ಕಟ್ಟಾ ನಕ್ಸಲ್ ನಾಯಕನಾದ ಮೇಷ್ಟ್ರ ಮಗ!  ಎನ್‌ಕೌಂಟರ್‌ನಲ್ಲಿ ಹತನಾದ ಮಾವೋ ಕಮಾಂಡರ್ ಬಸವರಾಜ
x

ಕಟ್ಟಾ ನಕ್ಸಲ್ ನಾಯಕನಾದ ಮೇಷ್ಟ್ರ ಮಗ! ಎನ್‌ಕೌಂಟರ್‌ನಲ್ಲಿ ಹತನಾದ ಮಾವೋ ಕಮಾಂಡರ್ ಬಸವರಾಜ

ನಂಬಳ ಕೇಶವ ರಾವ್ ಗೆ ಅನೇಕ ಹೆಸರುಗಳು. ಮಾವೋ ಆಪರೇಷನ್ ಗಳಲ್ಲಿ ಈತನೇ ಸ್ಟ್ರಾಟಜಿ ಮಾಸ್ಟರ್. ಗೆರಿಲ್ಲಾ ಯುದ್ಧತಂತ್ರಗಳ ಪರಿಣತ. ದಾಳಿಗಳ ಪ್ಲಾನ್ ರೂಪಿಸುವಲ್ಲಿ ಎತ್ತಿದ ಕೈ.


ನಂಬಳ ಕೇಶವ ರಾವ್ ಗೆ ಅನೇಕ ಹೆಸರುಗಳು. ಮಾವೋ ಆಪರೇಷನ್ ಗಳಲ್ಲಿ ಈತನೇ ಸ್ಟ್ರಾಟಜಿ ಮಾಸ್ಟರ್. ಗೆರಿಲ್ಲಾ ಯುದ್ಧತಂತ್ರಗಳ ಪರಿಣತ. ದಾಳಿಗಳ ಪ್ಲಾನ್ ರೂಪಿಸುವಲ್ಲಿ ಎತ್ತಿದ ಕೈ.

ಛತ್ತೀಸಗಢದ ನಾರಾಯಣಪುರದಲ್ಲಿ ನಡೆದ ರಣರೋಚಕ ಕಾಳಗದಲ್ಲಿ ಮಾವೋ ಕಮಾಂಡರ್, ಕಟ್ಟಾ ನಕ್ಸಲ್ ಪಟು ನಂಬಳ ಕೇಶವ ರಾವ್ ಅಲಿಯಾಸ್ ಬಸವರಾಜ್ ಧರೆಗುರುಳಿದ್ದಾನೆ. ಇದರೊಂದಿಗೆ ದಶಕಗಳಿಂದ ನಕ್ಸಲರ ವಿರುದ್ಧ ನಡೆಯುತ್ತಿರುವ ಸಮರಕ್ಕೆ ಭಾರೀ ಜಯ ದಕ್ಕಿದಂತಾಗಿದೆ.

ಭಾರತದ ಮಾವೋವಾದಿ ನಕ್ಸಲ್ ಚಳವಳಿಯನ್ನು ಬಹಳ ಕಾಲ ಮುನ್ನಡೆಸಿದವನು ಮುಪ್ಪಳ ಲಕ್ಷ್ಮಣ ರಾವ್ ಅಲಿಯಾಸ್ ಗಣಪತಿ. 2018ರ ಹೊತ್ತಿಗೆ ಆತನಿಗೆ ಆರೋಗ್ಯ ಕೈಕೊಟ್ಟಾಗ ನಕ್ಸಲ್ ಪಡೆಯ ಸಾರಥ್ಯ ವಹಿಸಿಕೊಂಡವನೇ ನಂಬಳ ಕೇಶವ ರಾವ್. ಅಲ್ಲಿಂದೀಚೆಗೆ ಈತನೇ ನಕ್ಸಲ್ ಚಳವಳಿಯ ಜೀವಾಳವಾಗಿದ್ದ.

ನಾರಾಯಣಪುರ ವಲಯದಲ್ಲಿ ಮಾವೋವಾದಿ ನಕ್ಸಲರ ಕೇಂದ್ರೀಯ ಸಮಿತಿ ಬೀಡುಬಿಟ್ಟಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಏಕಾಏಕಿ ದಾಳಿ ನಡೆಸಿ ಬಸವರಾಜ್ ನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.

