
ರಾಷ್ಟ್ರೀಯ ಶೂಟಿಂಗ್ ಕೋಚ್ ಅಂಕುಶ್ ಭಾರದ್ವಾಜ್ ವಿರುದ್ಧ ಹರಿಯಾಣ ಪೊಲೀಸರು ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ಕೋಚ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
17 ವರ್ಷದ ಕ್ರೀಡಾಪಟುವಿನ ಕುಟುಂಬ ನೀಡಿದ ದೂರಿನ ಮೇರೆಗೆ ಮಂಗಳವಾರ (ಜ.6) ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಪ್ರಾಪ್ತ ರಾಷ್ಟ್ರೀಯ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ರಾಷ್ಟ್ರೀಯ ಶೂಟಿಂಗ್ ಕೋಚ್ ಅಂಕುಶ್ ಭಾರದ್ವಾಜ್ ವಿರುದ್ಧ ಹರಿಯಾಣ ಪೊಲೀಸರು ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
17 ವರ್ಷದ ಕ್ರೀಡಾಪಟುವಿನ ಕುಟುಂಬ ನೀಡಿದ ದೂರಿನ ಮೇರೆಗೆ ಮಂಗಳವಾರ (ಜ.6) ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯ ಸಂದರ್ಭದಲ್ಲಿ, ಫರಿದಾಬಾದ್‌ನ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಕೋಣೆಗೆ ಕರೆಸಿ ದುಷ್ಕೃತ್ಯ
ಎಫ್‌ಐಆರ್ ಪ್ರಕಾರ, ಕ್ರೀಡಾಪಟುವಿನ ಪ್ರದರ್ಶನವನ್ನು ವಿಶ್ಲೇಷಿಸುವ ನೆಪವೊಡ್ಡಿ ಕೋಚ್ ಭಾರದ್ವಾಜ್, ಆಕೆಯನ್ನು ತಮ್ಮ ಹೋಟೆಲ್ ಕೋಣೆಗೆ ಬರುವಂತೆ ಒತ್ತಾಯಿಸಿದ್ದರು. ಆರಂಭದಲ್ಲಿ ಲಾಬಿಗೆ ಕರೆದಿದ್ದ ಕೋಚ್, ನಂತರ ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ "ನಿನ್ನ ಕ್ರೀಡಾ ಜೀವನವನ್ನೇ ಹಾಳು ಮಾಡುತ್ತೇನೆ ಮತ್ತು ಕುಟುಂಬಕ್ಕೆ ತೊಂದರೆ ಕೊಡುತ್ತೇನೆ" ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನೊಂದ ಬಾಲಕಿ ಹೋಟೆಲ್‌ನಿಂದ ಆಘಾತದ ಸ್ಥಿತಿಯಲ್ಲಿ ಹೊರಬಂದು, ನಂತರ ಕುಟುಂಬಕ್ಕೆ ವಿಷಯ ತಿಳಿಸಿದ್ದಾಳೆ. ಮತ್ತೊಬ್ಬ ಮಹಿಳಾ ಶೂಟರ್ ಕೂಡ ಇದೇ ಕೋಚ್‌ನಿಂದ ಇಂತಹದ್ದೇ ಅನುಭವ ಎದುರಿಸಿದ್ದರು ಎಂದು ಬಾಲಕಿ ಆರೋಪಿಸಿದ್ದಾಳೆ ಎನ್ನಲಾಗಿದೆ.
ಕೋಚ್ ಅಮಾನತು
ಘಟನೆ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ (NRAI), ಅಂಕುಶ್ ಭಾರದ್ವಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. "ಮಾಧ್ಯಮ ವರದಿಗಳ ಮೂಲಕ ನಮಗೆ ವಿಷಯ ತಿಳಿಯಿತು. ತನಿಖೆ ಪೂರ್ಣಗೊಳ್ಳುವವರೆಗೆ ಅವರಿಗೆ ಯಾವುದೇ ಜವಾಬ್ದಾರಿ ನೀಡುವುದಿಲ್ಲ," ಎಂದು ಎನ್‌ಆರ್‌ಎಐ ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಫರಿದಾಬಾದ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಕ್ಷ್ಯ ಸಂಗ್ರಹಕ್ಕಾಗಿ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

