NEET-UG 2024 | ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್ ನೋಟಿಸ್
ದೇಶದ ವಿವಿಧ ಹೈ ಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ನೀಟ್ ಕುರಿತ ಅರ್ಜಿಗಳ ಮುಂದಿನ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನೀಟ್-ಯುಜಿ 2024 ಪರೀಕ್ಷೆ ರದ್ದುಗೊಳಿಸುವುದು ಮತ್ತು ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಮತ್ತು ಇತರರಿಂದ ಸುಪ್ರೀಂ ಕೋರ್ಟ್ ಗುರುವಾರ ಪ್ರತಿಕ್ರಿಯೆಗಳನ್ನು ಕೇಳಿದೆ.
ದೇಶದ ವಿವಿಧ ಹೈ ಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ನೀಟ್ ಕುರಿತ ಅರ್ಜಿಗಳ ಮುಂದಿನ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್.ವಿ.ಎನ್. ಭಟ್ಟಿ ಅವರ ರಜಾಕಾಲದ ಪೀಠವು ಎನ್‌ಟಿಎ ಸಲ್ಲಿಸಿದ ನಾಲ್ಕು ಪ್ರತ್ಯೇಕ ಅರ್ಜಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಬಾಕಿ ಉಳಿದ ಅರ್ಜಿಗಳನ್ನು ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ತಿಳಿಸಿದೆ.
ಕಾರ್ಯಕ್ರಮಗಳಿಗೆ ತಡೆ: ಪೀಠವು ಎನ್‌ಟಿಎ ಸಲ್ಲಿಸಿದ ಅರ್ಜಿಗಳಿಗೆ ನೋಟಿಸ್ ನೀಡುತ್ತಿದ್ದಂತೆ, ಹೈಕೋರ್ಟ್‌ಗಳಲ್ಲಿ ಈ ಕುರಿತ ವಿಚಾರಣೆಯನ್ನು ತಡೆಹಿಡಿಯಬೇಕೆಂದು ಎನ್‌ಟಿಎ ಪರ ವಕೀಲರು ಒತ್ತಾಯಿಸಿದರು.
ʻಜುಲೈ 8 ರೊಳಗೆ ಪ್ರತಿಕ್ರಿಯಿಸುವಂತೆ ನೋಟಿಸ್ ನೀಡಿ,ʼ ಎಂದು ಪೀಠ, ʻಹೈಕೋರ್ಟ್‌ಗಳಲ್ಲಿ ಇರುವ ಅರ್ಜಿಗಳಿಗೆ ತಡೆ ನೀಡಲಾಗುವುದು,ʼ ಎಂದು ಹೇಳಿತು.
ನೀಟ್ ಪರೀಕ್ಷೆಗೆ ಹಾಜರಾಗಿದ್ದ ಮತ್ತು ಮೇ 5 ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ 20 ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ಸೇರಿದಂತೆ ಹಲವು ಅರ್ಜಿಗಳನ್ನು ಇದು ಒಳಗೊಂಡಿದೆ. ಹೊಸದಾಗಿ ಪರೀಕ್ಷೆ ನಡೆಸಲು ಎನ್‌ಟಿಎ ಮತ್ತು ಇತರರಿಗೆ ನಿರ್ದೇಶನ ನೀಡಬೇಕೆಂದು ಅಭ್ಯರ್ಥಿಗಳು ಕೋರಿದ್ದಾರೆ. ಕೇಂದ್ರ, ಎನ್‌ಟಿಎ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದ ಪೀಠ, ಜುಲೈ 8 ರಂದು ನೀಟ್-ಯುಜಿ ಗೆ ಸಂಬಂಧಿಸಿದ ಇತರ ಅರ್ಜಿಗಳ ಜೊತೆಗೆ ಆಲಿಸಲಾಗುವುದು ಎಂದು ಹೇಳಿದೆ.
ʻಅರ್ಜಿದಾರರು ಕೌನ್ಸೆಲಿಂಗ್‌ಗೆ ತಡೆ ನೀಡಬೇಕೆಂದು ಬಯಸುತ್ತಿದ್ದಾರೆ. ನಾವು ಅದನ್ನು ನಿರಾಕರಿಸಿದ್ದೇವೆ,ʼ ಎಂದು ಪೀಠ ಹೇಳಿತು.ʻನೀವು ಯಶಸ್ವಿಯಾದರೆ ಪರೀಕ್ಷೆ, ಕೌನ್ಸೆಲಿಂಗ್ ಕೂಡ ಹೋಗುತ್ತದೆ,ʼ ಎಂದು ಹೇಳಿತು. ಅರ್ಜಿದಾರರೊಬ್ಬರ ಪರ ವಕೀಲರು, ʻಕೌನ್ಸೆಲಿಂಗ್ ಅನ್ನು ಜುಲೈ 8ರ ತನಕ ಮುಂದೂಡಬಹುದು,ʼ ಎಂದರು.
ʻಕೌನ್ಸೆಲಿಂಗ್ ಜುಲೈ 6 ರಂದು ಪ್ರಾರಂಭವಾಗಲಿದೆ. ಆದರೆ, ಅಂದೇ ಮುಗಿಯುವುದಿಲ್ಲ. ಸಮಯ ತೆಗೆದುಕೊಳ್ಳುತ್ತದೆ,ʼ ಎಂದು ಎನ್‌ಟಿಎ ವಕೀಲರು ಹೇಳಿದರು.
ಬಿಹಾರದಲ್ಲಿ ವ್ಯಕ್ತಿ ಬಂಧನ: ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಮತ್ತೊಬ್ಬ ವಕೀಲರು ತಿಳಿಸಿದರು. ಬಿಹಾರ ಮತ್ತು ಗುಜರಾತ್‌ನಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ತನಿಖೆಯ ಸ್ಥಿತಿ ವರದಿ ನೀಡುವಂತೆ ಪೊಲೀಸರನ್ನು ಕೇಳಬೇಕು ಎಂದು ವಕೀಲರು ಹೇಳಿದರು.
ಕೇಂದ್ರದ ಪರ ವಾದ ಮಂಡಿಸಿದ ವಕೀಲರು, ಕೋಚಿಂಗ್ ಸಂಸ್ಥೆಗಳೂ ಅರ್ಜಿದಾರರಾಗಿ ಬಂದಿವೆ ಎಂದರು. ʻಅವರಿಗೆ ಬರಲು ಹಕ್ಕಿದೆ. ಏಕೆಂದರೆ ಅದು ಅವರ ವ್ಯವಹಾರ. ವಿದ್ಯಾರ್ಥಿಗಳ ಹಕ್ಕುಗಳೊಂದಿಗೆ ಆಟವಾಡಿದರೆ, ಕೋಚಿಂಗ್ ಸೆಂಟರ್‌ಗಳು ಬರುತ್ತವೆ,ʼ ಎಂದು ಪೀಠ ಹೇಳಿತು.