ಎನ್‌ ಡಿಎ  ಮೈತ್ರಿಕೂಟ ಬಲಿಷ್ಠವಾಗಿದೆ; ಪ್ರಧಾನಿ
x

ಎನ್‌ ಡಿಎ ಮೈತ್ರಿಕೂಟ ಬಲಿಷ್ಠವಾಗಿದೆ; ಪ್ರಧಾನಿ

ʻಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಹಾಳುಮಾಡಲು ಪ್ರಯತ್ನಿಸುತ್ತಿವೆ. ಎನ್ಡಿಎ ಗೆಲುವಿನ ಬಗ್ಗೆ ಅನುಮಾನ ಮೂಡಿಸುತ್ತಿವೆ‌,ʼ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು.


ಶುಕ್ರವಾರ (ಜೂನ್ 7): ʻಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಹಾಳುಮಾಡಲು ಪ್ರಯತ್ನಿಸುತ್ತಿವೆ. ಎನ್ಡಿಎ ಗೆಲುವಿನ ಬಗ್ಗೆ ಅನುಮಾನ ಮೂಡಿಸುತ್ತಿವೆ‌,ʼ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದರು.

ʻಮೈತ್ರಿಗಳ ಸನ್ನಿವೇಶ ಮತ್ತು ಅಂಕಿಅಂಶಗಳನ್ನು ಗಮನಿಸಿದರೆ, ಇದು ಪ್ರಬಲ ಮೈತ್ರಿ ಸರ್ಕಾರ,ʼ ಎಂದು ಎನ್‌ಡಿಎ ನಾಯಕರಾಗಿ ಆಯ್ಕೆಯಾದ ನಂತರ ನೂತನ ಸಂಸದರು ಮತ್ತು ದೇಶಾದ್ಯಂತದ ನಾಯಕರನ್ನು ಉದ್ದೇಶಿಸಿ ಹೇಳಿದರು. ಭಾನುವಾರ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ವಿರೋಧಪಕ್ಷಗಳ ದ್ವಂದ್ವ: ಚುನಾವಣಾ ಪ್ರಕ್ರಿಯೆಯುದ್ದಕ್ಕೂ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಚುನಾವಣೆ ಆಯೋಗದ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಇಂಡಿಯ ಒಕ್ಕೂಟವನ್ನು ತರಾಟೆ ತೆಗೆದುಕೊಂಡ ಅವರು, ʻಫಲಿತಾಂಶ ತಮಗೆ ಸರಿಹೊಂದದಿದ್ದರೆ, ಅವರು ದೇಶಾದ್ಯಂತ ಬೆಂಕಿ ಹಚ್ಚಲು ಬಯಸುತ್ತಾರೆ. ಜೂನ್ 4 ರ ಸಂಜೆ ವೇಳೆಗೆ ಇವಿಎಂಗಳು ಅವರನ್ನು ಮೌನವಾಗಿಸಿದವು,ʼ ಎಂದು ಹೇಳಿದರು.

ಬಹುಮತದ ಕೊರತೆಯಿಂದ ಬಿಜೆಪಿ ಸದಸ್ಯರಲ್ಲಿ ನಿರಾಶಾಭಾವವನ್ನು ತಣಿಸಲು, ಸರ್ಕಾರದ ಕಾರ್ಯಸೂಚಿಗೆ ರಾಷ್ಟ್ರವ್ಯಾಪಿ ಅನುಮೋದನೆ ಸಿಕ್ಕಿದೆ ಎಂದು ಗಮನ ಸೆಳೆದರು. ದಕ್ಷಿಣ ಭಾರತ ಮತ್ತು ಒಡಿಶಾದಲ್ಲಿ ಎನ್‌ಡಿಎಗೆ ಜನರ ಬೆಂಬಲ ಹೆಚ್ಚಳವನ್ನು ಉಲ್ಲೇಖಿಸಿದ ಅವರು,ʻ ಅಲ್ಲಿ ಬಿಜೆಪಿ ತನ್ನ ಚೊಚ್ಚಲ ಸರ್ಕಾರ ರಚಿಸಲು ಸಿದ್ಧವಾಗಿದೆ,ʼ ಎಂದು ಹೇಳಿದರು.

