ಐಸ್ ಕ್ರೀಂನಲ್ಲಿ ಬೆರಳು ಪತ್ತೆ
x

ಐಸ್ ಕ್ರೀಂನಲ್ಲಿ ಬೆರಳು ಪತ್ತೆ


ಮುಂಬೈನ ವೈದ್ಯರೊಬ್ಬರು ಆನ್‌ಲೈನ್‌ ಮೂಲಕ ತರಿಸಿದ್ದ ಶಂಕುವಿನಾಕಾರದ ಐಸ್‌ ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದೆ.

ಮುಂಬೈನ ಉಪ ನಗರ ಮಲಾಡ್‌ನ ಓರ್ಲೆಮ್ ಬ್ರಾಂಡನ್ ಸೆರಾವೊ ಅವರು ಮೊಬೈಲ್ ಮೂಲಕ ಯಮ್ಮೋ ಬ್ರ್ಯಾಂಡ್‌ನ ಬಟರ್‌ಸ್ಕಾಚ್ ಐಸ್‌ಕ್ರೀಂ ಕೋನ್‌ ತರಿಸಿಕೊಂಡಿದ್ದರು. ʻಅರ್ಧ ಭಾಗ ತಿಂದ ನಂತರ, ಬಾಯಿಯಲ್ಲಿ ಗಟ್ಟಿಯಾದ ತುಂಡಿನ ಅನುಭವ ಉಂಟಾಯಿತು. ಒಣಗಿದ ಹಣ್ಣು ಅಥವಾ ಚಾಕೊಲೇಟ್ ತುಂಡು ಎಂದು ಭಾವಿಸಿದೆ. ಏನೆಂದು ಪರೀಕ್ಷಿಸಲು, ಹೊರಗೆ ಉಗುಳಿದೆ,ʼ ಎಂದು ಡಾ. ಸೆರಾವೊ ವಿಡಿಯೋದಲ್ಲಿ ತಿಳಿಸಿದ್ದಾರೆ. ಹೊರಬಂದ ವಸ್ತುವನ್ನು ನೋಡಿ ಅವರು ಬೆಚ್ಚಿಬಿದ್ದರು.

ʻನಾನು ವೈದ್ಯ. ದೇಹದ ಭಾಗಗಳು ಹೇಗೆ ಇರುತ್ತವೆ ಎಂದು ನನಗೆ ತಿಳಿದಿದೆ. ಎಚ್ಚರಿಕೆಯಿಂದ ಪರೀಕ್ಷಿಸಿದಾಗ, ಉಗುರು ಮತ್ತು ಬೆರಳಚ್ಚು ಗುರುತು ಗಮನಿಸಿದೆ. ಹೆಬ್ಬೆರಳನ್ನು ಹೋಲುತ್ತಿತ್ತು. ನಾನು ಆಘಾತಕ್ಕೆ ಒಳಗಾಗಿದ್ದೇನೆ,ʼ ಎಂದು ಹೇಳಿದರು.

ಪೊಲೀಸರಿಗೆ ದೂರು: ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಐಸ್‌ಕ್ರೀಮಿನಲ್ಲಿ ಮಾನವನ ಬೆರಳು ಇರುವುದು ಕಾಣುತ್ತದೆ. ಆ ತುಂಡನ್ನು ಐಸ್ ಪ್ಯಾಕಿನಲ್ಲಿಟ್ಟ ಅವರು ಪೊಲೀಸರಿಗೆ ದೂರು ನೀಡಿದರು. ಆಹಾರ ಕಲಬೆರಕೆ ಮತ್ತು ಮಾನವ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಯಮ್ಮೋ ಬ್ರಾಂಡ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

Read More
Next Story