
ಹೈದರಾಬಾದ್‌ನ ನಾಂಪಲ್ಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನಾಂಪಲ್ಲಿ ಅಗ್ನಿ ದುರಂತ| ನೆಲಮಾಳಿಗೆಯಲ್ಲಿ ಇಬ್ಬರು ಮಕ್ಕಳು ಸೇರಿ ಐವರು ನಾಪತ್ತೆ
ನೆಲಮಾಳಿಗೆಯಲ್ಲಿ ವಾಸವಿದ್ದ ಕಾವಲುಗಾರ ಮತ್ತು ಕಾರ್ಮಿಕರ ಕುಟುಂಬದ ಸದಸ್ಯರಾದ ಬೇಬಿ (44), ಸೈಯದ್ ಹಬೀಬ್ (40), ಇಮ್ತಿಯಾಜ್ (26) ಹಾಗೂ 11 ಮತ್ತು 7 ವರ್ಷದ ಇಬ್ಬರು ಬಾಲಕರು ಕಟ್ಟಡದೊಳಗೆ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ.
ಹೈದರಾಬಾದ್‌ನ ನಾಂಪಲ್ಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಅಂತಸ್ತಿನ ಪೀಠೋಪಕರಣಗಳ ಮಳಿಗೆಯ ನೆಲಮಾಳಿಗೆಯಲ್ಲಿ ಸಿಲುಕಿರುವ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ರಕ್ಷಿಸಲು ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದೆ.
ಶನಿವಾರ ಸಂಜೆ ಸುಮಾರು 5 ಗಂಟೆಗೆ 'ಬಾಚಾ ಫರ್ನಿಚರ್' ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಮತ್ತು ಹೈದರಾಬಾದ್ ವಿಪತ್ತು ನಿರ್ವಹಣಾ ಪಡೆ (ಹೈಡ್ರಾ) ಜಂಟಿಯಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಈ ಕುರಿತು ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ , ಸ್ಥಳೀಯ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ತಿಳಿಸಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದರೂ ಸಹ, ಕಟ್ಟಡದಿಂದ ಹೊರಬರುತ್ತಿರುವ ದಟ್ಟವಾದ ಹೊಗೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ನೆಲಮಾಳಿಗೆಯಲ್ಲಿ ವಾಸವಿದ್ದ ವಾಚ್‌ಮ್ಯಾನ್ ಮತ್ತು ಕಾರ್ಮಿಕರ ಕುಟುಂಬದ ಸದಸ್ಯರಾದ ಬೇಬಿ (44), ಸೈಯದ್ ಹಬೀಬ್ (40), ಇಮ್ತಿಯಾಜ್ (26) ಹಾಗೂ 11 ಮತ್ತು 7 ವರ್ಷದ ಇಬ್ಬರು ಬಾಲಕರು ಕಟ್ಟಡದೊಳಗೆ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ.
ಸಿಲುಕಿರುವವರನ್ನು ಪತ್ತೆಹಚ್ಚಲು ಹೈಡ್ರಾಲಿಕ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅಗ್ನಿಶಾಮಕ ವಾಹನಗಳ ಜೊತೆಗೆ ಅತ್ಯಾಧುನಿಕ ರೋಬೋಟಿಕ್ ವ್ಯೂಫೈಂಡರ್ ಸಾಧನಗಳನ್ನು ಬಳಸಲಾಗುತ್ತಿದೆ. ಆದರೆ ದಟ್ಟ ಹೊಗೆಯ ಕಾರಣದಿಂದಾಗಿ ಈವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ, ನಾಪತ್ತೆಯಾದವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. "ನಮ್ಮ ಮಕ್ಕಳ ಪರಿಸ್ಥಿತಿ ಏನಾಗಿದೆ ಎಂಬುದು ತಿಳಿಯುತ್ತಿಲ್ಲ. ನಿನ್ನೆಯಿಂದ ಕಾತರದಿಂದ ಕಾಯುತ್ತಿದ್ದೇವೆ, ಆದರೆ ಅಧಿಕಾರಿಗಳಿಂದ ಈವರೆಗೂ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ" ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಸದ್ಯ ರಕ್ಷಣಾ ತಂಡಗಳು ಕಟ್ಟಡದೊಳಗೆ ಪ್ರವೇಶಿಸಲು ಹರಸಾಹಸ ಪಡುತ್ತಿದ್ದು, ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

