ನೀರಜ್ ಚೋಪ್ರಾಗೆ ಚಿನ್ನ
x

ನೀರಜ್ ಚೋಪ್ರಾಗೆ ಚಿನ್ನ

ಫೆಡರೇಶನ್ ಕಪ್‌ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆ


ಭುವನೇಶ್ವರ, ಮೇ 15- ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಇಲ್ಲಿ ನಡೆದ ಫೆಡರೇಶನ್ ಕಪ್‌ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಭಾರತದ ನೆಲದಲ್ಲಿ ಮೂರು ವರ್ಷಗಳ ಬಳಿಕ ಅವರ ಮೊದಲ ಸ್ಪರ್ಧೆ ಇದಾಗಿದೆ.

ದೋಹಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದ ಅವರು ಸ್ಪರ್ಧೆಯ ಮುನ್ನಾದಿನದಂದು ನಗರಕ್ಕೆ ಆಗಮಿಸಿದರು. 26 ವರ್ಷದ ಸೂಪರ್‌ಸ್ಟಾರ್ ಮೂರು ಸುತ್ತುಗಳ ನಂತರ ಎರಡನೇ ಸ್ಥಾನ ಪಡೆದರು. ನಾಲ್ಕನೇ ಸುತ್ತಿನಲ್ಲಿ ಜಾವೆಲಿನ್ನ‌ 82.27 ಮೀಟರ್‌ ಎಸೆದು ಮುನ್ನಡೆ ಸಾಧಿಸಿದರು. ಆದ್ದರಿಂದ, 5 ಮತ್ತು 6ನೇ ಎಸೆತಕ್ಕೆ ಮುಂದಾಗಲಿಲ್ಲ. ಚೋಪ್ರಾ ಹರಿಯಾಣವನ್ನು ಪ್ರತಿನಿಧಿಸುತ್ತಿದ್ದರು. ಕರ್ನಾಟಕದ ಡಿ.ಪಿ. ಮನು (82.06 ಮೀ) ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಮಹಾರಾಷ್ಟ್ರದ ಉತ್ತಮ ಬಾಳಾಸಾಹೇಬ್‌ ಪಾಟೀಲ್‌ (78.39 ಮೀ) ಮೂರನೇ ಸ್ಥಾನ ಪಡೆದುಕೊಂಡರು. ಸ್ಥಳೀಯ ಆಟಗಾರ ಮತ್ತು ಏಷ್ಯನ್ ಗೇಮ್ಸ್‌ ನ ಬೆಳ್ಳಿ ಪದಕ ವಿಜೇತ ಕಿಶೋರ್ ಜೆನಾ 75.49 ಮೀಟರ್‌ ಎಸೆದು, ಐದನೇ ಸ್ಥಾನ ಪಡೆದರು. ಕಳೆದ ವರ್ಷ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಜೆನಾ, 87.54 ಮೀ ದೂರ ಎಸೆದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

ಏತನ್ಮಧ್ಯೆ, ಕರ್ನಾಟಕದ ಎಸ್‌.ಎಸ್. ಸ್ನೇಹಾ 11.63 ಸೆಕೆಂಡುಗಳಲ್ಲಿ 100 ಮೀಟರ್‌ ಓಡಿ, ಚಿನ್ನ ಗೆದ್ದು ಕೂಟದ ವೇಗದ ಮಹಿಳೆ ಎನಿಸಿಕೊಂಡರು. ತಮಿಳುನಾಡಿನ ಗಿರಿಧ್ರಾಣಿ ರವಿ (11.67 ಸೆ) ಮತ್ತು ಒಡಿಶಾದ ಶ್ರಬಾನಿ ನಂದಾ (11.76 ಸೆ) ಕ್ರಮವಾಗಿ ಎರಡು ಮತ್ತು ತೃತೀಯ ಸ್ಥಾನ ಪಡೆದರು.

ಪುರುಷರ 100 ಮೀಟರ್‌ ಓಟದಲ್ಲಿ ಪಂಜಾಬ್‌ನ ಗುರಿಂದರ್‌ವೀರ್ ಸಿಂಗ್ ಚಿನ್ನ(10.35 ಸೆಕೆಂಡ್‌), ಮಂಗಳವಾರ 200 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ಒಡಿಶಾದ ಅನಿಮೇಶ್ ಕುಜೂರ್ (10.50 ಸೆ) ಎರಡನೇ ಸ್ಥಾನ ಹಾಗೂ ಪಂಜಾಬ್ ನ ಮತ್ತೋರ್ವ ಅಥ್ಲೀಟ್ ಹರ್ಜಿತ್ ಸಿಂಗ್ (10.56 ಸೆ) ಮೂರನೇ ಸ್ಥಾನ ಪಡೆದರು.

2021ರಲ್ಲಿ ದೇಶಿ ಟೂರ್ನಿ: ಚೋಪ್ರಾ ಅವರು ಮಾರ್ಚ್ 2021 ರಲ್ಲಿ ದೇಶಿ ಟೂರ್ನಿಯಲ್ಲಿ 87.80 ಮೀಟರ್ ಎಸೆಯುವ ಮೂಲಕ ಚಿನ್ನ ಗೆದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನವನ್ನು ಗೆದ್ದಿದ್ದಾರೆ. 2022 ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್, 2023 ರಲ್ಲಿ ವಿಶ್ವ ಚಾಂಪಿಯನ್ ಹಾಗೂ ಚೀನಾದಲ್ಲಿ ಏಷ್ಯನ್ ಗೇಮ್ಸ್ ಚಿನ್ನವನ್ನು ಉಳಿಸಿಕೊಂಡರು. ಆದರೆ, ಅವರು 90 ಮೀಟರ್ ಗುರಿಯನ್ನು ಮುಟ್ಟಬೇಕಿದೆ. ಅವರ ಅತ್ಯುತ್ತಮ ಎಸೆತವಾದ 89.94 ಮೀ. ಭಾರತದ ಪುರುಷರ ಜಾವೆಲಿನ್ ರಾಷ್ಟ್ರೀಯ ದಾಖಲೆಯಾಗಿದೆ.

Read More
Next Story