NEET-UG 2024 | ಸಂಸತ್ತಿಗೆ ವಿದ್ಯಾರ್ಥಿಗಳ ಮೆರವಣಿಗೆ: ಹಲವರ ಬಂಧನ
ಹೊಸದಿಲ್ಲಿ: ಜಂತರ್ ಮಂತರ್‌ನಲ್ಲಿ ನೀಟ್ -ಯುಜಿ ಮತ್ತು ಯುಜಿಸಿ- ನೆಟ್ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎರಡು ಡಜನ್‌ಗೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು.
18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭದ ದಿನದಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಸಂಸತ್ತಿಗೆ ಮೆರವಣಿಗೆ ನಡೆಸಲು ಆಯೋಜಿಸಿತ್ತು.
ಭಿತ್ತಿಪತ್ರಗಳು ಮತ್ತು ಎನ್‌ಎಸ್‌ಯುಐ ಧ್ವಜಗಳನ್ನು ಹಿಡಿದು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಹೋಗದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಅರೆಸೇನಾ ಪಡೆ ಸೇರಿದಂತೆ ದೆಹಲಿ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದರು; ಇನ್ನೂ ಕೆಲವರು ಕಟ್ಟಡದ ಮೇಲೆ ಹತ್ತಿದರು. ಮೆರವಣಿಗೆಗೆ ಅನುಮತಿ ನೀಡದ ಕಾರಣ, ದೆಹಲಿ ಪೊಲೀಸರು ಅವರನ್ನು ಬಂಧಿಸಿ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 5 ರಂದು ನಡೆದ ನೀಟ್-ಯುಜಿ ಪರೀಕ್ಷೆ ರದ್ದುಗೊಳಿಸಬೇಕೆಂದು ವಿದ್ಯಾರ್ಥಿಗಳು-ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಆದರೆ, ಅಕ್ರಮ ಸಾರ್ವತ್ರಿಕವಾಗಿ ನಡೆದಿಲ್ಲ.ಪರೀಕ್ಷೆಯಲ್ಲಿ ಉತ್ತೀರ್ಣರಾದ ಲಕ್ಷಾಂತರ ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಧಕ್ಕೆ ತರುವುದು ನ್ಯಾಯೋಚಿತವಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ. ಸಿಐಬಿ, ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯು ಜೂನ್ 18 ರಂದು ದೇಶಾದ್ಯಂತ ಎರಡು ಪಾಳಿಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಗಳು, ಸಹಾಯಕ ಪ್ರಾಧ್ಯಾಪಕರು ಮತ್ತು ಪಿಎಚ್‌ಡಿಗೆ ಪರೀಕ್ಷೆ ನಡೆಸಿತು. ಆನಂತರ ‘ಪರೀಕ್ಷೆಯ ಸಮಗ್ರತೆಗೆ ಧಕ್ಕೆ ಉಂಟಾಗಿರಬಹುದು’ ಎಂದು ಹೇಳಿದ ಸರ್ಕಾರ, ಪರೀಕ್ಷೆಯನ್ನು ಮುಂದೂಡಿತು.