಸಾಧ್ಯತೆ ಬಹಳ ಕಡಿಮೆ.