New Income Tax Slabs: ತೆರಿಗೆ ಮಿತಿ ಬದಲಾವಣೆ; 12 ಲಕ್ಷ ರೂ. ತನಕ ಯಾರಿಗೆಲ್ಲ ವಿನಾಯಿತಿ?
New Income Tax Slabs: ಸಣ್ಣ ಪುಟ್ಟ ವ್ಯಾಪಾರಸ್ಥರಿಗೂ, ವೃತ್ತಿಪರರಿಗೂ ಈ ವಿನಾಯಿತಿ ಅನ್ವಯವಾಗುತ್ತದೆ. ಜತೆಗೆ ವೇತನದಾರರಿಗೆ 75,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಇರುವುದರಿಂದ ಒಟ್ಟು 12 ಲಕ್ಷದ 75 ಸಾವಿರ ರೂಪಾಯಿ ತನಕದ ಆದಾಯಕ್ಕೆ ಅವರು ತೆರಿಗೆ ಪಾವತಿ ಮಾಡಬೇಕಾಗಿಲ್ಲ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿರುವ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ವಿನಾಯಿತಿ ನೀಡಲಾಗಿದೆ. 2025-26ರ ಸಾಲಿನಿಂದ ವರ್ಷಕ್ಕೆ 12 ಲಕ್ಷ ರೂ. ತನಕ ಆದಾಯ ಇರುವವರು ಆದಾಯ ತೆರಿಗೆ ನೀಡಬೇಕಾಗಿಲ್ಲ. ಅವರ 12 ಲಕ್ಷ ರೂ. ಆದಾಯ ತೆರಿಗೆ ಮುಕ್ತ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೂ, ವೃತ್ತಿಪರರಿಗೂ ಈ ವಿನಾಯಿತಿ ಅನ್ವಯವಾಗುತ್ತದೆ. ಜತೆಗೆ ವೇತನದಾರರಿಗೆ 75,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಇರುವುದರಿಂದ ಒಟ್ಟು 12 ಲಕ್ಷದ 75 ಸಾವಿರ ರೂಪಾಯಿ ತನಕದ ಆದಾಯಕ್ಕೆ ಅವರು ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿದ ಬಳಿಕವೂ ಜನರಲ್ಲಿ ಇನ್ನೂ ಕೆಲವು ಗೊಂದಲಗಳಿವೆ. ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ʼದ ಫೆಡರಲ್ ಕರ್ನಾಟಕʼ ಜತೆಗಿನ ವಿಡಿಯೊ ಸಂದರ್ಶನದಲ್ಲಿ ಮಾತನಾಡಿದ ತೆರಿಗೆ ತಜ್ಞರಾದ ರಾಘವೇಂದ್ರ ಮಯ್ಯ, ʼʼಇದು ಹಲವು ವರ್ಷಗಳ ಮಧ್ಯಮ ವರ್ಗದ ಜನರ ಬೇಡಿಕೆಯಾಗಿತ್ತು. ಬಜೆಟ್‌ನಲ್ಲಿ ಅದನ್ನು ಪೂರೈಸಲಾಗಿದೆ. ತೆರಿಗೆ ವಿನಾಯಿತಿಯಿಂದ ಜನರ ಕೈಯಲ್ಲೇ ಹಣ ಉಳಿಯುವಂತೆ ಮಾಡಲಾಗಿದೆ. ಇದರಿಂದ ಜನರು ವೆಚ್ಚ ಮಾಡುವ ಪ್ರಮಾಣವೂ ಹಿಗ್ಗಲಿದೆ. ಇದು ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿದೆ,ʼʼ ಎಂದು ಹೇಳಿದರು.
ʼʼಹೊಸ ತೆರಿಗೆ ಮಾದರಿಯಲ್ಲಿ ತೆರಿಗೆ ಪಾವತಿ ಹಾಗೂ ವಿನಾಯಿತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಳೀಕರಣಗೊಳಿಸಲಾಗಿದೆ. ಇದು ಅಗತ್ಯವಾಗಿತ್ತು,ʼʼ ಎಂಬುದಾಗಿ ಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಆದಾಯ ತೆರಿಗೆಯ ಶ್ರೇಣಿ ಈ ರೀತಿ ಇದೆ: ವಾರ್ಷಿಕ 4 ಲಕ್ಷ ರೂ. ತನಕ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 4ರಿಂದ 8 ಲಕ್ಷ ರೂ. ಆದಾಯಕ್ಕೆ ಶೇಕಡಾ 5 ತೆರಿಗೆ. . 8 ಲಕ್ಷ ರೂ.ಯಿಂದ 12 ಲಕ್ಷ ರೂ. ಆದಾಯಕ್ಕೆ ಶೇಕಡಾ 10 ತೆರಿಗೆ. 12 ಲಕ್ಷ ರೂ.ಯಿಂದ 16 ಲಕ್ಷ ರೂ. ತನಕ ಶೇಕಡಾ 15 ತೆರಿಗೆ . 20 ಲಕ್ಷ ರೂ.ಯಿಂದ 24 ಲಕ್ಷ ರೂ.ಗೆ ಶೇಕಡಾ 25 ತೆರಿಗೆ. 24 ಲಕ್ಷ ರೂ. ಮೇಲಿನ ಆದಾಯಕ್ಕೆ ಶೇಕಡಾ 30 ತೆರಿಗೆ ಕಟ್ಟಬೇಕಾಗುತ್ತದೆ.
