ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಎಸ್‌ಪಿ ನಾಯಕನ ಹೇಳಿಕೆಯಿಂದ ವಿವಾದ
ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದ್ದು, ಶೀಘ್ರವೇ ಬಿಜೆಪಿ ಆಡಳಿತ ಕೊನೆಗೊಳ್ಳಲಿದೆ ಎಂಬ ಸಮಾಜವಾದಿ ಪಕ್ಷದ ಶಾಸಕನ ಹೇಳಿಕೆ ಉತ್ತರ ಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಬಿಜ್ನೋರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಸಚಿವ ಮತ್ತು ಅಮ್ರೋಹಾ ಶಾಸಕ ಮೆಹಬೂಬ್ ಅಲಿ ಈ ಹೇಳಿಕೆ ನೀಡಿದ್ದಾರೆ. ʻನಿಮ್ಮ ಆಳ್ವಿಕೆ ಕೊನೆಗೊಳ್ಳುತ್ತದೆ. ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಮೊಘಲರು 850 ವರ್ಷ ಕಾಲ ಆಳಿದರು, ಅವರಿಗೆ ಸಾಧ್ಯವಾಗಲಿಲ್ಲ. ದೇಶವನ್ನು ಸುಡುವವರು ಜನ ಎಚ್ಚೆತ್ತುಕೊಂಡಿದ್ದಾರೆ ಎಂಬುದನ್ನು ಗಮನಿಸಬೇಕು. ಜನ ಸಂಸತ್ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. 2027 ರ ಚುನಾವಣೆಯಲ್ಲಿ ನೀವು ಖಂಡಿತವಾಗಿಯೂ ಹೋಗುತ್ತೀರಿ ಮತ್ತು ನಾವು ಅಧಿಕಾರಕ್ಕೆ ಬರುತ್ತೇವೆ,ʼ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 2027ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಬಿಜೆಪಿ ಪ್ರತಿಕ್ರಿಯೆ: ಎಸ್‌ಪಿ ಶಾಸಕರ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮಾಜಿ ಸಂಸದ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬ್ರತ್ ಪಾಠಕ್, ʻಹೇಳಿಕೆಗೆ ಸಮಾಜವಾದಿ ಪಕ್ಷ ಉತ್ತರಿಸಬೇಕಿದೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಿಂದೂಗಳನ್ನು ವಿಭಜಿಸುವಲ್ಲಿ ನಿರತರಾಗಿರುವುದು ಇದಕ್ಕಾಗಿಯೇ? ದೇಶ ಬದಲಾಗಿದೆ ಎಂಬುದನ್ನು ಅಖಿಲೇಶ್ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹಿಂದೂಗಳು ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಮಾಡಿದ್ದಾರೆ,ʼ ಎಂಉದ ಹೇಳಿದರು.
ತಳ್ಳಿಹಾಕಿದ ಎಸ್ಪಿ: ಮೆಹಬೂಬ್ ಅಲಿ ಅವರ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ ಎಂದು ಎಸ್ಪಿ ನಾಯಕ ಸುನೀಲ್ ಸಾಜನ್ ಹೇಳಿದ್ದಾರೆ. ʻಆದರೆ, ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗ ಹೆಚ್ಚಾಗಿದೆ, ಬಿಜೆಪಿಯ ಭ್ರಷ್ಟಾಚಾರ ಹೆಚ್ಚಾಗಿದೆ, ಅವರ ಸುಳ್ಳು ಹೆಚ್ಚಾಗಿದೆ, ದ್ವೇಷದ ರಾಜಕೀಯ ಹೆಚ್ಚಾಗಿದೆ. ಗಡಿಗಳು ಸುರಕ್ಷಿತವಾಗಿಲ್ಲ, ರಾಜ್ಯಗಳು ಉರಿಯುತ್ತಿವೆ ಮತ್ತು ಪ್ರಧಾನಿ ಮೌನವಾಗಿದ್ದಾರೆ. ಹೀಗಾಗಿ, ಬಿಜೆಪಿಯ ಸೋಲನ್ನು ಹೆಚ್ಚಿನ ಜನಸಂಖ್ಯೆ ಬಯಸಿದೆ. ಹೀಗಾಗಿ ಬಿಜೆಪಿ ಹೆಚ್ಚು ದಿನ ಇರುವುದಿಲ್ಲ,ʼ ಎಂದು ಹೇಳಿದ್ದಾರೆ.