Mumbai Boat Accident | ಗೇಟ್‌ ವೇ ಆಫ್ ಇಂಡಿಯಾ ಬಳಿ ಹಡಗು ಮಗುಚಿ 13 ಜನ ಸಾವು
x
ಅಪಘಾತದ ನಂತರ ಪ್ರಯಾಣಿಕರನ್ನು ನೀರಿನಿಂದ ರಕ್ಷಿಸಲಾಗಿದೆ

Mumbai Boat Accident | ಗೇಟ್‌ ವೇ ಆಫ್ ಇಂಡಿಯಾ ಬಳಿ ಹಡಗು ಮಗುಚಿ 13 ಜನ ಸಾವು

ಬುಧವಾರ ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಸ್ಪೀಡ್‌ ಬೋಟ್‌ ಪ್ರವಾಸಿ ಲಾಂಚ್‌ಗೆ ಡಿಕ್ಕಿ ಹೊಡೆದು 13 ಮಂದಿ ಸಾವನ್ನಪ್ಪಿದ್ದಾರೆ.


Click the Play button to hear this message in audio format

ಮಹಾರಾಷ್ಟ್ರದ ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ಗುಹೆಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಲಾಂಚ್‌ ಒಂದಕ್ಕೆ ನೌಕಾ ಪಡೆಯ ಸ್ಪೀಡ್‌ ಬೋಟ್‌ ಡಿಕ್ಕಿ ಹೊಡೆದು ನೌಕಾಪಡೆಯ ಮೂವರು ಸಿಬ್ಬಂದಿ ಸೇರಿ 13 ಮಂದಿ ಮೃತಪಟ್ಟಿದ್ದು, 101 ಮಂದಿ ಗಾಯಗೊಂಡಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

ದುರಂತ ನಡೆದಿದ್ದು ಹೇಗೆ?

ಇಂಜಿನ್ ದೋಷದಿಂದ ನಿಯಂತ್ರಣ ಕಳೆದುಕೊಂಡ ನೌಕಾಪಡೆಯ ಸ್ಪೀಡ್ ಬೋಟ್‌ 110 ಜನರನ್ನು ಹೊತ್ತೊಯ್ಯುತ್ತಿದ್ದ ಲಾಂಚ್‌ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ದೋಣಿ ಮಗುಚಿ ಬಿದ್ದು, ಹದಿಮೂರು ಪ್ರಯಾಣಿಕರು ಬುಧವಾರ (ಡಿ.18) ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ 10 ನಾಗರಿಕರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಗ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಬೃಹತ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. 11 ನೌಕಾಪಡೆಯ ದೋಣಿಗಳು, ಕರಾವಳಿ ಕಾವಲು ಪಡೆಯ ಮೂರು ದೋಣಿಗಳು ಮತ್ತು ಕೋಸ್ಟ್ ಗಾರ್ಡ್ ಬೋಟ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ನಾಲ್ಕು ಹೆಲಿಕಾಪ್ಟರ್‌ಗಳನ್ನು ಹಾಗೂ ಪೊಲೀಸ್ ಸಿಬ್ಬಂದಿ, ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಮತ್ತು ಸ್ಥಳೀಯ ಮೀನುಗಾರರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿದ್ದ ಮೀನುಗಾರಿಕಾ ದೋಣಿ ಮತ್ತು ಟೂರಿಸ್ಟ್ ಲಾಂಚ್‌ಗಳು ಸಹ ಬದುಕುಳಿದವರನ್ನು ರಕ್ಷಿಸಲು ಸಹಾಯ ಮಾಡಿದೆ.

ಮುಂಜಾಗ್ರತಾ ಲೋಪ

ತುರ್ತು ಸುರಕ್ಷತಾ ಕ್ರಮಗಳು ಹಾಗೂ ಅವಘಡ ಸಂಭವಿಸಿದ ತಕ್ಷಣ ಜನರನ್ನು ಸ್ಥಳಾಂತರಿಸುವ ವಿಷಯದಲ್ಲಿ ಲೋಪಗಳಾಗಿವೆ. ಅವಘಡ ಸಂಭವಿಸಿದ ವೇಳೆ ಮಾರ್ಗದರ್ಶನ ನೀಡಲು ಸಿಬ್ಬಂದಿಗಳು ವಿಫಲರಾಗಿದ್ದಾರೆ ಎಂದು ಬದುಕುಳಿದ ಕೆಲವರು ಮಾಧ್ಯಮಗಳಿಗೆ ತಿಳಿಸಿದ್ಧಾರೆ. ಕೆಲವು ಪ್ರಯಾಣಿಕರು ಸ್ವಯಂ ಪ್ರೇರಣೆಯಿಂದ, ಲೈಫ್ ಜಾಕೆಟ್‌ಗಳನ್ನು ಹಿಡಿದುಕೊಂಡು ಅವುಗಳನ್ನು ಹಾಕಿಕೊಂಡರೂ ಮುಂದೇನು ಮಾಡಬೇಕೆಂದು ತಿಳಿದಿರಲಿಲ್ಲ. ದೋಣಿ ಡಿಕ್ಕಿಯಾಗಿ ಸಮುದ್ರದ ನೀರು ಲಾಂಚಿನೊಳಗೆ ಬರಲು ಆರಂಭವಾದ ಬಳಿಕ ದೋಣಿಯ ಕ್ಯಾಪ್ಟನ್ ಪ್ರಯಾಣಿಕರಿಗೆ ಲೈಫ್ ಜಾಕೆಟ್ ಧರಿಸಲು ಹೇಳಿದರು ಎಂದು ಬದುಕುಳಿದವರಲ್ಲಿ ಒಬ್ಬರಾದ ನಲವತ್ತೈದು ವರ್ಷದ ಗಣೇಶ್ ಅವರು ತಿಳಿಸಿದರು.

ಬದುಕುಳಿದ ಮತ್ತೊಬ್ಬ ಬೆಂಗಳೂರಿನ ವಿನಾಯಕ್ ಮಟ್ಟಂ, ದೋಣಿಯಲ್ಲಿ ಸಾಕಷ್ಟು ಲೈಫ್ ಜಾಕೆಟ್‌ಗಳಿರಲಿಲ್ಲ. ದೋಣಿ ಹತ್ತುವಾಗ ಪ್ರಯಾಣಿಕರು ಲೈಫ್ ಜಾಕೆಟ್ ಧರಿಸುವಂತೆ ಸಿಬ್ಬಂದಿ ಹೇಳಲೇ ಇಲ್ಲ ಎಂದು ಹೇಳಿದ್ದಾರೆ.

ನೌಕಾಪಡೆಯ ಪಾತ್ರದ ಬಗ್ಗೆ ಪ್ರಶ್ನೆ ಎದ್ದಿದೆ

ಡಿಕ್ಕಿ ಹೊಡೆದ ನೌಕಾಪಡೆಯ ಸ್ಪೀಡ್‌ಬೋಟ್‌ ಸಮುದ್ರದಲ್ಲಿ ಎಂಜಿನ್ ಪರೀಕ್ಷಾ ಪ್ರಯೋಗಗಳನ್ನು ನಡೆಸುತ್ತಿತ್ತು ಎಂದು ವರದಿಯಾಗಿದೆ. ಲಾಂಚ್‌ನಲ್ಲಿದ್ದ ಕೆಲವು ಪ್ರಯಾಣಿಕರು ಮಾಡಿದ ವೀಡಿಯೋ ರೆಕಾರ್ಡಿಂಗ್‌ಗಳಲ್ಲಿ ನೌಕಾಪಡೆಯ ಸ್ಫೀಡ್‌ ಬೋಟ್‌ ಬಲಭಾಗದಿಂದ ಲಾಂಚನ್ನು ಹಿಂದಿಕ್ಕಿ, ಮುಂದೆ ಹೋಗಿ, ಯು-ಟರ್ನ್ ತೆಗೆದುಕೊಂಡು ಬಂದು ಡಿಕ್ಕಿ ಹೊಡೆದ ದೃಶ್ಯ ಸೆರೆಯಾಗಿದೆ.

ನೌಕಾಪಡೆಯ ಸ್ವೀಡ್‌ಬೋಟ್‌ಗಳು ಈ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಲಾಂಚ್‌ಗಳ ಹತ್ತಿರ ಅಪಾಯಕಾರಿಯಾಗಿ ಹೋಗುತ್ತವೆ. ನೌಕಾಪಡೆಯ ದೋಣಿಗಳು ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಪ್ರವಾಸಿ ಲಾಂಚ್‌ಗಳಿಗೆ ಅಪಾಯ ತಂದೊಡ್ಡುತ್ತವೆ. ಈ ಬಗ್ಗೆ ನೌಕಾಪಡೆಗೆ ಹಲವು ಬಾರಿ ದೂರು ನೀಡಿದ್ದು, ಹತ್ತಿರಕ್ಕೆ ಬರದಂತೆ ಮನವಿ ಮಾಡಿದ್ದಾರೆ. ಆದರೆ ನೌಕಾಪಡೆಯ ಸಿಬ್ಬಂದಿ ಕೆಲವೊಮ್ಮೆ ದೋಣಿಗಳನ್ನು ಪರೀಕ್ಷಿಸಲು ಹತ್ತಿರಕ್ಕೆ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ ಎಂದು ಗೇಟ್‌ ವೇಯಲ್ಲಿ ಲಾಂಚ್‌ಗಳಲ್ಲಿ ಕೆಲಸ ಮಾಡುವ ಸುಭಾಷ್ ಮೋರೆ ಆರೋಪಿಸಿದ್ದಾರೆ.

ವಿಚಾರಣಾ ಮಂಡಳಿ

ಈ ಘಟನೆಯ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮತ್ತು ಭಾರತೀಯ ನೌಕಾಪಡೆ ಪ್ರತ್ಯೇಕ ತನಿಖೆಗೆ ಆದೇಶಿಸಿವೆ. ಕೊಲಾಬಾ ಪೊಲೀಸರು ಸ್ಫೀಡ್‌ ಬೋಟ್‌ ಚಾಲಕನ ವಿರುದ್ಧ ವಿವಿಧ ಬಿಎನ್‌ಎಸ್‌ ಸೆಕ್ಷನ್‌ ಅಡಿ ಕೇಸ್‌ ದಾಖಲಿಸಿದ್ದಾರೆ. ಸುರಕ್ಷತಾ ಪ್ರೋಟೋಕಾಲ್‌ಗಳಲ್ಲಿನ ಲೋಪಗಳನ್ನು ಪರಿಹರಿಸಲು ಸ್ಥಳೀಯ ಅಧಿಕಾರಿಗಳು ಮತ್ತು ನೌಕಾಪಡೆಯಿಂದ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಫಡ್ನವೀಸ್ ಸುದ್ದಿಗಾರರಿಗೆ ಭರವಸೆ ನೀಡಿದರು.

ಎಕ್ಸ್-ಗ್ರೇಷಿಯಾ ಪರಿಹಾರ

ಈ ಘಟನೆಯಲ್ಲಿ 13 ಜನರು ಜನ ಸಾವನ್ನಪ್ಪಿದ್ದು, ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ PMNRF ನಿಂದ 2 ಲಕ್ಷ ಪರಿಹಾರವನ್ನು ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

Read More
Next Story