ನಕ್ಸಲ್ ಚಳವಳಿಗೆ ಅಂತ್ಯ ಹಾಡುವಲ್ಲಿ ದೊರೆತ ಬಹುದೊಡ್ಡ ಯಶಸ್ಸು ಇದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ಬಸವರಾಜ್ ಹತ್ಯೆಯನ್ನು ಖಚಿತಪಡಿಸಿದ್ದಾರೆ.

ಮೇಷ್ಟರ ಮಗ: ಬಸವರಾಜು ಹುಟ್ಟಿದ್ದು 1955ರಲ್ಲಿ. ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಜಿಯ್ಯನಪೇಟ ಎಂಬ ಹಳ್ಳಿಯಲ್ಲಿ. ಈತ ಶಿಕ್ಷಕರೊಬ್ಬರ ಮಗ. ಜಿಯ್ಯನಪೇಟದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಬಸವರಾಜ್ ಅಜ್ಜನ ಊರಾದ ತಲಗಂನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದ. ಬಳಿಕ ತೆಕ್ಕಾಲಿ ಜೂನಿಯರ್ ಕಾಲೇಜಿನಲ್ಲಿ ಇಂಟರ್-ಮೀಡಿಯಟ್ ಅಧ್ಯಯನ ಕೈಗೊಂಡ.

ತನ್ನ ಪದವಿಪೂರ್ವ ಕಾಲೇಜು ಶಿಕ್ಷಣದ ಎರಡನೇ ವರ್ಷದಲ್ಲಿ ಬಸವರಾಜ್ ವಾರಂಗಲ್ ನಲ್ಲಿರುವ ರೀಜನಲ್ ಎಂಜಿನಿಯರಿಂಗ್ ಕಾಲೇಜ್ ಗೆ ಪ್ರವೇಶ ಪಡೆದ. ಆಗಲೇ ಈತ ಶಾಮೀಲಾಗಿದ್ದು ತೀವ್ರಗಾಮಿ ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಯಲ್ಲಿ. ಅದು ಕುಖ್ಯಾತ ನಕ್ಸಲ್ ನಾಯಕ ಕೊಂಡಪಲ್ಲಿ ಸೀತಾರಾಮಯ್ಯ ಸ್ಥಾಪಿಸಿದ ಸಿಪಿಐ ಪೀಪಲ್ಸ್ ವಾರ್ ನ ವಿದ್ಯಾರ್ಥಿ ಸಂಘಟನೆ.

ಅಷ್ಟಾಗಿಯೂ, 1984 ರವರೆಗೂ ಸಿಪಿಐ (ಎಂ-ಎಲ್) ಪೀಪಲ್ಸ್ ವಾರ್ ಜೊತೆಗೆ ಬಸವರಾಜ್ ಸಂಪೂರ್ಣವಾಗಿ ತೊಡಗಿಸಿಕೊಂಡಿರಲಿಲ್ಲ. ಆ ಬಳಿಕ ತನ್ನ ಎಂ.ಟೆಕ್ ಕೋರ್ಸ್ ತೊರೆದು, ಚಳುವಳಿಗೆ ಸಂಪೂರ್ಣವಾಗಿ ಧುಮುಕಿದ ಎಂದು ಭದ್ರತಾ ಪಡೆಯ ಉನ್ನತ ಮೂಲಗಳು ತಿಳಿಸುತ್ತವೆ.

ಬಸವರಾಜ್, ಗಗನ್, ಪ್ರಕಾಶ್, ಕೃಷ್ಣ, ವಿಜಯ, ಕೇಶವ, ರಾಜು, ಉಮೇಶ ಹೀಗೇ ತರಾವರಿ ಹೆಸರುಗಳಿಂದ ಖ್ಯಾತನಾಗಿದ್ದ ತಂಬಳ ಕೇಶವ ರಾವ್ ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ಸಿದ್ಧಹಸ್ತನಾಗಿದ್ದ. ದಾಳಿಯ ಯೋಜನೆಗಳನ್ನು ರೂಪಿಸುವುದು, ಶಸ್ತ್ರಾಸ್ತ್ರಗಳ ಸರಬರಾಜುದಾರರ ಜೊತೆ ನಂಟು ಸಾಧಿಸುವುದು, ಮಾವೋ ಕಾರ್ಯತಂತ್ರಗಳನ್ನು ರೂಪಿಸುವುದರಲ್ಲಿ ಬಸವರಾಜ್ ಯಾವತ್ತೂ ಮುಂಚೂಣಿಯಲ್ಲಿ ಇರುತ್ತಿದ್ದ.

