NEET-UG 2024| ಪರೀಕ್ಷೆ ವ್ಯವಸ್ಥೆ ಸುಧಾರಣೆಗೆ ತಜ್ಞರ ಸಮಿತಿ ರಚನೆ
x

NEET-UG 2024| ಪರೀಕ್ಷೆ ವ್ಯವಸ್ಥೆ ಸುಧಾರಣೆಗೆ ತಜ್ಞರ ಸಮಿತಿ ರಚನೆ

ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ತಜ್ಞರ ಸಮಿತಿಯು ಪರೀಕ್ಷಾ ಪ್ರಕ್ರಿಯೆಯನ್ನು ವಿಶ್ಲೇಷಿಸುತ್ತದೆ; ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಯಾವುದೇ ಸಂಭವನೀಯ ಉಲ್ಲಂಘನೆಯನ್ನು ವಿಫಲಗೊಳಿಸಲು ಕ್ರಮಗಳನ್ನು ಸೂಚಿಸುತ್ತದೆ.


ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕ, ಸುಗಮ ಮತ್ತು ನ್ಯಾಯಬದ್ಧವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಸುಧಾರಣೆಗಳನ್ನು ಶಿಫಾರಸು ಮಾಡಲು ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ತಜ್ಞರ ತಂಡವನ್ನು ರಚಿಸಲಾಗಿದೆ.

ಪರೀಕ್ಷಾ ಪ್ರಕ್ರಿಯೆ, ದತ್ತಾಂಶ ಭದ್ರತೆ ಶಿಷ್ಟಾಚಾರದ ಸುಧಾರಣೆ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರಚನೆ ಹಾಗೂ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಈ ಸಮಿತಿ ಶಿಫಾರಸು ನೀಡುತ್ತದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪ್ರತಿಭಟಿಸಿ, ದೇಶಾದ್ಯಂತ ವಿದ್ಯಾರ್ಥಿಗಳು ರಸ್ತೆಗಿಳಿದ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಿದೆ.

2 ತಿಂಗಳಲ್ಲಿ ವರದಿ: ಸಮಿತಿ ವರದಿಯನ್ನು ಎರಡು ತಿಂಗಳೊಳಗೆ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸಮಿತಿಯ ಸದಸ್ಯರಾಗಿ ಏಮ್ಸ್ (ದೆಹಲಿ) ಮಾಜಿ ನಿರ್ದೇಶಕ ರಣದೀಪ್ ಗುಲೇರಿಯಾ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಬಿ.ಜೆ. ರಾವ್, ಐಐಟಿ ಮದ್ರಾಸ್‌ನ ಪ್ರೊ. ಕೆ. ರಾಮಮೂರ್ತಿ, ಪಂಕಜ್ ಬನ್ಸಾಲ್, ಐಐಟಿ ದೆಹಲಿ (ಡೀನ್) ಆದಿತ್ಯ ಮಿತ್ತಲ್ ಮತ್ತು ಗೋವಿಂದ್ ಜೈಸ್ವಾಲ್ ಇರಲಿದ್ದಾರೆ.

ಪರೀಕ್ಷೆ ಪ್ರಕ್ರಿಯೆಯ ವಿಶ್ಲೇಷಣೆ: ಸಮಿತಿಯು ಪರೀಕ್ಷಾ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ವಿಶ್ಲೇಷಿಸುತ್ತದೆ. ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಸಂಭವನೀಯ ಉಲ್ಲಂಘನೆಯನ್ನು ತಡೆಯಲು ಕ್ರಮಗಳನ್ನು ಸೂಚಿಸುತ್ತದೆ.

ಇದು ಮಾದರಿ ಕಾರ್ಯನಿರ್ವಹಣೆ ವಿಧಾನ(ಎಸ್‌ಒಪಿ) ಮತ್ತು ಎನ್‌ ಟಿಎ ಶಿಷ್ಟಾಚಾರಗಳ ಸಂಪೂರ್ಣ ಪರಿಶೀಲನೆ ನಡೆಸುತ್ತದೆ. ಪ್ರತಿ ಹಂತದಲ್ಲೂ ಅನುಸರಣೆ ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ಕಾರ್ಯವಿಧಾನವನ್ನು ಬಲಪಡಿಸಲು ಕ್ರಮಗಳನ್ನು ಸೂಚಿಸುತ್ತದೆ.

ದತ್ತಾಂಶ ಭದ್ರತೆ: ಅಸ್ತಿತ್ವದಲ್ಲಿರುವ ದತ್ತಾಂಶ ಭದ್ರತಾ ಪ್ರಕ್ರಿಯೆಗಳು ಮತ್ತುಎನ್‌ಟಿಎಯ ಪ್ರೋಟೋಕಾಲ್‌ಗಳನ್ನು ಮೌಲ್ಯಮಾಪನ ಮಾಡಲಿದ್ದು, ಅವುಗಳ ಸುಧಾರಣೆಗೆ ಕ್ರಮಗಳನ್ನು ಶಿಫಾರಸು ಮಾಡಲಿದೆ.

ವಿವಿಧ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಗೊಳಿಸುವಿಕೆ ಮತ್ತು ಇತರ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಭದ್ರತಾ ಪ್ರೋಟೋಕಾಲ್‌ ಗಳನ್ನು ಪರಿಶೀಲಿಸಲಿದ್ದು, ವ್ಯವಸ್ಥೆಯನ್ನು ದೃಢಪಡಿಸಲು ಶಿಫಾರಸುಗಳನ್ನು ಮಾಡಲಿದೆ.

ಎನ್‌ ಟಿಎ ಕಾರ್ಯನಿರ್ವಹಣೆ: ಎನ್‌ಟಿಎ ಸಾಂಸ್ಥಿಕ ರಚನೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಶಿಫಾರಸು ಮಾಡುತ್ತದೆ; ಪ್ರತಿ ಹಂತ ದಲ್ಲೂ ಕಾರ್ಯನಿರ್ವಾಹಕರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಇದರಿಂದ ಎಲ್ಲ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬಹುದು.

ಇದು ಎನ್‌ಟಿಎಯ ಕುಂದುಕೊರತೆ ಪರಿಹಾರಕ್ಕೆ ಕಾರ್ಯವಿಧಾನವನ್ನು ನಿರ್ಣಯಿಸುತ್ತದೆ, ಸುಧಾರಣೆ ಆಗಬೇಕಾದ ಕ್ಷೇತ್ರಗಳನ್ನು ಗುರುತಿಸುತ್ತದೆ ಮತ್ತು ಅದರ ದಕ್ಷತೆಯನ್ನು ಹೆಚ್ಚಿಸಲು ಶಿಫಾರಸುಗಳನ್ನು ಮಾಡುತ್ತದೆ.

Read More
Next Story