NEET 2024 | ಕೃಪಾಂಕ ರದ್ದು, ಜೂನ್ 23 ರಂದು ಮರು ಪರೀಕ್ಷೆ: ಕೇಂದ್ರ ಸರ್ಕಾರ ಸ್ಪಷ್ಟನೆ
x

NEET 2024 | ಕೃಪಾಂಕ ರದ್ದು, ಜೂನ್ 23 ರಂದು ಮರು ಪರೀಕ್ಷೆ: ಕೇಂದ್ರ ಸರ್ಕಾರ ಸ್ಪಷ್ಟನೆ

ಮರುಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸದ 1,563 ಅಭ್ಯರ್ಥಿಗಳಿಗೆ ಕೃಪಾಂಕಗಳನ್ನು ಹೊರತುಪಡಿಸಿ, ಅವರ ಹಿಂದಿನ ಅಂಕಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ.


ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ( ನೀಟ್-ಯುಜಿ, 2024)ಯಲ್ಲಿ 1,563 ಅಭ್ಯರ್ಥಿಗಳಿಗೆ ನೀಡಿದ ಕೃಪಾಂಕ ವನ್ನು ರದ್ದುಗೊಳಿಸಲಾಗಿದೆ. ಅವರಿಗೆ ಜೂನ್ 23 ರಂದು ಮರುಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರವು ಗುರುವಾರ (ಜೂನ್ 13) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ವಕೀಲರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲದ ಪೀಠಕ್ಕೆ ಈ ವಿಷಯ ತಿಳಿಸಿದರು. ಪ್ರವೇಶಕ್ಕೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಹಿಂದಿನ ನಿಲುವನ್ನು ಪುನರುಚ್ಚರಿಸಿತು.

ʻಒಂದುವೇಳೆ 1563 ಅಭ್ಯರ್ಥಿಗಳು ಮರುಪರೀಕ್ಷೆ ತೆಗೆದುಕೊಳ್ಳಲು ಬಯಸದಿದ್ದರೆ, ಕೃಪಾಂಕ ಹೊರತುಪಡಿಸಿ, ಗಳಿಸಿದ ಅಂಕಗಳನ್ನು ಪರಿಗಣಿಸಲಾಗುತ್ತದೆ. ಮರುಪರೀಕ್ಷೆ ಫಲಿತಾಂಶವನ್ನು ಜೂನ್ 30 ರಂದು ಪ್ರಕಟಿಸಲಾಗುತ್ತದೆ. ಎಂಬಿಬಿಎಸ್, ಬಿಡಿಎಸ್, ಇತರ ಕೋರ್ಸ್‌ಗಳ ಪ್ರವೇಶಕ್ಕೆ ಜುಲೈ 6 ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದೆ.

ಮುಂದಿನ ವಿಚಾರಣೆ ಜುಲೈ 8ಕ್ಕೆ: ಸಲ್ಲಿಕೆಗಳನ್ನು ಪರಿಗಣಿಸಿದ ಪೀಠವು, ಕೃಪಾಂಕ ನೀಡುವ ಕುರಿತು ಎಜುಟೆಕ್ ಸಂಸ್ಥೆ ಫಿಸಿಕ್ಸ್ ವಾಲಾದ ಮುಖ್ಯ ಕಾರ್ಯನಿರ್ವಾಹಕ ಅಲಖ್ ಪಾಂಡೆ ಅವರು ಸಲ್ಲಿಸಿದ ಅರ್ಜಿ ಸೇರಿದಂತೆ, ಎಲ್ಲಾ ಅರ್ಜಿಗಳನ್ನು ಜುಲೈ 8 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿತು. ಇದರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ನೀಟ್-ಯುಜಿ 2024 ನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳೂ ಸೇರಿವೆ.

ಎನ್‌ಟಿಎ 4,750 ಕೇಂದ್ರಗಳಲ್ಲಿ ಮೇ 5 ರಂದು ಪರೀಕ್ಷೆ ನಡೆಸಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜೂನ್ 14 ರಂದು ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ, ಜೂನ್ 4 ರಂದೇ ಫಲಿತಾಂಶ ಪ್ರಕಟಿಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು 1,500 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೃಪಾಂಕ ನೀಡಲಾಗಿದೆ ಎಂದು ಪ್ರತಿಭಟನೆ ನಡೆದಿದ್ದು, ಏಳು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದಾರೆ. ಇದು ಎನ್‌ಟಿಎ ಇತಿಹಾಸದಲ್ಲಿ ಈವರೆಗೆ ನಡೆದಿಲ್ಲ.ಹರಿಯಾಣದ ಫರಿದಾಬಾದ್‌ನ ಕೇಂದ್ರವೊಂದರ ಆರು ಮಂದಿ ಈ ಪಟ್ಟಿಯಲ್ಲಿದ್ದಾರೆ. ಪರೀಕ್ಷೆ ಅಕ್ರಮ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ, ಜೂನ್ 10 ರಂದು ದೆಹಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Read More
Next Story