
ಕ್ರ್ಯೂ-10 ನೌಕೆ ಬಾಹ್ಯಾಕಾಶ ನಿಲ್ದಾಣ ತಲುಪಿರುವುದು.
ಬಾಹ್ಯಾಕಾಶ ನಿಲ್ದಾಣ ತಲುಪಿದ ನಾಸಾದ ಕ್ರ್ಯೂ-10; ಗಗನಯಾತ್ರಿಗಳನ್ನು ಸ್ವಾಗತಿಸಿದ ಸುನೀತಾ. ಬುಚ್ ವಿಲ್ಮೋರ್
ಕ್ರ್ಯೂ-10 ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳು ಪ್ರಯಾಣಿಸಿದ್ದು, ಇವರು ಕೆಲವು ದಿನಗಳ ಕಾಲ ಐಎಸ್ಎಸ್ನಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯು ಉಡಾವಣೆ ಮಾಡಿದ ಡ್ರ್ಯಾಗನ್ ಬಾಹ್ಯಾಕಾಶ ನೌಕೆ (ಕ್ರ್ಯೂ-10) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ಗೆ ಯಶಸ್ವಿಯಾಗಿ ತಲುಪಿದೆ. ಭಾರತೀಯ ಸಮಯದ ಪ್ರಕಾರ ಭಾನುವಾರ ಬೆಳಗ್ಗೆ 9:34 ಗಂಟೆಗೆ ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ಟಾರ್ಲೈನರ್ ಕ್ಯಾಪ್ಸೂಲ್ನ ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ 9 ತಿಂಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಈ ನೌಕೆ ಮರಳಿ ಭೂಮಿಗೆ ಕರೆತರಲಿದೆ.
ಕ್ರ್ಯೂ-10 ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳು ಪ್ರಯಾಣಿಸಿದ್ದು, ಇವರು ಕೆಲವು ದಿನಗಳ ಕಾಲ ಐಎಸ್ಎಸ್ನಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಬಾಹ್ಯಾಕಾಶ ನಿಲ್ದಾಣ ತಲುಪಿದ ನಂತರ, ಅಲ್ಲಿದ್ದ ಸುನೀತಾ ವಿಲಿಯಮ್ಸ್ ಮತ್ತು ಇತರ ಗಗನಯಾತ್ರಿಗಳು ಅವರನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ.
ನಾಸಾದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ ಎಕ್ಸ್ನ ಫಾಲ್ಕನ್ 9 ರಾಕೆಟ್ ನಾಲ್ಕು ಗಗನಯಾತ್ರಿಗಳನ್ನು ಹೊತ್ತು ಶುಕ್ರವಾರ ರಾತ್ರಿ ಆಕಾಶಕ್ಕೆ ಚಿಮ್ಮಿತು. ಮಾರ್ಚ್ 16ರ ಬೆಳಗ್ಗೆ 9:35 ಗಂಟೆಗೆ ಐಎಸ್ಎಸ್ನಲ್ಲಿ ಯಶಸ್ವಿಯಾಗಿ ಇಳಿದ ನಂತರ, ನೌಕೆಯ ಸಾಮರ್ಥ್ವವನ್ನು ಪರೀಕ್ಷೆ ಮಾಡಲಾಗಿದೆ. ಭಾರತೀಯ ಸಮಯದ ಪ್ರಕಾರ ಬೆಳಗ್ಗೆ 11:05 ಗಂಟೆಗೆ ನೌಕೆಯ ಬಾಗಿಲನ್ನು ತೆರೆಯಲಾಯಿತು. ನಂತರ ಹೊಸ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿ, ಸುನೀತಾ ವಿಲಿಯಮ್ಸ್, ವಿಲ್ಮೋರ್ ಮತ್ತು ಎಕ್ಸ್ಪೆಡಿಷನ್ 72 ತಂಡದ ಇತರ ಸದಸ್ಯರನ್ನು ಭೇಟಿಯಾದರು.
ಸ್ಪೇಸ್ ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿ ನಾಲ್ವರು ಗಗನಯಾತ್ರಿಗಳು ಪ್ರಯಾಣಿಸಿದ್ದಾರೆ. ರಷ್ಯಾದ ರೋಸ್ಕೋಸ್ಮೋಸ್ನ ಮಿಷನ್ ಸ್ಪೆಷಲಿಸ್ಟ್ ಕಿರಿಲ್ ಪೆಸ್ಕೊವ್, ಅಮೆರಿಕದ ಪೈಲಟ್ ನಿಕೋಲ್ ಅಯರ್ಸ್, ಕಮಾಂಡರ್ ಅನ್ನೆ ಮೆಕ್ಲೈನ್ ಮತ್ತು ಜಪಾನ್ ಜಾಕ್ಸಾದ ಮಿಷನ್ ಸ್ಪೆಷಲಿಸ್ಟ್ ಟಕುಯಾ ಒನಿಶಿ ಈ ಗಗನ ಯಾತ್ರಿಗಳು.
ಈಗ ಐಎಸ್ಎಸ್ ತಲುಪಿದ ಅಮೆರಿಕ, ರಷ್ಯಾ ಮತ್ತು ಜಪಾನ್ನ ನಾಲ್ವರು ಗಗನಯಾತ್ರಿಗಳು ಮುಂದಿನ ಕೆಲವು ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದು ಕಾರ್ಯಾಚರಣೆಗಳನ್ನು ಕಲಿಯಲಿದ್ದಾರೆ. ನಂತರ ಅವರನ್ನು ಭೂಮಿಗೆ ಮರಳಬಹುದು.
ಕ್ರ್ಯೂ-10 ತಂಡವು ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಸೇರಿಸಿದರೆ, ಐಎಸ್ಎಸ್ನಲ್ಲಿ ಈಗ ಒಟ್ಟು ಗಗನಯಾತ್ರಿಗಳ ಸಂಖ್ಯೆ 11 ಆಗಿದೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಯಾವಾಗ ಭೂಮಿಗೆ ಮರಳುತ್ತಾರೆ?
9 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಬುಧವಾರ ಮುಂಜಾನೆ 4 ಗಂಟೆಗೆ (ಭಾರತೀಯ ಸಮಯದ ಪ್ರಕಾರ ಮಧ್ಯಾಹ್ನ 1:30 ಗಂಟೆಗೆ) ಐಎಸ್ಎಸ್ನಿಂದ ಹೊರಡಲಿದ್ದಾರೆ. ಅವರೊಂದಿಗೆ ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಕೂಡ ಕ್ರ್ಯೂ ಡ್ರ್ಯಾಗನ್ ನೌಕೆಯಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿದೆ.