ಪ್ರಧಾನಿ ಮೋದಿ ಅಧಿಕಾರ ಸ್ವೀಕಾರ | ಕಿಸಾನ್ ನಿಧಿ ಬಿಡುಗಡೆಗೆ ಮೊದಲ ಸಹಿ
ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿ, ನೂತನ ಸರ್ಕಾರಕ್ಕೆ ಚಾಲನೆ ನೀಡಿದರು.
ಭಾನುವಾರ (ಜೂನ್ 9) ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಕಿಸಾನ್ ನಿಧಿ ಬಿಡುಗಡೆಗೆ ಸಹಿ ಹಾಕಿದ್ದಾರೆ. ಅವರು ಭಾನುವಾರ ಸಂಜೆ 30 ಕ್ಯಾಬಿನೆಟ್ ಸಚಿವರು, 5 ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರ ಜತೆ ಪ್ರಮಾಣ ವಚನ ಸ್ವೀಕರಿಸಿದ್ದರು.
ಸೋಮವಾರ (ಜೂನ್ 10) ಸಂಜೆ 5 ಗಂಟೆಗೆ ಅವರು ತಮ್ಮ ನೂತನ ಸಚಿವ ಸಂಪುಟದ ಸಭೆಯನ್ನು ನಡೆಸುವ ನಿರೀಕ್ಷೆಯಿದೆ.
ಪ್ರಮಾಣ ವಚನ
ಭಾನುವಾರ ಸಂಜೆ, ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸಲು ರಾಷ್ಟ್ರಪತಿ ಭವನದ ಎದುರು ಸಾರ್ವಜನಿಕರು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಕೆಲವು ಚಲನಚಿತ್ರ ತಾರೆಯರು ಸೇರಿದಂತೆ ಸುಮಾರು 8,000 ಪ್ರೇಕ್ಷಕರು ಸೇರಿದ್ದರು. ನಂತರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣ ಕೂಟವನ್ನು ಏರ್ಪಡಿಸಿದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡ ಸಂಜೆ ನೂತನ ಸಚಿವ ಸಂಪುಟಕ್ಕೆ ಔತಣಕೂಟ ಏರ್ಪಡಿಸಿದ್ದರು.