1987ರಲ್ಲಿ ಗಣಪತಿ ಮತ್ತು ಕೃಷ್ಣಜೀ ಮುಂತಾದ ಹಿರಿಯ ನಕ್ಸಲ್ ನಾಯಕರ ಜೊತೆ ಕೂಡಿಕೊಂಡ ಈತ ಛತ್ತೀಸಗಢದ ಬಸ್ತರ್ ವಲಯದಲ್ಲಿ ಅನೇಕ ಗೆರಿಲ್ಲಾ ಕದನಗಳಲ್ಲಿ ಶಾಮೀಲಾದ. ಸಿಪಿಐ (ಮಾರ್ಕ್ಸ್ ವಾದಿ/ಲೆನಿನ್ ವಾದಿ)ನ ಸಹಸಂಸ್ಥಾಪಕನಾಗಿದ್ದ ಬಸವರಾಜ್ ಕ್ರಮೇಣ ಪಾರ್ಟಿ ಕೇಡರ್ ನಲ್ಲಿ ಬೆಳೆಯುತ್ತ ಹೋದ. ಆ ಬಳಿಕ ಸೆಂಟ್ರಲ್ ಕಮಿಟಿಯ ಸದಸ್ಯನಾದ.

2004ರಲ್ಲಿ ನಡೆದ ವಿಲೀನದಲ್ಲಿ ರಚನೆಯಾಗಿದ್ದು ಸಿಪಿಐ ಮಾವೋವಾದಿ ಪಡೆ. ಆಗ ಈತನಿಗೆ ಸೆಂಟ್ರಲ್ ಮಿಲಿಟರಿ ಕಮಿಷನ್ ಸಾರಥ್ಯ ವಹಿಸಲಾಯಿತು. ನಂತರ ಪಾಲಿಟ್-ಬ್ಯೂರೊ ಸದಸ್ಯತ್ವವೂ ದಕ್ಕಿತು.

2018ರಲ್ಲಿ ಈತ ಗಣಪತಿಯ ಉತ್ತರಾಧಿಕಾರಿಯಾಗಿ ನೇಮಕಗೊಂಡ. ಅಂದರೆ ಸಿಪಿಐ ಮಾವೋವಾದಿ ಗುಂಪಿನ ಪ್ರಧಾನ ಕಾರ್ಯದರ್ಶಿ ಪಟ್ಟ. ಅಲ್ಲಿಂದ ಮುಂದೆ ಈತ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ. ಛತ್ತೀಸಗಢದ ದಂಡಕಾರಣ್ಯ ವಲಯದಲ್ಲಿ ಬಸವರಾಜ್ ಉಗ್ರ ನಕ್ಸಲ್ ನಾಯಕನಾಗಿ ಹೊರಹೊಮ್ಮಿದ.

ರಕ್ತಸಿಕ್ತ ದಾಳಿಗಳು

AK-47 ಅನ್ನು ಸದಾ ಬಗಲಿಗೇರಿಸಿಕೊಂಡು ಅಡ್ಡಾಡುತ್ತಿದ್ದ ಬಸವರಾಜ್ ಗೆರಿಲ್ಲಾ ಕದನವನ್ನು ರೂಪಿಸಿದರೆ ಅದನ್ನು ಕರಾರುವಕ್ಕಾಗಿ ಜಾರಿಗೆ ತರುತ್ತಿದ್ದ. 2010ರಲ್ಲಿ ನಡೆಸಿದ ಚಿಂತಾಲನರ್ ಹತ್ಯಾಕಾಂಡದಲ್ಲಿ 74 ಸಿಆರ್ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದರು ಮತ್ತು 2013ರ ಝೀರಾಮ್ ಘಾಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ನಾಯಕರೂ ಸೇರಿದಂತೆ 27 ಜನ ಸಾವನ್ನಪ್ಪಿದ್ದರು. ಇಂತಹ ಅನೇಕ ರಕ್ತಸಿಕ್ತ ಮಾವೋವಾದಿ ದಾಳಿಗಳನ್ನು ಮುಂಚೂಣಿಯಲ್ಲಿ ನಿಂತು ನಡೆಸಿದ ಕುಖ್ಯಾತಿ ಈತನದ್ದಾಗಿದೆ.