100 ಸ್ಥಾನ ಮುಟ್ಟಲು ಸಾಧ್ಯವಾಗಿಲ್ಲ: ʻ2014ರಿಂದ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಸಿಕ್ಕಷ್ಟು ಸೀಟು ಸಿಕ್ಕಿರಲಿಲ್ಲ. ಈ ಬಾರಿ 100ರ ಗಡಿಯನ್ನೂ ಮುಟ್ಟಲು ಸಾಧ್ಯವಾಗಿಲ್ಲ. ನಾವು ಸೋತಿಲ್ಲ ಎನ್ನುವುದು ಜನರಿಗೆ ಗೊತ್ತಿದೆ. ನಾವು ಎಲ್ಲಿ ಸೋತಿದ್ದೇವೆ? ಎನ್‌ಡಿಎ ನಿನ್ನೆ ಇತ್ತು, ಇಂದು ಇದೆ ಮತ್ತು ನಾಳೆ ಇರುತ್ತದೆ. ಫಲಿತಾಂಶವು ಎನ್‌ಡಿಎಯ ವಿಜಯವನ್ನು ಪ್ರತಿಬಿಂಬಿಸುತ್ತವೆ ಎಂದು ಜಗತ್ತು ಗುರುತಿಸಿದೆ,ʼ ಎಂದು ಹೇಳಿದರು.

ಸಂಸತ್ತಿನ ಕಾಂಪ್ಲೆಕ್ಸ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಮೂವರು ಬಿಜೆಪಿ ನಾಯಕರ ಹೊರತಾಗಿ ಮಿತ್ರಪಕ್ಷಗಳ ಒಂಬತ್ತು ನಾಯಕರು ಮೋದಿ ಅವರ ಜೊತೆಗಿದ್ದರು. ಎನ್‌ಡಿಎ, ತೆಲುಗು ದೇಶಂ ಪಕ್ಷದ ಎನ್. ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಸೇರಿದಂತೆ ಮೈತ್ರಿಕೂಟದ ಸದಸ್ಯರು ತಮ್ಮ ರಾಜ್ಯಗಳಲ್ಲಿ ಅಭಿವೃದ್ಧಿಗೆ ಹೇಗೆ ನಾಂದಿ ಹಾಡಿದ್ದಾರೆ ಎಂಬುದನ್ನು ಮತ್ತೆ ಮತ್ತೆ ಉಲ್ಲೇಖಿಸಿದರು.

ಎನ್‌ಡಿಎ ಗೆಲುವು ಒಪ್ಪಿಕೊಳ್ಳದಿರಲು ಪ್ರಯತ್ನ: ʻಎನ್‌ಡಿಎ ಗೆಲುವನ್ನು ಒಪ್ಪಿಕೊಳ್ಳದಿರಲು ಮತ್ತು ಸೋಲಿನ ಭಾವನೆಯಿಂದ ಅದನ್ನು ಮರೆಮಾಡಲು ಪ್ರಯತ್ನಿಸಲಾಗಿದೆʼ ಎಂದು ಪ್ರಧಾನಿ ಹೇಳಿದರು.

ʻವಿರೋಧ ಪಕ್ಷಗಳು ಭಾರತೀಯ ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ ಮುರಿಯುವುದನ್ನು ಖಚಿತಪಡಿಸಿಕೊಳ್ಳಲು ಮನಸ್ಸು ಮಾಡಿ ದ್ದಾರೆ. ಅವರು ಇವಿಎಂಗಳ ಶವಯಾತ್ರೆ ನಡೆಸುತ್ತಾರೆ ಎಂದು ನಾನು ಭಾವಿಸಿದ್ದೆ. ಜೂನ್ 4 ರ ಸಂಜೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಮೌನವಾದರು. ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿ ಸಲ್ಲಿಸುವ ಮೂಲಕ ಚುನಾವಣೆ ಆಯೋಗದ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರು. ಇದು ಅವರ ಹತಾಶೆಯನ್ನು ತೋರಿಸುತ್ತದೆ,ʼ ಎಂದು ಅವರು ಹೇಳಿದರು.

ಮೋದಿಯವರ ಆಯ್ಕೆ ನಂತರ ವಿವಿಧ ಪಕ್ಷಗಳ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಬೆಂಬಲ ಪತ್ರಗಳನ್ನು ಸಲ್ಲಿಸಿದರು.

Read More
Next Story