ಹಿಂದೆ 3 ಲಕ್ಷ ರೂ. ತನಕ ತೆರಿಗೆ ಕಟ್ಟಬೇಕಾಗಿರಲಿಲ್ಲ. ಅದು ಈಗ 4 ಲಕ್ಷ ರೂ. ತನಕ ವಿಸ್ತರಣೆಯಾಗಿದೆ. ಹಿಂದೆ 3ರಿಂದ 7 ಲಕ್ಷ ರೂ. ವಾರ್ಷಿಕ ಅದಾಯಕ್ಕೆ ಶೇಕಡಾ 5 ತೆರಿಗೆ ಇತ್ತು. ಅದನ್ನೀಗ 4ರಿಂದ 8 ಲಕ್ಷ ರೂಗೆ ಬದಲಾಯಿಸಲಾಗಿದೆ. ಹಿಂದೆ 7-10 ಲಕ್ಷ ರೂ. ಆದಾಯಕ್ಕೆ ಶೇಕಡಾ 10 ತೆರಿಗೆ ಕಟ್ಟಬೇಕಾಗಿತ್ತು. ಈಗ 8-12 ಲಕ್ಷ ರೂ.ಗೆ ಅಷ್ಟು ತೆರಿಗೆ ಕಟ್ಟಬೇಕು. ಹಿಂದೆ 12-15 ಲಕ್ಷ ರೂ. ಅದಾಯಕ್ಕೆ ಶೇಕಡಾ 15 ತೆರಿಗೆ ಇತ್ತು. ಈಗ 12-16 ಲಕ್ಷ ರೂ.ಗೆ ಅನ್ವಯ. ಈ ಹಿಂದೆ 15 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಏಕಾಏಕಿ ಶೇಕಡಾ 30 ತೆರಿಗೆ ಕಟ್ಟಬೇಕಾಗಿತ್ತು. ಈಗ 16-20 ಲಕ್ಷ ರೂ. ಅದಾಯದವರಿಗೆ ಶೇಕಡಾ 20 ಮತ್ತು 20-24 ಲಕ್ಷ ರೂ. ಆದಾಯದವರಿಗೆ ಶೇಕಡಾ 25 ಮತ್ತು 24 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ ಮಾತ್ರ ಶೇಕಡಾ 30 ತೆರಿಗೆ ಎಂದು ಪರಿಷ್ಕರಿಸಲಾಗಿದೆ.
12 ಲಕ್ಷ ರೂ. ತನಕ ಟ್ಯಾಕ್ಸ್ ರಿಬೇಟ್ ಎಂದರೇನು?
ವಾರ್ಷಿಕ 4 ಲಕ್ಷ ರೂ.ಗಿಂತ ಹೆಚ್ಚು ಅದಾಯ ಇದ್ದಾಗ ತೆರಿಗೆ ಕಟ್ಟಬೇಕು ಎಂದು ಹೇಳುತ್ತಿದೆ ಬಜೆಟ್. ವಾಸ್ತವದಲ್ಲಿ 12 ಲಕ್ಷ ರೂ. ತನಕ ಆದಾಯ ಇರುವವರಿಗೆ ಸರ್ಕಾರ ರಿಬೇಟ್ ನೀಡುತ್ತದೆ. ಆದಾಯ 12 ಲಕ್ಷ ರೂ. ಒಳಗೆ ಇದ್ದರೆ ಅದಕ್ಕೆ ರಿಬೇಟ್ ಪ್ರಕಾರ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 87 ಎ ಅಡಿಯಲ್ಲಿ ಈ ವಿನಾಯಿತಿ ಸಿಗುತ್ತದೆ. ಆದರೆ 12 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇದ್ದರೆ, 4 ಲಕ್ಷ ರೂ.ಯಿಂದಲೇ ಟ್ಯಾಕ್ಸ್ ಲೆಕ್ಕಚಾರ ಶುರುವಾಗುತ್ತದೆ.
