
ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುವ ನಿಯಮಗಳು ಇಂದಿನಿಂದ ಜಾರಿ; ಏನೆಲ್ಲ ಇವೆ ತಿಳಿದುಕೊಳ್ಳಿ
ಇಂದಿನಿಂದ (ಅಕ್ಟೋಬರ್ 1ರಿಂದ) ಭಾರತದಲ್ಲಿ ಹಲವು ಹಣಕಾಸು ಮತ್ತು ನಿಯಂತ್ರಕ ನಿಯಮಗಳು ಬದಲಾಗಲಿವೆ, ಇದು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಆರ್‌ಬಿಐ, ಪಿಎನ್‌ಬಿ, ಐಆರ್‌ಸಿಟಿಸಿ, ಯೆಸ್ ಬ್ಯಾಂಕ್, ಇಂಡಿಯಾ ಪೋಸ್ಟ್ ಮತ್ತು ಪಿಎಫ್‌ಆರ್‌ಡಿಎ ಸೇರಿದಂತೆ ಹಲವು ಸಂಸ್ಥೆಗಳು ಈ ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಇಂಪೀರಿಯಾ ಗ್ರಾಹಕರಿಗೆ ಬದಲಾವಣೆ
ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಇಂಪೀರಿಯಾ ಕಾರ್ಯಕ್ರಮದ ಗ್ರಾಹಕರಿಗೆ ಒಟ್ಟು ಸಂಬಂಧ ಮೌಲ್ಯ (Total Relationship Value - TRV) ನಿರ್ವಹಿಸಲು ಪರಿಷ್ಕೃತ ಮಾನದಂಡಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲಿದೆ. ಜೂನ್ 30 ರೊಳಗೆ ಈ ಯೋಜನೆಗೆ ಸೇರಿದ ಗ್ರಾಹಕರಿಗೂ ಈ ಹೊಸ ನಿಯಮಗಳು ಅನ್ವಯವಾಗುತ್ತವೆ.
ಆರ್‌ಬಿಐ ಚೆಕ್ ಕ್ಲಿಯರಿಂಗ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಕ್ಟೋಬರ್ 4 ರಿಂದ ಚೆಕ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಿದೆ. ಪ್ರಸ್ತುತ ಇರುವ ಬ್ಯಾಚ್ ಕ್ಲಿಯರಿಂಗ್ ವ್ಯವಸ್ಥೆಯ ಬದಲು, ನಿರಂತರ ಕ್ಲಿಯರಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಈ ಬದಲಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಅಕ್ಟೋಬರ್ 4 ರಿಂದ ಜನವರಿ 2, 2026 ರವರೆಗೆ ಮತ್ತು ಎರಡನೇ ಹಂತ ಜನವರಿ 3, 2026 ರಿಂದ ಜಾರಿಗೆ ಬರಲಿದೆ.
ಪಿಎನ್‌ಬಿ ಸೇವಾ ಶುಲ್ಕಗಳಲ್ಲಿ ಪರಿಷ್ಕರಣೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಕ್ಟೋಬರ್ 1 ರಿಂದ ತನ್ನ ಸೇವಾ ಶುಲ್ಕಗಳನ್ನು ಪರಿಷ್ಕರಿಸಿದೆ. ಲಾಕರ್ ಬಾಡಿಗೆ, ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ (SI) ವೈಫಲ್ಯದ ಶುಲ್ಕ, ನಾಮನಿರ್ದೇಶನ ಶುಲ್ಕ ಮತ್ತು ಸ್ಟಾಪ್-ಪೇಮೆಂಟ್ ಸೂಚನೆಗಳಿಗೆ ಸಂಬಂಧಿಸಿದ ಶುಲ್ಕಗಳಲ್ಲಿ ಬದಲಾವಣೆಗಳಾಗಲಿವೆ. ಲಾಕರ್ ಶುಲ್ಕಗಳು ಗಾತ್ರ ಮತ್ತು ಶಾಖೆಯ ಸ್ಥಳವನ್ನು ಅವಲಂಬಿಸಿ ಗಮನಾರ್ಹವಾಗಿ ಹೆಚ್ಚಾಗಲಿವೆ.
ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ನಿಯಮಗಳು
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಅಕ್ಟೋಬರ್ 1 ರಿಂದ ತನ್ನ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಸಾಮಾನ್ಯ ಟಿಕೆಟ್‌ಗಳ ಆನ್‌ಲೈನ್ ಬುಕಿಂಗ್ಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ. ಆಧಾರ್-ದೃಢೀಕರಿಸಿದ ಬಳಕೆದಾರರಿಗೆ ಈ ನಿಯಮಗಳು ಅನ್ವಯವಾಗಲಿದ್ದು, ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯ ದುರುಪಯೋಗವನ್ನು ತಡೆಯುವುದು ಇದರ ಉದ್ದೇಶವಾಗಿದೆ.
