ಕೋಟಾದಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ
ರಾಜಸ್ಥಾನದ ಕೋಟಾದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಪಿಯು) ಓದುತ್ತಿದ್ದ ವಿದ್ಯಾರ್ಥಿಯೊಬ್ಬರು ಅಪಾರ್ಟ್‌ಮೆಂಟ್‌ನಲ್ಲಿ ಸೆಪ್ಟೆಂಬರ್ 4ರಂದು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮಥುರಾ ಮೂಲದ ಪರಶುರಾಮ್(21) ಆತ್ಮಹತ್ಯೆ ಮಾಡಿಕೊಂಡವರು. ನೀಟ್‌ಗೆ ತರಬೇತಿ ಪಡೆಯುತ್ತಿದ್ದ ಅವರು ಜವಾಹರ್ ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.
ಮನೆ ಮಾಲೀಕ ಬಾಗಿಲು ಬಡಿದರೂ, ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರಾತ್ರಿ 11:30 ರ ಸುಮಾರಿಗೆ ಪೊಲೀಸರಿಗೆ ವಿಷಯ ತಿಳಿಸಿದರು. ಬಾಗಿಲು ಒಡೆದು ನೋಡಿದಾಗ, ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ಕಂಡುಬಂದಿತು. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಕರೆಸಲಾಯಿತು. ಶವವನ್ನು ಎಂಬಿಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ವಿದ್ಯಾರ್ಥಿಯ ಕುಟುಂಬ ಬಂದ ನಂತರ ಶವಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದಿನ ಪ್ರಕರಣ: ಕೋಟಾದಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 15ಕ್ಕೆ ಏರಿದೆ. 2023 ರಲ್ಲಿ 23 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗಸ್ಟ್ 20 ರಂದು ಉತ್ತರಪ್ರದೇಶ ಪ್ರಯಾಗ್ ರಾಜ್ ನ ಕುಶಾಗ್ರಾ ರಸ್ತೋಗಿ(18), ಬಿಹಾರದ ನಳಂದ ಜಿಲ್ಲೆಯವರಾದ ಸಂದೀಪ್ ಕುಮಾರ್ ಕುರ್ಮಿ(16), ಜೂನ್ ತಿಂಗಳಿನಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೋಟಾ ಪೊಲೀಸರು ಮೇ ತಿಂಗಳಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಆತ್ಮಹತ್ಯಾ ಪ್ರವೃತ್ತಿಯನ್ನು ಪ್ರದರ್ಶಿಸುವ ವಿದ್ಯಾರ್ಥಿಗಳನ್ನು ಗುರುತಿಸಲು ಮೆಟಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.