ಮುಂಬೈ BMW ಪ್ರಕರಣ | ಮಹಿಳೆಯನ್ನು1.5 ಕಿಮೀ ಎಳೆದೊಯ್ದ ಕಾರು
x
ಬಂಧಿತ ಚಾಲಕ ಬಿಡಾವತ್

ಮುಂಬೈ BMW ಪ್ರಕರಣ | ಮಹಿಳೆಯನ್ನು1.5 ಕಿಮೀ ಎಳೆದೊಯ್ದ ಕಾರು

ಬಿಎಂಡಬ್ಲ್ಯು ಕಾರಿನ ಚಾಲಕನನ್ನು ಬಂಧಿಸಲಾಗಿದ್ದು, ಮಿಹಿರ್ ಷಾ ಪರಾರಿಯಾಗಿದ್ದಾನೆ; ಅವನ ತಂದೆ ರಾಜೇಶ್ ಶಾ ಅವರನ್ನು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.


ಶ್ರೀಮಂತ ರಾಜಕಾರಣಿ-ಉದ್ಯಮಿಯ ಮಗ ಭಾನುವಾರ (ಜುಲೈ 7)ಬೆಳಗ್ಗೆ ಮುಂಬೈನಲ್ಲಿ ತನ್ನ ಬಿಎಂಡಬ್ಲ್ಯು ಕಾರಿನಡಿ ಮಹಿಳೆಯನ್ನು 1.5 ಕಿಮೀ ಎಳೆದೊಯ್ದಿದ್ದು, ಆನಂತರ ಚಾಲಕ ಆಕೆ ಮೇಲೆ ಮತ್ತೊಮ್ಮೆ ಕಾರ್ ಓಡಿಸಿದ್ದಾನೆ ಎಂದು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಮಿಹಿರ್ ಷಾ(24) ಮತ್ತು ಕಾರ್ ಚಾಲಕ ರಾಜಋಷಿ ರಾಜೇಂದ್ರ ಸಿಂಗ್ ಬಿಡಾವತ್ ಮಾಡಿದ ಅಪರಾಧದ ವಿವರಗಳು ‌ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಹೊರಹೊಮ್ಮಿವೆ.

ಭಯಾನಕ ಸಾವು: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಪ್ರದೀಕ್ ನಕ್ವಾ (50) ಮತ್ತು ಅವರ ಪತ್ನಿ ಕಾವೇರಿ (45) ಎಂಬುವರಿಗೆ ವೇಗವಾಗಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಗುದ್ದಿ ಕೆಳಗೆ ಉರುಳಿಸಿದಾಗ ಈ ಘೋರ ಅಪಘಾತ ಸಂಭವಿಸಿದೆ.

ಕಾರು ಮಹಿಳೆಗೆ ಗುದ್ದಿದೆ ಎಂದು ತಿಳಿದ ನಂತರವೂ ಮಿಹಿರ್ ವಾಹನವನ್ನು ನಿಲ್ಲಿಸಿಲ್ಲ ಎಂದು ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ. ಮಹಿಳೆ ಎಂಜಿನ್ ಮತ್ತು ಬಂಪರ್ ಕೆಳಗೆ ಸಿಲುಕಿಕೊಂಡರು. ಆನಂತರ ಮಿಹಿರ್ ಶವವನ್ನು ತೆಗೆದು, ರಸ್ತೆಯೊಂದರಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

ಚಾಲಕನ ಸಹಕಾರ: ಆನಂತರ ಮಿಹಿರ್‌, ಚಾಲಕನೊಂದಿಗೆ ಸೀಟು ವಿನಿಮಯ ಮಾಡಿಕೊಂಡರು. ಕಾರು ಸಿಸಿಟಿವಿ ನೋಟದಿಂದ ಕಣ್ಮರೆಯಾಗುವ ಮೊದಲು ಚಾಲಕ ಮತ್ತೊಮ್ಮೆ ಮಹಿಳೆ ದೇಹದ ಮೇಲೆ ಕಾರು ಓಡಿಸಿದರು. ಇದರಿಂದಾಗಿಯೇ ಕಾರು ಚಾಲಕನ ಮೇಲೆ ನರಹತ್ಯೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ಚೆನ್ನಾಗಿ ತಿಳಿದಿತ್ತು ಮತ್ತು ಆತ ಆರೋಪಿಗೆ ಸಹಾಯ ಮಾಡಿದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಾಲಕನ ಬಂಧನ: ಚಾಲಕನನ್ನು ಬಂಧಿಸಲಾಗಿದ್ದು, ಮಿಹಿರ್ ಪರಾರಿಯಾಗಿದ್ದಾನೆ. ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಆತನ ತಂದೆ ರಾಜೇಶ್ ಶಾ ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಿಹಿರ್ ಮತ್ತು ಬಿಡಾವತ್ ತಮ್ಮ ಆಸನಗಳನ್ನು ಬದಲಾಯಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸುಹಾಸ್ ಭೋಸಲೆ ಅವರಿಗೆ ತಿಳಿಸಿದರು.ಮಿಹಿರ್ ತನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದಾಗ, ತಪ್ಪಿಸಿಕೊಳ್ಳಲು ಮತ್ತು ಅಪಘಾತದ ಹೊಣೆಗಾರಿಕೆಯನ್ನು ಚಾಲಕನ ಮೇಲೆ ಹೊರಿಸುವಂತೆ ಹೇಳಿದರು.