ಒಂದು ವೇಳೆ ನಿಮ್ಮ ಸಂಬಳ 16 ಲಕ್ಷ ರೂ. ಇದ್ದರೆ ಟ್ಯಾಕ್ಸ್ ಲೆಕ್ಕಾಚಾರ ಈ ರೀತಿ ಮಾಡಿ. ಆಗ 4 ಲಕ್ಷ ರೂ. ತನಕ ತೆರಿಗೆ ಇರುವುದಿಲ್ಲ. 4-8 ಲಕ್ಷ ರೂ.ಗೆ ಶೇಕಡಾ 5 (20 ಸಾವಿರ ರೂ.) ಹಾಗೂ 8-12 ಲಕ್ಷ ರೂ.ಗೆ ಶೇಕಡಾ 10 (40 ಸಾವಿರ ರೂ.) ಮತ್ತು 12-16 ಲಕ್ಷ ರೂ.ಗೆ ಶೇಕಡಾ 15 ತೆರಿಗೆ (60 ಸಾವಿರ ರೂಪಾಯಿ) ಕಟ್ಟಬೇಕು. ಇಲ್ಲಿ ಒಟ್ಟು 1,20,000 ರೂ. ತೆರಿಗೆ ಕಟ್ಟಬೇಕಾಗುತ್ತದೆ. ಇಲ್ಲಿಯೂ ಈ ಹಿಂದೆ ನೀಡುತ್ತಿದ್ದ ಟ್ಯಾಕ್ಸ್‌ಗಿಂತ 50,000 ರೂ. ಕಡಿಮೆಯಾಗುತ್ತದೆ.
ಹಳೆಯ ತೆರಿಗೆ ಪದ್ಧತಿ ಏನಾಗಲಿದೆ?
ಬಜೆಟ್ ಪ್ರಕರಣೆ ಹೊಸ ತೆರಿಗೆ ಪದ್ಧತಿಗೆ ಅನ್ವಯವಾಗುತ್ತದೆ. ಹಳೆಯ ತೆರಿಗೆ ವ್ಯವಸ್ಥೆ ಎಂದಿನಂತೆ ಮುಂದುವರಿಯಲಿದೆ.
ಯಾವುದು ಉತ್ತಮ?
ಎಷ್ಟು ವಿನಾಯಿತಿ ಕ್ಲೇಮ್ ಮಾಡಿಕೊಳ್ಳಲು ಸಾಧ್ಯವಿದೆ ಎಂಬುದರ ಅಧಾರದಲ್ಲಿ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಆದಾಯ 12 ಲಕ್ಷ ರೂಪಾಯಿಯ ಒಳಗೆ ಇದ್ದರೆ ಹೊಸ ಪದ್ಧತಿ ಉತ್ತಮ. ಆದರೆ ನಿಮ್ಮ ಆದಾಯ 15-16 ಲಕ್ಷ ರುಪಾಯಿ ಇದ್ದರೆ ಹಳೆಯ ಪದ್ಧತಿ ಉತ್ತಮ .
ಟಿಡಿಎಸ್ ಮಿತಿ ಹೆಚ್ಚಳ
ಬಾಡಿಗೆ ಕುರಿತ ಟಿಡಿಎಸ್ ಮಿತಿಯನ್ನು 2.40 ಲಕ್ಷ ರೂ.ಯಿಂದ 6 ಲಕ್ಷ ರೂ.ಗೆ ಏರಿಸಲಾಗಿದೆ. ವೃತ್ತಿಪರ ಶುಲ್ಕಗಳ ಮೇಲಿನ ಟಿಡಿಎಸ್ ಮಿತಿಯನ್ನು 30 ಸಾವಿರ ರೂ.ಯಿಂದ 50 ಸಾವಿರ ರೂ.ಗೆ ಏರಿಸಲಾಗಿದೆ. ಡಿವಿಡೆಂಡ್ ಮೇಲಿನ ಟಿಡಿಎಸ್ ಮಿತಿಯನ್ನು 5,000 ರೂ.ಯಿಂದ 10,000 ರೂ.ಗೆ ಏರಿಸಲಾಗಿದೆ. ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಕುರಿತ ಬಡ್ಡಿಯ ಮೇಲಿನ ಟಿಡಿಎಸ್ ಮಿತಿ 50,000 ರೂ.ಯಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ. ವಿದೇಶ ಪ್ರವಾಸದ ಟಿಸಿಎಸ್ ಮಿತಿಯನ್ನು 7 ಲಕ್ಷ ರೂ.ಯಿಂದ 10 ಲಕ್ಷ ರೂ.ಗೆ ಏರಿಸಲಾಗಿದೆ.