ರಕ್ತಸಿಕ್ತ ದಾಳಿ:

ಈತನ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಅವುಗಳ ಪೈಕಿ ತಿರುಪತಿಯ ಅಲಿಪಿರಿಯಲ್ಲಿ 2003ರಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಮೇಲಿನ ನೆಲಬಾಂಬ್ ದಾಳಿಯೂ ಸೇರಿದೆ. 2008ರ ಅಕ್ಟೋಬರ್ನಲ್ಲಿ ಆಂಧ್ರ-ಒಡಿಶಾ ಗಡಿಯಲ್ಲಿರುವ ಬಾಲಿಮೇಲದಲ್ಲಿ ಗ್ರೇಹೌಂಡ್ಸ್ ಪೊಲೀಸರ ಮೇಲಿನ ದಾಳಿಯ ಹಿಂದಿನ ರೂವಾರಿಯೂ ಈತನೇ ಎಂದು ನಂಬಲಾಗಿದೆ, ಆ ದಾಳಿಯಲ್ಲಿ 37 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು.

2018ರ ಸೆಪ್ಟೆಂಬರ್ 23ರಂದು ಸಂಭವಿಸಿದ ಮಾವೋವಾದಿಗಳ ದಾಳಿಯಲ್ಲಿ ಅರಕು ಟಿಡಿಪಿ ಶಾಸಕ ಕಿದಾರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸಿವೇರಿ ಸೋಮಾ ಹತರಾಗಿದ್ದರು. ಈ ಹತ್ಯೆಯ ಹಿಂದೆಯೂ ಕೇಶವ್ ರಾವ್ ಮಾಸ್ಟರ್ ಮೈಂಡ್ ಕೆಲಸಮಾಡಿತ್ತು ಎಂದು ಹೇಳಲಾಗುತ್ತದೆ. ತನ್ನ ಪೂರ್ವವರ್ತಿ ಗಣಪತಿಗೆ ಹೋಲಿಸಿದರೆ, ಕೇಶವ್ ರಾವ್ ಪಕ್ಷದ ಸಿದ್ಧಾಂತಗಳನ್ನು ಜಾರಿಗೆ ತರುವಲ್ಲಿ ಹೆಚ್ಚು ನಿಷ್ಠುರನಾಗಿದ್ದ.

ಆಕ್ರಮಣಕಾರಿ ಸ್ವಭಾವಕ್ಕೆ ಖ್ಯಾತನಾಗಿದ್ದ ಬಸವರಾಜ್ ಸಶಸ್ತ್ರ ಪ್ರತಿರೋಧದ ಮೂಲಕ ತನ್ನ ಗುರಿಗಳನ್ನು ಸಾಧಿಸುವಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದ. ನಕ್ಸಲ್ ಪಾಳಯದಲ್ಲಿ ಒಬ್ಬ ನುರಿತ ‘ಮಿಲಿಟರಿ ತಂತ್ರಜ್ಞ’ ಎಂದೇ ಹೆಸರುವಾಸಿಯಾಗಿದ್ದ ಟಾಸ್ಕ್ ಮಾಸ್ಟರ್ ಬಸವರಾಜ್ ತಲೆಗೆ 1.5 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ನಾಲ್ಕು ದಶಕಗಳ ಭೂಗತ ಜಗತ್ತು

ಬಸವರಾಜು ಸುಮಾರು ನಾಲ್ಕು ದಶಕಗಳ ಕಾಲ ಭೂಗತನಾಗಿದ್ದ ಎನ್ನಲಾಗಿದೆ. ಯಾವತ್ತು ನಕ್ಸಲ್ ಚಳುವಳಿಯ ಹುಚ್ಚು ಬೆಳೆಸಿಕೊಂಡನೋ ಅಂದಿನಿಂದ ಆತ ಹಿಂದಿರುಗಿ ನೋಡಲೇ ಇಲ್ಲ. 1970ರ ದಶಕದ ಬಳಿಕ ತನ್ನ ಹುಟ್ಟೂರಿನ ಕಡೆಗೆ ಹೆಜ್ಜೆಯೇ ಹಾಕಲಿಲ್ಲ ಎನ್ನುತ್ತಾರೆ ಆತನ ಹುಟ್ಟೂರಿನ ನಿವಾಸಿಗಳು.