ಯೆಸ್ ಬ್ಯಾಂಕ್ ಸಂಬಳ ಖಾತೆಗಳಲ್ಲಿ ಬದಲಾವಣೆ
ಅಕ್ಟೋಬರ್ 1 ರಿಂದ, ಯೆಸ್ ಬ್ಯಾಂಕ್‌ನ ಸ್ಮಾರ್ಟ್ ಸ್ಯಾಲರಿ ಖಾತೆದಾರರಿಗೆ ಪರಿಷ್ಕೃತ ಶುಲ್ಕಗಳು ಅನ್ವಯವಾಗಲಿವೆ. ನಗದು ವಹಿವಾಟು ಶುಲ್ಕ, ಎಟಿಎಂ ವಿತ್‌ಡ್ರಾ, ಡೆಬಿಟ್ ಕಾರ್ಡ್ ಶುಲ್ಕಗಳು ಮತ್ತು ಚೆಕ್ ಬೌನ್ಸ್ ದಂಡಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಸ್ಪೀಡ್ ಪೋಸ್ಟ್ ದರ ಹೆಚ್ಚಳ
ಇಂಡಿಯಾ ಪೋಸ್ಟ್ ಅಕ್ಟೋಬರ್ 1 ರಿಂದ ಸ್ಪೀಡ್ ಪೋಸ್ಟ್ ದರಗಳನ್ನು ಹೆಚ್ಚಿಸಲಿದೆ. ಪರಿಷ್ಕೃತ ದರ ಪಟ್ಟಿಯಲ್ಲಿ ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ಪ್ರದರ್ಶಿಸಲಾಗುತ್ತದೆ. ಜೊತೆಗೆ, ಒಟಿಪಿ-ಆಧಾರಿತ ವಿತರಣೆಯಂತಹ ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದ್ದು, ಇದು ಪಾರ್ಸೆಲ್‌ಗಳನ್ನು ಸುರಕ್ಷಿತವಾಗಿ ತಲುಪಿಸಲು ಸಹಾಯ ಮಾಡುತ್ತದೆ.
ಪಿಎಫ್‌ಆರ್‌ಡಿಎ ಶುಲ್ಕ ಪರಿಷ್ಕರಣೆ
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕೇಂದ್ರ ದಾಖಲಾತಿ ಏಜೆನ್ಸಿಗಳು (CRAs) ಒದಗಿಸುವ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಅಟಲ್ ಪಿಂಚಣಿ ಯೋಜನೆ (APY) ಸೇರಿದಂತೆ ಹಲವು ಯೋಜನೆಗಳ ಚಂದಾದಾರರ ಖಾತೆಗಳ ನಿರ್ವಹಣೆಗೆ ಅಕ್ಟೋಬರ್ 1 ರಿಂದ ಈ ಹೊಸ ಶುಲ್ಕಗಳು ಅನ್ವಯವಾಗಲಿವೆ.
ಯುಪಿಎಸ್-ಎನ್‌ಪಿಎಸ್ ಬದಲಾವಣೆಗೆ ಗಡುವು ಅಂತ್ಯ
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಡಿಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಏಕೀಕೃತ ಪಿಂಚಣಿ ಯೋಜನೆಗೆ (UPS) ಬದಲಾಗಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿತ್ತು. ಅಕ್ಟೋಬರ್ 1 ರಿಂದ ಈ ಅವಕಾಶ ಲಭ್ಯವಿರುವುದಿಲ್ಲ.
ಎನ್‌ಪಿಎಸ್ ಈಕ್ವಿಟಿ ಹೂಡಿಕೆಯಲ್ಲಿ ಹೊಸ ಅವಕಾಶ
ಅಕ್ಟೋಬರ್ 1 ರಿಂದ, ಸರ್ಕಾರೇತರ ಎನ್‌ಪಿಎಸ್ ಚಂದಾದಾರರು ತಮ್ಮ ಹೂಡಿಕೆಯ 100% ರಷ್ಟನ್ನು ಒಂದೇ ಎನ್‌ಪಿಎಸ್ ಯೋಜನೆಯಲ್ಲಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಅಲ್ಲದೆ, ಹೊಸ ಚೌಕಟ್ಟಿನ ಅಡಿಯಲ್ಲಿ, ಒಂದೇ PRAN ಬಳಸಿ ವಿವಿಧ ಸಿಆರ್‌ಎಗಳಲ್ಲಿ (CAMS, Protean, ಮತ್ತು KFintech) ಅನೇಕ ಯೋಜನೆಗಳನ್ನು ಹೊಂದುವ ಅವಕಾಶವನ್ನು ಕಲ್ಪಿಸಲಾಗಿದೆ.