
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ
National Herald Case | ಸೋನಿಯಾ, ರಾಹುಲ್ ಗಾಂಧಿಗೆ ದೆಹಲಿ ಕೋರ್ಟ್ ನೋಟಿಸ್
ಕಾಯ್ದೆಯಲ್ಲಿನ ಹೊಸ ಅವಕಾಶಗಳ ಪ್ರಕಾರ, ಆರೋಪಿಗಳ ಹೇಳಿಕೆಯನ್ನು ಪಡೆಯದೆ ಅವರ ವಿರುದ್ಧದ ಆರೋಪ ಪಟ್ಟಿಯನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ನ್ಯಾಯಾಧೀಶರು ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಕಳೆದ 25ರಂದು ನೋಟಿಸ್ ನೀಡಲು ನಿರಾಕರಿಸಿದ್ದ ದೆಹಲಿ ನ್ಯಾಯಾಲಯವು, ಇನ್ನಷ್ಟು ಸೂಕ್ತ ದಾಖಲಾತಿ ಒದಗಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತ್ತು. ಈ ಪ್ರಕರಣವನ್ನುದೀರ್ಘಕಾಲದವರೆಗೆ ಮುಂದುವರಿಸಲು ನ್ಯಾಯಾಲಯ ಬಯಸುವುದಿಲ್ಲ ಎಂದು ಹೇಳಿ, ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತ್ತು.
"ಯಾವುದೇ ಹಂತದಲ್ಲಿ ವಿಚಾರಣೆ ನಡೆಸುವ ಹಕ್ಕು ನ್ಯಾಯಯುತ ವಿಚಾರಣೆಗಳಿಗೆ ಜೀವ ತುಂಬುತ್ತದೆ" ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದ್ದಾರೆ.
ಏನಿದು ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಅವರು ತಲಾ ಶೇ.38 ರಷ್ಟು ಷೇರುಗಳನ್ನು ಹೊಂದಿದ್ದರು. 2012 ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಹಾಗೂ ಸೋನಿಯಾ ಗಾಂಧಿ ವಿರುದ್ಧ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್)ನ ಸಾಲವನ್ನು ಕಾಂಗ್ರೆಸ್ ಪಕ್ಷದ ಹಣದಿಂದ ಖರೀದಿಸಲು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್(ವೈಐಎಲ್) ಸ್ಥಾಪಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಇಡಿ ಆರೋಪವೇನು ?
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ್ನು 2,000 ಕೋಟಿ ಮೌಲ್ಯದ ಆಸ್ತಿಗಳನ್ನು ಕೇವಲ 50 ಲಕ್ಷ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿರುವುದು ಕಾನೂನು ಬಾಹಿರ ಎಂದು ಆರೋಪಿಸಿದೆ. ಈ ಆಸ್ತಿಗಳಲ್ಲಿ ದೆಹಲಿಯ ಬಹದ್ದೂರ್ ಷಾ ಜಫ್ದರ್ ಮಾರ್ಗದಲ್ಲಿರುವ ಹೆರಾಲ್ಡ್ ಹೌಸ್, ಲಕ್ನೋದ ನೆಹರೂ ಭವನ ಹಾಗೂ ಮುಂಬೈನ ವಾಣಿಜ್ಯ ಕಟ್ಟಡಗಳು ಸೇರಿವೆ. ಇಡಿಯ ಪ್ರಕಾರ ಈ ಆಸ್ತಿಗಳನ್ನು ವಾಣಿಜ್ಯ ಲಾಭಕ್ಕಾಗಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಚಾರ್ಜ್‌ಶೀಟ್ ವಿವರಗಳು
ಚಾರ್ಜ್‌ಶೀಟ್‌ನಲ್ಲಿ ಇ.ಡಿ.ಯು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ, ದಿವಂಗತ ಮೋತಿಲಾಲ್ ವೋರಾ ಹಾಗೂ ದಿವಂಗತ ಆಸ್ಕರ್ ಫರ್ನಾಂಡಿಸ್ ಸೇರಿ ಹಲವರು ವೈಐಎಲ್‌ನಿಂದ ಎಜಿಎಲ್ ಆಸ್ತಿಗಳನ್ನು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದೆ. ಎಜೆಎಂಎಲ್‌ನಿಂದ 988 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಪಿಎಮ್‌ಎಲ್‌ಎ 2002ರ ಸೆಕ್ಷನ್ 3,44,45, ಮತ್ತು 70 ರ ಅಡಿಯಲ್ಲಿ ಅಪರಾಧ ಎಂದು ಚಾರ್ಜ್ ಶಿಟ್‌ನಲ್ಲಿ ದೂರಿದೆ.