NEET PG 2025 : ನೀಟ್​ ಪರೀಕ್ಷೆ ಆಗಸ್ಟ್ 3ಕ್ಕೆ ಮುಂದೂಡಿಕೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
x

NEET PG 2025 : ನೀಟ್​ ಪರೀಕ್ಷೆ ಆಗಸ್ಟ್ 3ಕ್ಕೆ ಮುಂದೂಡಿಕೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪಾರದರ್ಶಕತೆ ಮತ್ತು ಸುರಕ್ಷತೆ ಖಾತ್ರಿಪಡಿಸಿಕೊಂಡು ಒಂದೇ ಪಾಳಿಯಲ್ಲಿ ಪರೀಕ್ಷೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ಮಂಡಳಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಸೋಮವಾರವೇ ಪರೀಕ್ಷೆಯನ್ನು ಮುಂದೂಡುವುದಾಗಿ ಘೋಷಿಸಿತ್ತು.



ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಪಿಜಿ (NEET PG) 2025 ಪರೀಕ್ಷೆಯನ್ನು ಆಗಸ್ಟ್ 3ರಂದು ಒಂದೇ ಪಾಳಿಯಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಈ ನಿರ್ಧಾರವು ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಪಾರದರ್ಶಕತೆ ಮತ್ತು ಸಮಾನ ಅವಕಾಶಗಳ ಆಶಯ ಮೂಡಿಸಿದೆ.

ಈ ಮೊದಲು, ಜೂನ್ 15ರಂದು ನೀಟ್ ಪಿಜಿ ಪರೀಕ್ಷೆ ನಿಗದಿಯಾಗಿತ್ತು. ಆದರೆ, ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಬಹು ಪಾಳಿಯ ಪರೀಕ್ಷಾ ನಡೆಸುವ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಬಹು ಪಾಳಿಗಳಲ್ಲಿ ಪರೀಕ್ಷೆ ನಡೆಸುವುದರಿಂದ ಪ್ರಶ್ನೆ ಪತ್ರಿಕೆಗಳ ಕಠಿಣತೆಯಲ್ಲಿ ವ್ಯತ್ಯಾಸಗಳುಂಟಾಗಿ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಇದೀಗ ಮಾನ್ಯ ಮಾಡಿದೆ.

ಪಾರದರ್ಶಕತೆ ಮತ್ತು ಸುರಕ್ಷತೆ ಖಾತ್ರಿಪಡಿಸಿಕೊಂಡು ಒಂದೇ ಪಾಳಿಯಲ್ಲಿ ಪರೀಕ್ಷೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ಮಂಡಳಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಸೋಮವಾರವೇ ಪರೀಕ್ಷೆಯನ್ನು ಮುಂದೂಡುವುದಾಗಿ ಘೋಷಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ, ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲು ಹೆಚ್ಚು ಪರೀಕ್ಷಾ ಕೇಂದ್ರಗಳ ಅಗತ್ಯವಿರುವುದರಿಂದ ಮತ್ತು ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿರುವುದರಿಂದ ಆಗಸ್ಟ್ 3ಕ್ಕೆ ದಿನಾಂಕ ವಿಸ್ತರಿಸುವಂತೆ ಮಂಡಳಿ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದರು. ಈ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಆಗಸ್ಟ್ 3ರಂದು ಪರೀಕ್ಷೆ ನಡೆಸಲು ಒಪ್ಪಿಗೆ ಸೂಚಿಸಿದೆ. ನಂತರ ಯಾವುದೇ ಹೆಚ್ಚಿನ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಅಗತ್ಯ ಮೂಲಸೌಕರ್ಯಗಳನ್ನು ನವೀಕರಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಮಂಡಳಿಯು ಬದ್ಧವಾಗಿದೆ ಎಂದು ಮಂಡಳಿ ತಿಳಿಸಿದೆ. ದೇಶಾದ್ಯಂತ ಈಗ ಪರೀಕ್ಷಾ ಕೇಂದ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ.

Read More
Next Story