NEET-UG 2024| ಪರೀಕ್ಷೆಯ ಪಾವಿತ್ರ್ಯ ಕಳೆದುಹೋಗಿದ್ದರೆ, ಮರುಪರೀಕ್ಷೆಗೆ ಆದೇಶಿಸಬೇಕು: ಸುಪ್ರೀಂ
ಟೆಲಿಗ್ರಾಂ, ವಾಟ್ಸಾಪ್ ಮತ್ತು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾದರೆ, ಅದು ಕಾಳ್ಗಿಚ್ಚಿನಂತೆ ಹರಡುತ್ತದೆ ಎಂದು ಮು.ನ್ಯಾ.ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆ2024 ತನ್ನ ʻಪಾವಿತ್ರ್ಯʼ ಕಳೆದುಕೊಂಡಿದ್ದರೆ ಮತ್ತು ಅದರ ಪ್ರಶ್ನೆಪತ್ರಿಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಸೋರಿಕೆ ಆಗಿದ್ದರೆ, ಮರುಪರೀಕ್ಷೆಗೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 8) ಹೇಳಿದೆ.
ಟೆಲಿಗ್ರಾಂ, ವಾಟ್ಸಾಪ್ ಮತ್ತು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೆ, ಅದು ಕಾಳ್ಗಿಚ್ಚಿನಂತೆ ಹರಡುತ್ತದೆ ಎಂದು ಮು.ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ: ʻಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ಸ್ಪಷ್ಟವಾಗಿದೆʼ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.
ʻಪರೀಕ್ಷೆಯ ಪಾವಿತ್ರ್ಯ ಕಳೆದುಹೋಗಿದ್ದರೆ, ಮರುಪರೀಕ್ಷೆಗೆ ಆದೇಶಿಸಬೇಕು. ಒಂದುವೇಳೆ ನಮಗೆ ತಪ್ಪಿತಸ್ಥರನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಮರುಪರೀಕ್ಷೆ ಆದೇಶಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸೋರಿಕೆ ಆಗಿದ್ದರೆ, ಮರುಪರೀಕ್ಷೆಗೆ ಆದೇಶಿಸಬೇಕಾಗುತ್ತದೆ,ʼ ಎಂದು ಹೇಳಿತು.
ʻತಪ್ಪು ಸಂಭವಿಸಿದ್ದಲ್ಲಿ, ನಾವು ಅದನ್ನು ನಿರಾಕರಿಸಬಾರದು. ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸುವುದಿಲ್ಲ ಎಂದು ಭಾವಿಸಿದರೆ, ಪ್ರಶ್ನೆಪತ್ರಿಕೆ ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ಅದು ಏನು ಮಾಡುತ್ತದೆ? ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ಪ್ರಶ್ನೆಯಲ್ಲ.ನಾವು ಸೋರಿಕೆಯ ಪ್ರಮಾಣವನ್ನು ನಿರ್ಧರಿಸುತ್ತಿದ್ದೇವೆ,ʼ ಎಂದು ಪೀಠ ಹೇಳಿದೆ.
ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ, ಮರುಪರೀಕ್ಷೆ ಸೇರಿದಂತೆ 30 ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಲೋಪಗಳು: 67 ಅಭ್ಯರ್ಥಿಗಳು 720 ಕ್ಕೆ 720 ಅಂಕ ಗಳಿಸಿರುವುದರಿಂದ, ʻಅಕ್ರಮಗಳು ನಡೆದಿವೆʼ. ಹಿಂದಿನ ವರ್ಷಗಳಲ್ಲಿ ಈ ಪ್ರಮಾಣ ಬಹಳ ಕಡಿಮೆ ಇತ್ತು,ʼ ಎಂದು ಪೀಠ ಹೇಳಿತು. ʻಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಷ್ಟು ಮಂದಿ ಪ್ರಯೋಜನ ಪಡೆದಿದ್ದಾರೆ ಮತ್ತು ಅವರ ವಿರುದ್ಧ ಕೇಂದ್ರ ಯಾವ ಕ್ರಮ ತೆಗೆದುಕೊಂಡಿ ದೆ? ತಪ್ಪು ಮಾಡಿದ ಎಷ್ಟು ಮಂದಿಯ ಫಲಿತಾಂಶ ತಡೆಹಿಡಿಯಲಾಗಿದೆ ಮತ್ತು ಅಂತಹ ಫಲಾನುಭವಿಗಳ ಭೌಗೋಳಿಕ ಹಂಚಿಕೆ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ,ʼ ಎಂದು ಪೀಠ ಕೇಳಿದೆ.
ಪರೀಕ್ಷೆ ರದ್ದು ಕೂಡದು: ಪ್ರವೇಶಪರೀಕ್ಷೆಯನ್ನು ರದ್ದುಗೊಳಿಸದಂತೆ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯನ್ನು ನಿರ್ಬಂಧಿಸಬೇಕೆಂಬ ನಿರ್ದೇಶನ ಕೋರಿ 50 ಕ್ಕೂ ಹೆಚ್ಚು ಗುಜರಾತ್ ಮೂಲದ ನೀಟ್-ಯುಜಿ ಅಭ್ಯರ್ಥಿಗಳು ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಶ್ನೆಪತ್ರಿಕೆ, ಒಎಂಆರ್ ಶೀಟ್ ದುರ್ಬಳಕೆ, ನಕಲು ಮತ್ತು ವಂಚನೆ ಮುಂತಾದ ಕಾರಣಗಳಿಂದಾಗಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರುತ್ತಿದ್ದೇವೆ ಎಂದು ಹೇಳಿದರು.
ನೀಟ್-ಯುಜಿ ಪರೀಕ್ಷೆ ನಡೆಸುವ ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಪರೀಕ್ಷೆಯನ್ನು ರದ್ದುಗೊಳಿಸುವುದು ಪ್ರತಿಕೂಲ ಪರಿಣಾಮ ಬೀರಲಿದೆ ಮತ್ತು ಭಾರಿ ಪ್ರಮಾಣದ ಅಕ್ರಮದ ಪುರಾವೆ ಇಲ್ಲದಿದ್ದಲ್ಲಿ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದವು.
ಕೃಪಾಂಕ ರದ್ದು: ಕೇಂದ್ರ ಮತ್ತು ಎನ್‌ಟಿಎ, ಜೂನ್ 13 ರಂದು 1,563 ಅಭ್ಯರ್ಥಿಗಳಿಗೆ ನೀಡಲಾದ ಕೃಪಾಂಕಗಳನ್ನು ರದ್ದುಗೊಳಿಸಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿವೆ. ಎನ್‌ಟಿಎ ಜುಲೈ 1 ರಂದು ಪರಿಷ್ಕೃತ ಫಲಿತಾಂಶ ಪ್ರಕಟಿಸಿದ್ದು, ಉನ್ನತ ಶ್ರೇಣಿಯನ್ನು ಹಂಚಿಕೊಂಡ ಅಭ್ಯರ್ಥಿಗಳ ಸಂಖ್ಯೆ 67 ರಿಂದ 61 ಕ್ಕೆ ಇಳಿದಿದೆ.