ಹಾಗೆ ನೋಡಿದರೆ ಭದ್ರತಾ ಪಡೆಯ ಬಳಿ ಇರುವುದು ಬಸವರಾಜನ ಜಮಾನ ಕಾಲದ ಕಪ್ಪು-ಬಿಳುಪು ಫೋಟೊ ಮಾತ್ರ. ಹೊರಜಗತ್ತಿಗೆ ಆತ ನಿಜಕ್ಕೂ ಹೇಗಿದ್ದ ಎಂಬುದು ನಿಗೂಢವಾಗಿಯೇ ಇತ್ತು. ಅಂದರೆ ಬಸವರಾಜ ತನ್ನ ಸಿದ್ಧಾಂತದ ಬಗ್ಗೆ ಅಷ್ಟು ಕಠಿಣ ನಿಲುವನ್ನು ಹೊಂದಿದ್ದ. ಆತನ ಹುಟ್ಟೂರು ಜಿಯ್ಯನಪೇಟದಲ್ಲಿ ಆತನಿಗೆ ಯಾವುದೇ ಆಸ್ತಿ-ಪಾಸ್ತಿಗಳಿಲ್ಲ ಎನ್ನುತ್ತದೆ ಭದ್ರತಾ ಪಡೆ ಮೂಲ. ಛತ್ತೀಸಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳ ತನಕವೂ ಈತನ ಕಾರ್ಯಾಚರಣೆ ವಿಸ್ತರಿಸಿತ್ತು.

ಐತಿಹಾಸಿಕ ವಿಜಯ

ನಾರಾಯಣಪುರ, ಬಿಜಯಪುರ ಮತ್ತು ದಾಂಟೇವಾಡ ಎನ್ನುವುದು ದಟ್ಟ ಅರಣ್ಯದಿಂದ ಕೂಡಿ ತ್ರಿಶಂಕು ತಾಣ. ಇಲ್ಲಿನ ಅಭುಜ್-ಮದ್ ಎನ್ನುವ ದಟ್ಟಡವಿಯಲ್ಲಿಯೇ ಕಳೆದ ಎಂಟು ವರ್ಷಗಳಿಂದ ಹೋರಾಟ ನಡೆಸುತ್ತಿದ್ದವನು ಬಸವರಾಜ್. ಈ ದಟ್ಟಡವಿಯ ಸುತ್ತ ಕಣ್ಣಿಟ್ಟಿದ್ದ ಭದ್ರತಾ ಪಡೆ ಕೈಗೊಂಡ ಭೀಕರ ಹೋರಾಟದಲ್ಲಿ ಬಸವರಾಜ್ ಸೇರಿದಂತೆ 26 ನಕ್ಸಲರು ಹತರಾಗಿದ್ದಾರೆ. ನಕ್ಸಲ್ ವಿರುದ್ಧ ಈ ಕಾರ್ಯಾಚರಣೆಯನ್ನು ಐತಿಹಾಸಿಕ ವಿಜಯ ಎಂದು ಬಣ್ಣಿಸಲಾಗುತ್ತಿದೆ.

ತನ್ನ ಎಪ್ಪತ್ತರ ವಯಸ್ಸಿನಲ್ಲೂ ಬಸವರಾಜ್ ಅಷ್ಟೇ ತೀವ್ರ ಹೋರಾಟ ಪ್ರವತ್ತಿಯನ್ನು ಬೆಳೆಸಿಕೊಂಡು ಬಂದಿದ್ದ. ಈತನ ಹತ್ಯೆಯೊಂದಿಗೆ ಭದ್ರತಾ ಸಿಬ್ಬಂದಿ ಬಹುದೊಡ್ಡ ಯಶಸ್ಸನ್ನು ಸಾಧಿಸಿದಂತಾಗಿದೆ.

Read More
Next Story