ಕಾರಿನಲ್ಲಿ ಪರಾರಿ: ಮಿಹಿರ್ ಮತ್ತು ಚಾಲಕ ಬಾಂದ್ರಾಕ್ಕೆ ತೆರಳಿದರು. ಅಲ್ಲಿಂದ ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆ ಪ್ರದೇಶದಿಂದ ಚಾಲಕನನ್ನು ಬಂಧಿಸಿದ್ದಾರೆ. ಮಿಹಿರ್ ತನ್ನ ಗೆಳತಿ ಮನೆಗೆ ಹೋದನೆಂದು ವರದಿಯಾಗಿದೆ. ತಪ್ಪಿಸಿಕೊಳ್ಳುವಿಕೆಯಲ್ಲಿ ಆಕೆಯ ಪಾತ್ರವಿದೆಯೇ ಎಂದು ತಿಳಿದುಕೊಳ್ಳಲು ಪ್ರಶ್ನಿಸಲಾಗಿದೆ.

ಗುದ್ದೋಡು ಅಪಘಾತಕ್ಕೂ ಮುನ್ನ ಮಿಹಿರ್ ಭಾನುವಾರ ಮುಂಜಾನೆ ಜುಹು ಬಾರ್‌ನಲ್ಲಿ ನಾಲ್ವರು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಕಾರಿನಲ್ಲಿ 18,000 ರೂ. ಬಿಲ್ ಪತ್ತೆಯಾಗಿದೆ.

ರಾಜಕೀಯ ಹಿನ್ನೆಲೆ: ಮಿಹಿರ್ ತಂದೆ ರಾಜೇಶ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಬಣಕ್ಕೆ ಸೇರಿದವರು. ʻನಾನು ಮುಖ್ಯಮಂತ್ರಿ ಆಗಿರುವವರೆಗೆ ಶ್ರೀಮಂತರು, ಪ್ರಭಾವಿಗಳು ಅಥವಾ ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿಗಳು ಅಥವಾ ಸಚಿವರ ಮಕ್ಕಳು ಸೇರಿದಂತೆ ಯಾರಿಗೂ ವಿನಾಯಿತಿ ನೀಡುವುದಿಲ್ಲʼ ಎಂದು ಶಿಂಧೆ ಪ್ರತಿಜ್ಞೆ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಗುದ್ದೋಡು ಅಪಘಾತಗಳು ಹೆಚ್ಚುತ್ತಿರುವುದು ಆತಂಕ ತಂದಿದೆ ಎಂದು ಶಿಂಧೆ ಹೇಳಿದ್ದರು.

ʻಬಲಾಢ್ಯರು ಮತ್ತು ಪ್ರಭಾವಿಗಳು ತಮ್ಮ ಸ್ಥಾನಮಾನ ದುರುಪಯೋಗಪಡಿಸಿಕೊಂಡು ವ್ಯವಸ್ಥೆಯನ್ನು ತಿರುಚುವುದನ್ನು ಸಹಿಸಲು ಸಾಧ್ಯ ವಿಲ್ಲ. ಇಂತಹ ವೈಫಲ್ಯಗಳನ್ನು ನನ್ನ ಸರ್ಕಾರ ಸಹಿಸುವುದಿಲ್ಲ,ʼ ಎಂದು ಶಿಂಧೆ ಹೇಳಿದ್ದರು.

ಮಿಹಿರ್‌ ಮೇಲೆ ನರಹತ್ಯೆ, ದುಡುಕಿನ ಚಾಲನೆ, ತಪ್ಪು ಮಾಹಿತಿ ನೀಡುವುದು, ಅಪಾಯಕಾರಿಯಾಗಿ ವಾಹನ ಚಲಾವಣೆ ಮತ್ತು ಗಾಯಾಳು ವನ್ನು ಆಸ್ಪತ್ರೆಗೆ ಕರೆದೊಯ್ಯದಿರುವುದು ಸೇರಿದಂತೆ ಹಲವು ಕ್ರಿಮಿನಲ್ ಸೆಕ್ಷನ್‌ಗಳಡಿ ದೂರು ದಾಖಲಿಸಲಾಗಿದೆ. ಮುಂಬೈ ಅಪಘಾತವು ಪುಣೆಯಲ್ಲಿ ನಡೆದ ಪೋರ್ಷೆ ಗುದ್ದೋಡು ಪ್ರಕರಣವನ್ನು ಹೋಲುತ್ತದೆ.ಪುಣೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸಾವನ್ನಪ್ಪಿದರು.

.

Read More
Next Story