NEET-UG 2024| ಕೇಂದ್ರದ ವಿರುದ್ಧ ತಮಿಳುನಾಡು ವಾಗ್ದಾಳಿ; ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ
x

NEET-UG 2024| ಕೇಂದ್ರದ ವಿರುದ್ಧ ತಮಿಳುನಾಡು ವಾಗ್ದಾಳಿ; ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ


ತಮಿಳುನಾಡು, ಜೂನ್ 13: ರಾಷ್ಟ್ರೀಯ ಅರ್ಹತೆ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಕೃಪಾಂಕ ನೀಡುವುದು ಸ್ವೀಕಾರಾರ್ಹವಲ್ಲ ಮತ್ತು ವಂಚನೆ ಎಂದು ತಮಿಳುನಾಡು ಸರ್ಕಾರ ಟೀಕಿಸಿದೆ.

ʻನೀಟ್‌ ವಿರುದ್ಧ ದೇಶಾದ್ಯಂತ ಅಸಮಾಧಾನ ಮತ್ತು ಪ್ರತಿಭಟನೆ ಹೆಚ್ಚುತ್ತಿದ್ದು,ಈ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂಬ ಡಿಎಂಕೆಯ ಮನವಿ ಬಲಗೊಂಡಿದೆ,ʼ ಎಂದು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಹೇಳಿದ್ದಾರೆ. ʻಪರೀಕ್ಷೆ ಯಲ್ಲಿ ಅವ್ಯವಹಾರ, ಕೃಪಾಂಕ ನೀಡಿಕೆಯಂಥ ಅಕ್ರಮ ಮತ್ತು ಗೊಂದಲಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯೇ ಹೊಣೆ. ಕೃಪಾಂಕ ನೀಡಲು ಆಧಾರವೇನು? ಇದನ್ನು ನೀಟ್‌ ಆಕಾಂಕ್ಷಿಗಳಿಗೆ ತಿಳಿಸಲಾಗಿದೆಯೇ?,ʼ ಎಂದು ಅವರು ಪ್ರಶ್ನಿಸಿದರು.

ಮಾನಸಿಕ ಸಂಕಟ: ʻ23 ಲಕ್ಷ ಅಭ್ಯರ್ಥಿಗಳಿಗೆ ಮಾನಸಿಕ ಯಾತನೆಯಾಗಿದೆ. ತಮಿಳುನಾಡಿನ ಯಾರಿಗೂ ಕೃಪಾಂಕ ನೀಡಿಲ್ಲ.ನೀಟ್ ರದ್ದುಗೊಳಿಸಬೇಕೆಂಬ ಕೂಗು ಭಾರತದಾದ್ಯಂತ ಕೇಳಿಬರುತ್ತಿದೆ. ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪರೀಕ್ಷೆ ತೆಗೆದುಹಾಕಬೇಕೆಂದು ಹೇಳಿದ್ದರು. ಕೇಂದ್ರ ಸರ್ಕಾರ ಈಗಲಾದರೂ ನೀಟ್ ಪರೀಕ್ಷೆ ರದ್ದುಪಡಿಸಬೇಕು,' ಎಂದು ನುಡಿದರು. ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಪಕ್ಷದ ವರಿಷ್ಠೆ- ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ವಿರೋಧಿಸಿದ್ದರೂ, ನೀಟ್ ಪರೀಕ್ಷೆಗೆ ಅನುಮತಿ ನೀಡಿದರು ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ: ನೀಟ್-ಯುಜಿಯಲ್ಲಿ ಅಕ್ರಮ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ವಿಳಂಬವಾಗಿದೆ ಎಂದು ಆರೋಪಿಸಿ, ಸಾಲ್ಟ್ ಲೇಕ್‌ನಲ್ಲಿರುವ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಯಿತು.

ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‌ಒ) ಸದಸ್ಯರು ಸಾಲ್ಟ್ ಲೇಕ್‌ನಲ್ಲಿರುವ ಬಿಕಾಶ್ ಭವನಕ್ಕೆ ಹೋಗುತ್ತಿದ್ದಾಗ ಅವರನ್ನು ಪೊಲೀಸರು ತಡೆದರು. ಪ್ರತಿಭಟನಕಾರರು ಮುನ್ನುಗ್ಗಲು ಪ್ರಯತ್ನಿ ಸಿದ್ದರಿಂದ, ಕೆಲವರನ್ನು ಬಂಧಿಸಿ ಕರೆದೊಯ್ದರು.

ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಟಿಎಂಸಿ ವಕ್ತಾರ ಡಾ.ಸಂತಾನು ಸೇನ್ ಆರೋಪಿಸಿದ್ದಾರೆ. ʻಕೇಂದ್ರ ಸರ್ಕಾರದ ಅತಿ ದೊಡ್ಡ ಹಗರಣಗಳಲ್ಲಿ ಇದು ಒಂದು. 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿರುವ ಈ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನಾವು ಒತ್ತಾಯಿಸುತ್ತೇವೆ,ʼ ಎಂದು ಸೇನ್ ಹೇಳಿದರು.

Read More
Next Story